ಸರಣಿ ಹಂತಕ, ಅತ್ಯಾಚಾರಿ, ವಿಕೃತಕಾಮಿ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ
ಬೆಂಗಳೂರು, ಸೆಪ್ಟೆಂಬರ್ 29: ಸರಣಿ ಹಂತಕ, ಅತ್ಯಾಚಾರಿ, ವಿಕೃತಕಾಮಿ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ಖಾಯಂ ಆಗಿದೆ. ಈ ಮುಂಚೆ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆಗೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಕರ್ನಾಟಕ ಹೈಕೋರ್ಟ್ ಇಂದು ರದ್ದುಗೊಳಿಸಿದೆ. ಸದ್ಯ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ಅಪರಾಧಿ ಉಮೇಶ್ ರೆಡ್ಡಿಯನ್ನು ಸುಪ್ರೀಂಕೋರ್ಟ್ ನಿರ್ದೇಶನದಂತೆ ಗಲ್ಲುಶಿಕ್ಷೆಗೆ ಅಣಿ ಮಾಡಬೇಕಿದೆ.
ಒಟ್ಟು 18 ವರ್ಷ ಶಿಕ್ಷೆ ಅದರಲ್ಲಿ 10 ವರ್ಷ ಏಕಾಂತ ಸೆರೆಮನೆವಾಸ ಅನುಭವಿಸಿದ್ದೇನೆ, ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದೇನೆ, ನನಗೆ ಕ್ಷಮಾದಾನ ನೀಡಿ ಎಂದು ರಾಷ್ಟ್ರಪತಿಗಳಿಗೆ 2016ರಲ್ಲೇ ಉಮೇಶ್ ರೆಡ್ಡಿ ಮನವಿ ಸಲ್ಲಿಸಿದ್ದ. ಗಲ್ಲು ಶಿಕ್ಷೆಯಿಂದ ಕ್ಷಮಾದಾನ ನೀಡಲು ತಿರಸ್ಕರಿಸಿದ ರಾಜ್ಯ ಗೃಹ ಇಲಾಖೆ, ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳ ಕ್ರಮ ಕಾನೂನುಬಾಹಿರ ಎಂದು ಘೋಷಿಸಬೇಕು ಎಂದು ಅರ್ಜಿಯಲ್ಲಿ ಉಮೇಶ್ ರೆಡ್ಡಿ ಮನವಿ ಮಾಡಿಕೊಂಡಿದ್ದ. ಆದರೆ, ಕ್ಷಮಾದಾನ ಸಿಕ್ಕಿರಲಿಲ್ಲ, ನಂತರ ಗಲ್ಲುಶಿಕ್ಷೆ ಬದಲಿಗೆ ಜೀವನ ಪರ್ಯಂತ ಜೈಲುವಾಸಕ್ಕೆ ಕೋರಿ ಅರ್ಜಿ ಸಲ್ಲಿಸಿದ್ದ. ಈ ಅರ್ಜಿ ಇತ್ಯರ್ಥವಾಗುವ ತನಕ ಗಲ್ಲಿಗೇರಿಸದಂತೆ ಮನವಿ ಸಲ್ಲಿಸಿ ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್ ಸಲ್ಲಿಸಿದ್ದ ಮನವಿ ಪುರಸ್ಕರಿಸಿದ್ದ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿತ್ತು.
ವಕೀಲ ಜಗದೀಶ್ ಪ್ರತಿಕ್ರಿಯೆ: ''ರಾಷ್ಟ್ರಪತಿ ಕ್ಷಮಾದಾನ ಅರ್ಜಿಯಲ್ಲಿ ವಿಳಂಬವಾಗಿಲ್ಲ ಎಂದು ಕೋರ್ಟ್ ಹೇಳಿದೆ, ಇದು ಉದ್ದೇಶಪೂರ್ವಕವಾಗಿ ಪ್ರಕ್ರಿಯೆ ವಿಳಂಬವಾಗಿಲ್ಲ ಎಂಬುದನ್ನು ಪರಿಗಣಿಸಿದೆ. ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಲು ಆರು ವಾರಗಳ ಕಾಲಾವಕಾಶ ಸಿಕ್ಕಿದೆ. ಈ ಬಗ್ಗೆ ಕಕ್ಷಿದಾರರು(ಉಮೇಶ್ ರೆಡ್ಡಿ) ತೀರ್ಮಾನ ಕೈಗೊಳ್ಳಬೇಕಿದೆ. ಉಮೇಶ್ ರೆಡ್ಡಿ ತಾಯಿ ಗಂಗಮ್ಮ ಹಾಗೂ ಚಿಕ್ಕಪ್ಪ ಕುಟುಂಬಸ್ಥರ ಜೊತೆ ಈ ಬಗ್ಗೆ ಚರ್ಚಿಸಿ ಮುಂದಿನ ನಡೆ ಇಡುತ್ತೇವೆ. ಅವರು ಬಯಸಿದರೆ ಮೇಲ್ಮನವಿ ಸಲ್ಲಿಸುತ್ತೇವೆ,'' ಎಂದು ವಕೀಲ ಜಗದೀಶ್ ಅವರು ಖಾಸಗಿ ಸುದ್ದಿವಾಹಿನಿ ಜೊತೆ ಮಾತನಾಡುತ್ತಾ ಹೇಳಿದರು.
2021ರ ತೀರ್ಪು: ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಲು ಉಮೇಶ್ ರೆಡ್ಡಿ ಪರ ವಕೀಲರಾದ ಬಿ.ಎನ್. ಜಗದೀಶ್ ಅವರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಅರ್ಜಿ ಪುರಸ್ಕರಿಸಿದ ಹೈಕೋರ್ಟ್ ಗಲ್ಲು ಶಿಕ್ಷೆ ಖಾಯಂಗೊಳಿಸಿ, ನ್ಯಾ ಅರವಿಂದ್ ಕುಮಾರ್, ನ್ಯಾ. ಪ್ರದೀಪ್ ಸಿಂಗ್ ಅವರಿಂದ ನ್ಯಾಯಪೀಠ ಆದೇಶ ನೀಡಿದೆ.
ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಲು ಉಮೇಶ್ ರೆಡ್ಡಿ ಪರ ವಕೀಲರಿಗೆ 6 ವಾರಗಳ ಕಾಲಾವಕಾಶವಿದೆ. ಆದರೆ, ಈ ಹಿಂದೆಯೇ ಸುಪ್ರೀಂಕೋರ್ಟ್ ಗಲ್ಲುಶಿಕ್ಷೆ ಆದೇಶ ಎತ್ತಿ ಹಿಡಿದಿರುವುದರಿಂದ ಮತ್ತೊಮ್ಮೆ ಮನವಿ ಪುರಸ್ಕರಿಸುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಅತ್ಯಾಚಾರ, ಕೊಲೆ, ಚಿನ್ನಾಭರಣ ಕಳವು ಸೇರಿದಂತೆ ರಾಜ್ಯ ಹಾಗೂ ನೆರೆ ರಾಜ್ಯಗಳಲ್ಲಿ ಮಾಜಿ ಕಾನ್ಸ್ ಟೇಬಲ್ ಉಮೇಶ್ ರೆಡ್ಡಿ ವಿರುದ್ಧ 23 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿ, ಆರೋಪ ಸಾಬೀತಾಗಿದೆ. ಎಂಟು ವರ್ಷಗಳ ದೀರ್ಘ ವಿಚಾರಣೆಯ ಬಳಿಕ ಸೆಷನ್ಸ್ ಕೋರ್ಟ್ 2006ರ ಅಕ್ಟೋಬರ್ 26ರಂದು ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಕರ್ನಾಟಕ ಹೈಕೋರ್ಟ್ ಈ ತೀರ್ಪನ್ನು ಎತ್ತಿ ಹಿಡಿದಿತ್ತು.
ವಿಕೃತಕಾಮಿ ಹಾಗೂ ಸರಣಿ ಹಂತಕ ಉಮೇಶ ರೆಡ್ಡಿಗೆ ನೀಡಲಾಗಿದ್ದ ಗಲ್ಲು ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಸುಮಾರು 12 ವರ್ಷಗಳ ಬಳಿಕ ಸುಪ್ರೀಂಕೋರ್ಟ್‌ನಿಂದ ಮಂಗಳವಾರ ಮಹತ್ವದ ಆದೇಶ 2011ರಲ್ಲಿ ಹೊರಬಿದ್ದಿತ್ತು

1998ರಲ್ಲಿ ಉಮೇಶ್ ರೆಡ್ಡಿ ಜಯಶ್ರೀ ಎಂಬ ಮಹಿಳೆಯ ಕೈಯನ್ನು ಕಟ್ಟಿ ಅತ್ಯಾಚಾರ ಎಸಗಿದ್ದ, ಆ ಬಳಿಕ ಆಕೆಯನ್ನು ಕೊಂದು ಹಾಕಿ ಮನೆಯಲ್ಲಿದ್ದ ಆಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದ. ಇನ್ನೊಂದು ಮನೆಯಲ್ಲೂ ಇದೇ ರೀತಿಯ ಅಪರಾಧ ಎಸಗಲು ಯತ್ನಿಸಿದಾಗ ಆತನನ್ನು ಬಂಧಿಸಲಾಗಿತ್ತು.












Click it and Unblock the Notifications