ಸಿಡಿದೆದ್ದ ವಿ ಸೋಮಣ್ಣ: ಪಕ್ಷದಲ್ಲೇ ಉಳಿಸಿಕೊಳ್ಳಲು ಮುಂದುವರೆದ ಬಿಜೆಪಿ ನಾಯಕರ ಕಸರತ್ತು
ಬೆಂಗಳೂರು, ನವೆಂಬರ್ 27: ಎರಡು ಕ್ಷೇತ್ರದಲ್ಲಿ ಸೋಲು ಕಂಡ ಬಳಿಕ ಮಾಜಿ ಸಚಿವ ವಿ ಸೋಮಣ್ಣ ಬಿಜೆಪಿ ನಾಯಕರ ವಿರುದ್ಧ ಬಹಿರಂಗವಾಗಿ ಅಸಮಾಧಾನವನ್ನ ಹೊರಹಾಕಿದ್ದು, ಇದೀಗ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿರುವುದು ವಿ ಸೋಮಣ್ಣ ಅವರಿಗೆ ಮತ್ತಷ್ಟು ಅಸಮಾಧಾನಕ್ಕೆ ಕಾರಣಗಾಗಿದ್ದು, ಬಿಜೆಪಿ ತೊರೆಯಲು ಸಜ್ಜಾಗಿದ್ದಾರೆ ಎನ್ನಲಾಗಿದೆ.
ಹೌದು, ಅಮಿತ್ ಶಾ ನನ್ನ ಮನೆಗೆ ಬಂದು ಎರಡ್ಮೂರು ಗಂಟೆ ಜೀವ ತೆಗೆದ್ರೆ, ನಾನೇನ್ ಮಾಡ್ಬೇಕು ಎಂದು ಬಿಜೆಪಿಯ ಹಿರಿಯ ನಾಯಕ ವಿ.ಸೋಮಣ್ಣ ಸಿದ್ಧಗಂಗಾದ ಸಿದ್ದಲಿಂಗ ಶ್ರೀಗಳ ಎದುರಿನಲ್ಲೇ ತಮ್ಮ ಬೇಸರ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಪಕ್ಷದತ್ತ ಹೆಜ್ಜೆ ಹಾಕಿದ್ದಾರೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಜೊತೆಗೆ ಚರ್ಚೆ ನಡೆಸಿದ್ದು, ಬಿಜೆಪಿ ನಾಯಕರಿಗೆ ದೊಡ್ಡ ತಲೆನೋವಾಗಿದೆ.

ಇತ್ತ ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸಿರುವ ಕಾಂಗ್ರೆಸ್, ಇದೀಗ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನ ಗೆಲ್ಲುವ ನಿಟ್ಟಿನಲ್ಲಿ ಆಪರೇಷನ್ ಹಸ್ತದ ಮೂಲಕ ಬಿಜೆಪಿ ಹಾಗೂ ಜೆಡಿಎಸ್ ನಾಯಕರನ್ನ ಸೆಳೆದಿದ್ದು, ಇದೀಗ ಲಿಂಗಾಯತ ನಾಯಕ ವಿ ಸೋಮಣ್ಣ ಅವರನ್ನ ಕಾಂಗ್ರೆಸ್ ಪಕ್ಷಕ್ಕೆ ಕರೆತರುವ ನಿಟ್ಟಿನಲ್ಲಿ ಹಲವು ತಂತ್ರಗಾರಿಕೆಯನ್ನ ನಡೆಸಿದೆ.
ಈಗಾಗಲೇ ಅಮಿತ್ ಶಾ ಹಾಗೂ ಹೈಕಮಾಂಡ್ ನಾಯಕರ ವಿರುದ್ಧ ಅಸಮಾಧಾನ ಗೊಂಡಿರುವ ವಿ.ಸೋಮಣ್ಣ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರ ಬಗ್ಗೆ ಸಿದ್ಧಗಂಗಾದ ಸಿದ್ದಲಿಂಗ ಶ್ರೀಗಳ ಮುಂದೆ ತಮ್ಮ ನೋವು ತೋಡಿಕೊಂಡಿದ್ದಾರೆ. ಇತ್ತ ಬಿಜೆಪಿ ನಾಯಕರು ಸೋಮಣ್ಣ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ಮುಂದುವರೆಸಿದ್ದು, ಪ್ರತಿಷ್ಠಿತ ಮಠಮಾನ್ಯಗಳ ಮೂಲಕ ಮಾಜಿ ಸಚಿವ ವಿ ಸೋಮಣ್ಣ ಮನವೊಲಿಕೆಗೆ ಪ್ರಯತ್ನವನ್ನ ಬಿಜೆಪಿ ನಾಯಕರು ಮುಂದುವರೆಸಿದ್ದಾರೆ.

ಇತ್ತ ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿರುವ ಸೋಮಣ್ಣ ಅವರನ್ನು ಸಮಾಧಾನಪಡಿಸಲು ರಾಜ್ಯ ಬಿಜೆಪಿ ನಾಯಕರು ಲಿಂಗಾಯಿತ ಮಠಾಧಿಪತಿಗಳನ್ನ ಸಂಪರ್ಕಿಸಿ ಮಾತುಕತೆ ನಡೆಸಿದ್ದಾರೆ. ಹೈಕಮಾಂಡ್ ನಾಯಕರು ಸಹ ಸ್ವಾಮಿಜಿಗಳ ಜತೆ ಮಾತುಕತೆ ನಡೆಸಿದ್ದು, ಸೋಮಣ್ಣಗೆ ರಾಜಕೀಯವಾಗಿ ದುಡುಕಿನ ನಿರ್ಧಾರ ಮಾಡದಿರಲು ಹೇಳುವಂತೆ ಮನವಿ ಮಾಡಿದ್ದಾರೆ. ಚಿಕ್ಕಮಗಳೂರಿನ ಪೀಠದ ಮೂಲಕವು ಸೋಮಣ್ಣ ಮನವೊಲಿಕೆಗೆ ಯತ್ನ ನಡೆದಿದ್ದು, ಸೋಮಣ್ಣ ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ನಡುವಿನ ಸಂಧಾನ ಸೂತ್ರ ಸಿದ್ಧವಾಗಿದೆ.
ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಸೋಮಣ್ಣರನ್ನು ಸಂಪರ್ಕಸಿದ್ದಾರೆ. ಡಿಕೆ ಶಿವಕುಮಾರ್ ಆಪ್ತರು ಸೋಮಣ್ಣ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಸೋಮಣ್ಣ ಅವರು ಕಾಂಗ್ರೆಸ್ ಪಕ್ಷ ಸೇರ್ಪಡೆ ಕುರಿತು ಕೃಷ್ಣಪ್ಪ ಈಗಾಗಲೇ ಡಿಕೆ ಶಿವಕುಮಾರ್ ಹೊರತಾಗಿ ಇನ್ನಿತರ ಹಿರಿಯ ನಾಯಕರ ಜತೆ ಚರ್ಚೆ ಮಾಡಿದ್ದು, ಯಾವುದೇ ಕಾರಣಕ್ಕೂ ಸೋಮಣ್ಣ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬಾರದು ಎಂದಿದ್ದಾರೆ.
ಈಗಾಗಲೇ ಬಿಜೆಪಿ ನಾಯಕರ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿರುವ ವಿ ಸೋಮಣ್ಣ ಡಿಸೆಂಬರ್ 6 ರ ತುಮಕೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದು, ಪಕ್ಷದಲ್ಲಿಯೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ನಾಯಕರ ಮನವೊಲಿಕೆಗೆ ಪ್ರಯತ್ನಕ್ಕೆ ಮುಂದಾಗಿದ್ದು, ಸೋಮಣ್ಣ ಅವರು ಯಾವ ನಿರ್ಧಾರವನ್ನ ತೆಗೆದುಕೊಳ್ಳಲಿದ್ದಾರೆ ಎಂಬುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.












Click it and Unblock the Notifications