ಬಿಜೆಪಿಯಲ್ಲಿ ಬಣಬಡಿದಾಟ: ಒಂದೇ ಕಲ್ಲಿನಿಂದ ಮೂರು ಹಕ್ಕಿ ಹೊಡೆಯಲು ಮುಂದಾದ ಹೈಕಮಾಂಡ್
ಬೆಂಗಳೂರು,ಜನವರಿ 31: ಕರ್ನಾಟಕ ಬಿಜೆಪಿಯಲ್ಲಿ ಭುಗಿಲೆದ್ದಿರುವ ಭಿನ್ನಮತ ಯಾವುದೇ ಕಾರಣಕ್ಕೂ ತಣ್ಣಗಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಬಿಜೆಪಿಯಲ್ಲಿನ ಬಣ ಬಡಿದಾಟದಿಂದಾಗಿ ಕಮಲ ಪಾಳಯದ ಭವಿಷ್ಯಕ್ಕೆ ದೊಡ್ಡ ಕುತ್ತನ್ನು ತಂದಿದೆ. ರಾಜ್ಯಾಧ್ಯಕ್ಷರಾಗಿ ಬಿ ವೈ ವಿಜಯೇಂದ್ರ ನೇಮಕವಾದ ಬಳಿಕ ವಿರೋಧಿ ಬಣ ಯಡಿಯೂರಪ್ಪ ಅವರ ಕುಟುಂಬದ ವಿರುದ್ಧ ಅಸಮಾಧಾನ ವ್ಯಕ್ತಪಸಿದಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣ ಬಂಡೆದ್ದಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರ ವಿರುದ್ಧ ವಿವಿಧ ಸಮಾಜದ ಪ್ರಮುಖ ನಾಯಕರೇ ಬಂಡಾಯದ ಕಹಳೆಯನ್ನು ಊದಿರುವುದು ಬಿಜೆಪಿ ವರಿಷ್ಠರಿಗೆ ತಲೆನೋವು ತಂದಿದೆ. ಬಿಜೆಪಿ ಹಿರಿಯ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಬಹಿರಂಗವಾಗಿಯೇ ವಿಜಯೇಂದ್ರ ವಿರುದ್ಧ ಸಿಡಿದೆದ್ದಿದ್ದು, ಯತ್ನಾಳ್ ಬಣದ ಜೊತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಕುಮಾರ ಬಂಗಾರಪ್ಪ, ಶ್ರೀರಾಮುಲು ಹಾಗೂ ಸಂಸದ ಹಾಗೂ ಮಾಜಿ ಸಚಿವರಾದ ಡಾ.ಕೆ ಸುಧಾಕರ್ ಅವರು ಕೈ ಜೋಡಿದ್ದಾರೆ.

ಬಿಜೆಪಿಯಲ್ಲಿನ ಸದ್ಯದ ಪರಿಸ್ಥಿತಿಯಿಂದ ಎಲ್ಲ ಪ್ರಮುಖ ಸಮುದಾಯಗಳು ಕಮಲ ಪಡೆಯಿಂದ ದೂರ ಸರಿಯುತ್ತಿವೆ ಎಂಬ ಆತಂಕ ಕೇಸರಿ ನಾಯಕರಿಗೆ ಶುರುವಾಗಿದೆ. ಈ ಬೆಳವಣಿಗೆ ಬಿವೈ ವಿಜಯೇಂದ್ರಗೆ ದೊಡ್ಡ ಹಿನ್ನಡೆ ಅಂತಾನೇ ಹೇಳಲಾಗ್ತಿದೆ. ಇದು ಕರ್ನಾಟಕ ಬಿಜೆಪಿ ನಾಯಕತ್ವದ ಮೇಲೂ ಪರಿಣಾಮ ಬೀರಬಹುದು ಎನ್ನಲಾಗಿದೆ. ಈಗಾಗಲೇ ರಾಜ್ಯ ಬಿಜೆಪಿಯಲ್ಲಿನ ಸಮಸ್ಯೆಯಿಂದಾಗಿ ಬಿಜೆಪಿ ಹೈಕಮಾಂಡ್ ಈ ಎಲ್ಲಾ ಬೆಳವಣೆಗೆಗೆ ಬ್ರೇಕ್ ಹಾಕಲು ಮುಂದಾಗಿದೆ.
ಈಗಾಗಲೇ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವುದು ಬಹುತೇಕ ನಿಶ್ಚಿತ ಎನ್ನಲಾಗಿದೆ. ಇದೇ ಸಮಯವನ್ನು ಬಳಸಿಕೊಂಡು, ಪ್ರಮುಖವಾಗಿ, ಎರಡು ಬಣಗಳ ನಡುವಿನ ಭಿನ್ನಮತಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು, ಮತ್ತೆರಡು ಪ್ರಮುಖ ವಿಷಯವನ್ನು ಕೈಗೆತ್ತಿಕೊಳ್ಳಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ ಎಂದು ತಿಳಿದು ಬಂದಿದೆ. ಇನ್ನೂ ಬಿಜೆಪಿ ರಾಜ್ಯಾಧ್ಯಕ್ಷರ ಹುದ್ದೆಗೆ ಚುನಾವಣೆ ನಡೆದರೆ, ಸೋತ ಬಣಕ್ಕೆ ಹಿನ್ನಡೆಯಾಗುವುದು ಸಹಜ. ಅದಾದ ನಂತರ, ಮತ್ತೆ ಭಿನ್ನಮತೀಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಎನ್ನುವ ಭೀತಿ, ಹೈಕಮಾಂಡಿಗೆ ಎದುರಾಗಿದೆ. ಹಾಗಾಗಿ, ಎರಡೂ ಬಣವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಲು ಹೈಕಮಾಂಡ್ ನಿರ್ಧರಿಸಿದೆ.
ಬಿಜೆಪಿ ರಾಜ್ಯ ಉಸ್ತುವಾರಿಯಾಗಿ ರಾಧಾ ಮೋಹನ್ ದಾಸ್ ಅಗರವಾಲ್ ಅವರನ್ನು ನೇಮಕರಾದ ಬಳಿಕ ರಾಜ್ಯ ಬಿಜೆಪಿ ಘಟಕದಲ್ಲಿ ಅಷ್ಟೇನೂ ಪರಿಣಾಮವನ್ನು ಬೀರುತ್ತಿಲ್ಲ. ರಾಜ್ಯ ಬಿಜೆಪಿ ಬೆಳವಣೆಗೆಗಳ ಕುರಿತು ರಾಧಾ ಮೋಹನ್ ದಾಸ್ ಭೇಟಿಯಿಂದ ಇನ್ನಷ್ಟು ರಂಪ ರಾಮಾಯಣವಾಗಲು ಕಾರಣವಾಯಿತು. ಹಾಗಾಗಿ, ಈ ಬಾರಿ ಕೇಂದ್ರ ಕೃಷಿ ಸಚಿವ ಮತ್ತು ಮೋದಿ ಕ್ಯಾಬಿನೆಟಿನ ಚಾಣಾಕ್ಷ ರಾಜಕಾರಣಿ ಎಂದು ಕರೆಯಲಾಗುವ ಶಿವರಾಜ್‌ಸಿಂಗ್ ಚವ್ಹಾಣ್ ಅವರನ್ನು ಸಂಧಾನ ಸೂತ್ರದ ಮೂಲಕ ಬೆಂಗಳೂರಿಗೆ ಕಳುಹಿಸಲು ನಿರ್ಧರಿಸಲಾಗಿದೆ ಎನ್ನುವ ಮಾಹಿತಿಯಿದೆ. ರಾಜ್ಯಾಧ್ಯಕ್ಷರ ಬದಲಾವಣೆಯ ಜೊತೆಗೆ, ಕೋರ್ ಕಮಿಟಿಯಲ್ಲಿ ಬದಲಾವಣೆ ತರಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.
ಇನ್ನೂ ಬಿಜೆಪಿ ರಾಜ್ಯಾಧ್ಯಕ್ಷ ಚುನಾವಣೆಯಲ್ಲಿ ಸೋಲುವ ಬಣದ ಪ್ರಮುಖರನ್ನೂ ಕೋರ್ ಕಮಿಟಿಯಲ್ಲಿ ಸೇರಿಸಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ವಿಜಯೇಂದ್ರ, ಆರ್.ಅಶೋಕ್ ಬಳಿ ಪ್ರತ್ಯೇಕವಾಗಿ ಚರ್ಚೆ ನಡೆಸುವಂತೆ, ಶಿವರಾಜ್ ಸಿಂಗ್ ಅವರಿಗೆ ಸೂಚಿಸುವ ಸಾಧ್ಯತೆಯಿದೆ. ಇನ್ನೂ, ತಮಗೆ ಬೇಕಾದವರನ್ನು ಆಯ್ಕೆ ಮಾಡಲಾಗಿದೆ ಎನ್ನುವ ಆರೋಪವೂ ವಿಜಯೇಂದ್ರ ಅವರ ಮೇಲಿದೆ. ಹಾಗಾಗಿ, ಪದಾಧಿಕಾರಿಗಳ ಪಟ್ಟಿಯಲ್ಲೂ ಆಮೂಲಾಗ್ರ ಬದಲಾವಣೆ ತರಲು, ಹೈಕಮಾಂಡ್ ನಿರ್ಧರಿಸಿದೆ.
ಒಟ್ನಾಲಿ, ರಾಜ್ಯ ಬಿಜೆಪಿ ಮನೆಯೊಂದು ಮೂರು ಬಾಗಿಲಾಗಿದ್ದು, ವಿಜಯೇಂದ್ರ ಹಾಗೂ ಜನಾರ್ದನ ರೆಡ್ಡಿ ವಿರುದ್ಧ ಮಾಜಿ ಸಚಿವ ಶ್ರೀರಾಮುಲು ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದು, ಶ್ರೀರಾಮುಲು ಅವರನ್ನ ಅಸಮಾಧಾನ ಶಮನಗೊಳಿಸಲು ಹೈಕಮಾಂಡ್ ಮುಂದಾಗಿದೆ. ಅಲ್ಲದೇ ಬಿಜೆಪಿ ರಾಜ್ಯಾಧ್ಯಕ್ಷರ ಚುನಾವಣೆಯ ಜೊತೆಗೆ, ಕೋರ್ ಕಮಿಟಿಯಲ್ಲಿ ಮತ್ತು ಪದಾಧಿಕಾರಿಗಳ ಬದಲಾವಣೆಯನ್ನು ಮಾಡುವ ಮೂಲಕ ಒಂದೇ ಕಲ್ಲಿನಲ್ಲಿ ಮೂರು ಬದಲಾವಣೆಯನ್ನ ತಂದು ಬಿಜೆಪಿ ಭಿನ್ನಮತ ಶಮನಕ್ಕೆ ಹೈಕಮಾಂಡ್ ಮುಂದಾಗಿದೆ.












Click it and Unblock the Notifications