ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಮೊದಲ ಟಾಸ್ಕ್ ಕೊಟ್ಟ ಹೈಕಮಾಂಡ್!
ಬೆಂಗಳೂರು, ಅಕ್ಟೋಬರ್ 16 : 15 ಕ್ಷೇತ್ರಗಳ ಉಪ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮಹತ್ವದ ಜವಾಬ್ದಾರಿ ನೀಡಿದೆ. ಡಿಸೆಂಬರ್ 5ರಂದು ಉಪ ಚುನಾವಣೆಗೆ ದಿನಾಂಕ ನಿಗದಿಯಾಗಿದೆ.
ಉಪ ಚುನಾವಣೆ ಕುರಿತು ಚರ್ಚೆ ನಡೆಸಲು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ. ಸಿ. ವೇಣುಗೋಪಾಲ್ ನೇತೃತ್ವದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಸಭೆ ನಡೆಯಿತು. ಸಭೆಯಲ್ಲಿ ಹೈಕಮಾಂಡ್ ಸಂದೇಶವನ್ನು ಸಿದ್ದರಾಮಯ್ಯಗೆ ತಿಳಿಸಲಾಯಿತು.
ಆರು ಕ್ಷೇತ್ರಗಳಿಗೆ ಉಪ ಚುನಾವಣೆ ಅಭ್ಯರ್ಥಿ ಅಂತಿಮಗೊಳಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಅನರ್ಹ ಶಾಸಕರ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ಅಕ್ಟೋಬರ್ 22ರ ಬಳಿಕ ನಡೆಯಲಿದ್ದು, ಬಳಿಕ ಚುನಾವಣೆ ಕಾವು ಏರಲಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿ ಆಯ್ಕೆ ಮಾಡಲಾಗಿತ್ತು. ಬಳಿಕ ಹೈಕಮಾಂಡ್ ಅವರಿಗೆ ಮೊದಲ ಟಾಸ್ಕ್ ನೀಡಿದೆ. ಇದರಲ್ಲಿ ಸಿದ್ದರಾಮಯ್ಯ ಎಷ್ಟು ಮಟ್ಟಿಗೆ ಯಶಸ್ವಿಯಾಗಲಿದ್ದಾರೆ? ಕಾದು ನೋಡಬೇಕು.

ಉಪ ಚುನಾವಣೆಗೆ ಸಿದ್ದರಾಮಯ್ಯ ಬಾಸ್
17 ಅನರ್ಹಗೊಂಡ ಶಾಸಕರ ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಉಪ ಚುನಾವಣೆ ದಿನಾಂಕ ನಿಗದಿಯಾಗಿದೆ. ಉಪ ಚುನಾವಣೆಯ ಎಲ್ಲಾ ಹೊಣೆಯನ್ನು ಸಿದ್ದರಾಮಯ್ಯ ಹೆಗೆಲಿಗೆ ಹಾಕಲಾಗಿದೆ. ಪಕ್ಷದ ಸೋಲು-ಗೆಲುವು ಎಲ್ಲದಕ್ಕೂ ಸಿದ್ದರಾಮಯ್ಯ ಜವಾಬ್ದಾರರಾಗಲಿದ್ದಾರೆ. ಸಿದ್ದರಾಮಯ್ಯ ಸಹ ಈಗಾಗಲೇ ಚುನಾವಣಾ ತಯಾರಿ ಆರಂಭಿಸಿದ್ದು, ಕನಿಷ್ಠ 10 ಕ್ಷೇತ್ರದಲ್ಲಿ ಗೆಲ್ಲಬೇಕು ಎಂಬ ಟಾರ್ಗೆಟ್ ಹಾಕಿಕೊಂಡಿದ್ದಾರೆ.

ಕೆ. ಸಿ. ವೇಣುಗೋಪಾಲ್ ಹೇಳಿದ್ದೇನು?
ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಕೆ. ಸಿ. ವೇಣುಗೋಪಾಲ್, "ಸಿದ್ದರಾಮಯ್ಯಗೆ ಚುನಾವಣೆ ಉಸ್ತುವಾರಿ ವಹಿಸಲಾಗಿದೆ. ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗಬೇಕು. ತಮ್ಮ ಪ್ರಭಾವ ಬಳಸಿ ಹೆಚ್ಚಿನ ಸ್ಥಾನದಲ್ಲಿ ಜಯಗಳಿಸಬೇಕು" ಎಂದು ಹೇಳಿದರು.

ದೊಡ್ಡ ಜವಾಬ್ದಾರಿ
2018ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಿರೀಕ್ಷಿತ ಸಾಧನೆ ಮಾಡಿಲ್ಲ. ಲೋಕಸಭಾ ಚುನಾವಣೆಯಲ್ಲಿಯೂ ಪಕ್ಷ ಗೆದ್ದಿದ್ದು ಕೇವಲ 1 ಸೀಟು. ಕರ್ನಾಟಕದ ಮೈತ್ರಿ ಸರ್ಕಾರ ಪತನಗೊಳ್ಳಲು, ಲೋಕಸಭಾ ಚುನಾವಣೆ ಹಿನ್ನಡೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಣ ಎಂಬ ಆರೋಪಗಳಿವೆ. ಈ ಎಲ್ಲಾ ಆರೋಪದ ನಡುವೆಯೇ ಅವರಿಗೆ ಮಹತ್ವದ ಜವಾಬ್ದಾರಿ ನೀಡಲಾಗಿದೆ.

ಸೋನಿಯಾ ಗಾಂಧಿ ಭೇಟಿ
ಪ್ರತಿಪಕ್ಷ ನಾಯಕರಾಗಿ ಆಯ್ಕೆಯಾಗಿರುವ ಸಿದ್ದರಾಮಯ್ಯ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಭೇಟಿ ಮಾಡಲು ದೆಹಲಿಗೆ ತೆರಳಿದ್ದಾರೆ. ಬುಧವಾರ ಸೋನಿಯಾ ಭೇಟಿಗೆ ಕಾಲಾವಕಾಶ ಸಿಕ್ಕಿತ್ತು. ಕಳೆದ ಬಾರಿ ಸಿದ್ದರಾಮಯ್ಯ ದೆಹಲಿಗೆ ಹೋದಾಗ ಮೂರು ದಿನಗಳ ಕಾಲ ಸೋನಿಯಾ ಗಾಂಧಿ ಭೇಟಿಗಾಗಿ ಕಾದು ವಾಪಸ್ ಆಗಿದ್ದರು.












Click it and Unblock the Notifications