Lok Sabha Election 2024: ವಿಪಕ್ಷ ನಾಯಕ, ರಾಜ್ಯಾಧ್ಯಕ್ಷ ಆಯ್ಕೆ ಕುರಿತು ವರದಿ ಕೇಳಿದ ಹೈಕಮಾಂಡ್! ವರಿಷ್ಠರ ಲೆಕ್ಕಾಚಾರವೇನು?
ಬೆಂಗಳೂರು, ಸೆಪ್ಟೆಂಬರ್ 09: ಲೋಕಸಭಾ ಚುನಾವಣೆಗೆ ಭರ್ಜರಿಯಾಗಿ ಸಿದ್ದತೆ ನಡೆಸುತ್ತಿರುವ ಬಿಜೆಪಿ ಹೈಕಮಾಂಡ್ ಕೊನೆಗೂ ವಿಪಕ್ಷ ನಾಯಕ ಹಾಗೂ ರಾಜ್ಯಾಧ್ಯಕ್ಷ ಆಯ್ಕೆ ಕುರಿತು ಕೊನೆ ಹಂತದ ಚರ್ಚೆಗೆ ಮುಂದಾಗಿದೆ.
ಹೌದು, ಈಗಾಗಲೇ ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿ ಬರೋಬ್ಬರಿ ಮೂರು ತಿಂಗಳಾಗಿದ್ದು, ವಿಪಕ್ಷ ನಾಯಕನ ಆಯ್ಕೆಯ ಕುರಿತು ಬಿಜೆಪಿ ಹೈಕಮಾಂಡ್ ಬಾರೀ ಹಿಂದೆಟ್ಟು ಹಾಕಿದ್ದು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಠಕ್ಕರ್ ಕೊಡಲು ಮತ್ತೆ ಪಕ್ಷವನ್ನು ಮೆಲೆತ್ತ ಬಲ್ಲ ಸಮರ್ಥ ಸಾರಥಿ ಹಾಗೂ ವಿಪಕ್ಷ ನಾಯಕನ ಆಯ್ಕೆ ಕುರಿತು ಅಂತಿಮ ಹಂತದ ಸಿದ್ದತೆಗೆ ಹೈಕಮಾಂಡ್ ಮುಂದಾಗಿದ್ದು, ಆಯ್ಕೆ ಕುರಿತು ರಾಜ್ಯ ನಾಯಕರಿಗೆ ಹೈಕಮಾಂಡ್ ವರದಿ ಕೇಳಿದೆ.

ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡಿರುವ ಬಿಜೆಪಿಯನ್ನ ಮತ್ತೆ ಮೊದಲಿನಂತೆ ಕಟ್ಟಿ ಬೆಳೆಸಲು ಉತ್ತಮ ಸಾರಥಿಯ ಅನಿವಾರ್ಯತೆ ರಾಜ್ಯ ಬಿಜೆಪಿಯಲ್ಲಿ ಸೃಷ್ಟಿಯಾಗಿದೆ. ಅಲ್ಲದೇ ಕಾಂಗ್ರೆಸ್ ರಾಜ್ಯದಲ್ಲಿ 20 ಕ್ಷೇತ್ರಗಳನ್ನ ಗೆಲ್ಲುವ ಟಾರ್ಗೆಟ್ ಹಾಕಿಕೊಂಡಿದ್ದು, ಬಿಜೆಪಿಗೆ ಲೋಕಸಭಾ ಚುನಾವಣೆಯಲ್ಲಿಯೂ ಸೋಲಿನ ರುಚಿ ತೋರಿಸಲು ಕಾಂಗ್ರೆಸ್ ತಂತ್ರಗಾರಿಕೆಯನ್ನ ರೂಪಿಸಿದ್ದು, ಕಾಂಗ್ರೆಸ್ ನಾಯಕರಿಗೆ ಠಕ್ಕರ್ ಕೊಡಲು ಹಾಗೂ ಸರ್ಕಾರವನ್ನ ಪ್ರಶ್ನಿಸಿಲು ಉತ್ತಮ ನಾಯಕರ ಅಗತ್ಯವಿದೆ ಎಂದು ಬಿಜೆಪಿ ಹೈಕಮಾಂಡ್ ಲೆಕ್ಕಾಚಾರವನ್ನ ಹಾಕಿಕೊಂಡಿದೆ.
ರಾಜ್ಯಾಧ್ಯಕ್ಷ ಆಯ್ಕೆಗೆ ಬಿಜೆಪಿ ಹೈಕಮಾಂಡ್ ಲೆಕ್ಕಾಚಾರವೇನು!?
ಇತ್ತ ಬಿಜೆಪಿ ಪಕ್ಷವನ್ನ ಮೊದಲಿನಂತೆ ಸಜ್ಜುಗೊಳಿಸಲು ಉತ್ತಮ ಸಾರಥಿಯ ಅನಿವಾರ್ಯತೆ ಸೃಷ್ಠಿಯಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಾಕಷ್ಟು ಜನ ಆಕಾಂಕ್ಷಿ ಗಳು ಲಾಭಿ ನಡೆಸಿದ್ದಾರೆ. ಅಲ್ಲದೇ ಅಧ್ಯಕ್ಷ ಸ್ಥಾನದ ರೇಸ್ ನಲ್ಲಿ ಮಾಜಿ ಸಚಿವ ಆರ್ ಅಶೋಕ್, ಸಿಟಿ ರವಿ, ಶೋಭಾ ಕರಂದ್ಲಾಜೆ, ಬಿ ವೈ ವಿಜಯೇಂದ್ರ, ಸೋಮಣ್ಣ, ಶ್ರೀ ರಾಮುಲು ಹಾಗೂ ಕಾರ್ಕಳದ ಸುನಿಲ್ ಕುಮಾರ್ ಹೆಸರು ಗಳು ಸದ್ಯಕ್ಕೆ ಪ್ರಬಲವಾಗಿ ಕೇಳಿ ಬರುತ್ತಿವೆ.
ಲೋಕಸಭಾ ಚುನಾವಣೆ ದೃಷ್ಠಿಯಿಂದಾಗಿ ಹೈಕಮಾಂಡ್ ಹಲವು ಲೆಕ್ಕಾಚಾರಗಳನ್ನ ಹಾಕಿಕೊಂಡು ರಾಜ್ಯಾಧ್ಯಕ್ಷ ಆಯ್ಕೆ ಕುರಿತು ಚಿಂತನೆ ನಡೆಸಿದೆ. 2024 ಲೋಕಸಭಾ ಚುನಾವಣಾ ದೃಷ್ಟಿಯಿಂದ ಪ್ರತಿ ಸಮುದಾಯವನ್ನ ಸೆಳೆಯುವ ತಂತ್ರಗಾರಿಕೆಯನ್ನ ಆ ನಾಯಕರು ಹೊಂದಿರಬೇಕು. ಪಕ್ಷ ಸಂಘಟನೆ,ಕಾರ್ಯಕರ್ತರು ಮತ್ತು ನಾಯಕರ ನಡುವೆ ಸಮನ್ವಯ ಸಾಧಿಸುವುದು, ಅಲ್ಲದೇ ವಿಧಾನಸಭಾ ಚುನಾವಣಾ ಸೋಲು ಮರೆಸಿ ಗೆಲುವ ಸಾಧಿಸುವ ಲೆಕ್ಕಾಚಾರ, ಹಿಂದುತ್ವ, ಆರ್ ಆರ್ ಎಸ್ ನಾಯಕರ ನಡುವೆ ಉತ್ತಮ ಸಂಬಂಧವನ್ನ ಹೊಂದಿರುವ ನಾಯಕನನ್ನ ಸಾರಥಿಯನ್ನಾಗಿ ಮಾಡಬೇಕು ಎಂಬ ಲೆಕ್ಕಾಚಾರವನ್ನ ಬಿಜೆಪಿ ಹೈಕಮಾಂಡ್ ಹಾಕಿಕೊಂಡಿದೆ.
ವಿಪಕ್ಷ ನಾಯಕನ ಆಯ್ಕೆಗೆ ಬಿಜೆಪಿ ಹೈಕಮಾಂಡ್ ಲೆಕ್ಕಾಚಾರವೇನು?
ಇನ್ನೂ ವಿಪಕ್ಷ ನಾಯಕನ ಸ್ಥಾನಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, ಸಚಿವ ಆರ್ ಅಶೋಕ್ ಹಾಗೂ ಡಾ.ಸಿ ಎನ್ ಅಶ್ವತ್ಥ ನಾರಾಯಣ ಅವರ ಹೆಸರು ಕೇಳಿ ಬರುತ್ತಿದ್ದು, ಯಾರಿಗೆ ವಿಪಕ್ಷ ನಾಯಕನನ್ನಾಗಿ ಆಯ್ಕೆ ಮಾಡಬೇಕು ಎಂದು ಬಿಜೆಪಿ ಹೈಕಮಾಂಡ್ ಹಲವು ಲೆಕ್ಕಾಚಾರವನ್ನ ಹಾಕಿಕೊಂಡಿದೆ.
ಕಾಂಗ್ರೆಸ್ ಸರ್ಕಾರ ರಚನೆಯ ಆರಂಭದಿಂದಲೂ ಭ್ರಷ್ಟಾಚಾರ , ವರ್ಗಾವಣೆ ಹಾಗೂ 55% ಕಮಿಷನ್ ಆರೋಪ ಕೇಳಿ ಬರುತ್ತಿದ್ದು, ಈ ಎಲ್ಲಾ ಪ್ರಕರಣಕ್ಕೂ ಖಡಕ್ ಆಗಿ ಪ್ರಶ್ನಿಸುವ ಸಮರ್ಥ ನಾಯಕನ ಹುಡುಕಾಟದಲ್ಲಿ ಹೈಕಮಾಂಡ್ ಇದೆ ಎನ್ನಲಾಗಿದ್ದು, ವಿಪಕ್ಷ ನಾಯಕರಾದವರೂ ಶ್ಯಾಡೋ ಸಿಎಂ ಆಗಿ ಸರ್ಕಾರವನ್ನ ಕಟ್ಟಿಹಾಕುವ ತಂತ್ರಗಾರಿಕೆಯನ್ನ ಹೊಂದಿರಬೇಕು.
ಒಟ್ನಲಿ, ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಅನುಭವಿಸಿದ್ದು, ಲೋಕಸಭಾ ಚುನಾವಣೆಯಲ್ಲಿ ಈ ಹಿಂದೆ 2019 ರ ಚುನಾವಣೆಯಂತೆ ಹೆಚ್ಚು ಸ್ಥಾನಗಳನ್ನ ಗೆಲ್ಲುವ ಮೂಕಲ ಕಾಂಗ್ರೆಸ್ ಗೆ ಠಕ್ಕರ್ ಕೊಡಲು ಬಿಜೆಪಿ ಹೈಕಮಾಂಡ್ ವಿಪಕ್ಷ ನಾಯಕ ನ ಆಯ್ಕೆ ಹಾಗೂ ರಾಜ್ಯಾಧ್ಯಕ್ಷನ ಆಯ್ಕೆ ಕುರಿತು ಅಂತಿಮ ಹಂತದ ಕಸರತ್ತು ನಡೆಸಿದೆ ಎನ್ನಲಾಗಿದೆ.












Click it and Unblock the Notifications