ಕರ್ನಾಟಕ ಕಾಂಗ್ರೆಸಿನ ಹೊಸ ಉಸ್ತುವಾರಿ, ಇವರೇ ಕೆ.ಸಿ ವೇಣುಗೋಪಾಲ್!
ಕರ್ನಾಟಕ ರಾಜಕಾರಣದಲ್ಲಿ ಬಹುಬೇಗ ಗುರುತಿಸಿಕೊಂಡಿರುವ ಕಾಂಗ್ರೆಸಿನ ನೂತನ ಉಸ್ತುವಾರಿಯೇ ಈ ವೇಣುಗೋಪಾಲ್. ಅವರ ಹಿನ್ನಲೆ ಏನು? ರಾಜಕೀಯ ಅನುಭವಗಳೇನು? ಇಲ್ಲಿದೆ ವರದಿ..
ಬೆಂಗಳೂರು, ಮೇ 9: ಕೆ.ಸಿ ವೇಣುಗೋಪಾಲ್.. ಹೀಗೊಂದು ಹೆಸರು ಸದ್ಯ ಕರ್ನಾಟಕ ರಾಜಕಾರಣದಲ್ಲಿ ಸದ್ದು ಮಾಡುತ್ತಿದೆ. ಅದರಲ್ಲೂ ವೇಣುಗೋಪಾಲ್ ಹೆಸರು ಕರ್ನಾಟಕದ ಕಾಂಗ್ರೆಸ್ ಪಕ್ಷದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ.
ಅಧಿಕಾರರೂಢ ಕರ್ನಾಟಕ ಕಾಂಗ್ರೆಸ್ ನ ಉಸ್ತುವಾರಿ ಹೊಣೆ ಹೊತ್ತುಕೊಂಡ ವೇಣುಗೋಪಾಲ್ ಸಹಜವಾಗಿಯೇ ಸುದ್ದಿ ಕೇಂದ್ರಕ್ಕೆ ಬಂದಿದ್ದಾರೆ. ಇನ್ನೇನು ವರ್ಷದೊಳಗೆ ಕರ್ನಾಟಕ ವಿಧಾನಸಭೆಗೆ ಚುಣಾವಣೆ ನಡೆಯಲಿದ್ದು ವೇಣುಗೋಪಾಲ್ ಆಗಮನ ಮಾಧ್ಯಮ ಮತ್ತು ಜನರ ಕಣ್ಣು ಸೆಳೆದಿದೆ.
ಕರ್ನಾಟಕ ರಾಜಕಾರಣದಲ್ಲಿ ಬಹುಬೇಗ ಗುರುತಿಸಿಕೊಂಡಿರುವ ಕರ್ನಾಟಕ ಕಾಂಗ್ರೆಸಿನ ಲಗಾಮು ಈ ವೇಣುಗೋಪಾಲ್. ಹಾಗಾದರೆ ವೇಣುಗೋಪಾಲ್ ಯಾರು? ಅವರ ಹಿನ್ನಲೆ ಏನು? ಇಲ್ಲಿದೆ ವರದಿ..

ಅಲಪುಝ ಸಂಸದ
1963ರಲ್ಲಿ ಹುಟ್ಟಿದ 54 ರ ಹರೆಯದ ಕೆ.ಸಿ ವೇಣುಗೋಪಾಲ್ ಸದ್ಯ ಅಲಪುಝ ಲೋಕಸಭಾ ಕ್ಷೇತ್ರವನ್ನು ಮೂರನೇ ಬಾರಿಗೆ ಪ್ರತನಿಧಿಸುತ್ತಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಲ್ಲಿ ಇವರೂ ಒಬ್ಬರು. ಸದ್ಯ ಮೊನ್ನೆ ಏಪ್ರಿಲ್ 29ರಿಂದ ಕರ್ನಾಟಕ ಕಾಂಗ್ರೆಸಿನ ಉಸ್ತುವಾರಿ ಹೊತ್ತುಕೊಂಡಿದ್ದಾರೆ.

ಕಣ್ಣೂರಿನ ಕುವರ
ಮಂಗಳೂರಿಗೆ ಹೊಂದಿಕೊಂಡ ಕೇರಳದ ಕಣ್ಣೂರಿನಲ್ಲಿ ಹುಟ್ಟಿದ ಕೆಸಿ ವೇಣುಗೋಪಾಲ್ ರಾಜಕೀಯ ಬದುಕು ಆರಂಭವಾಗಿದ್ದು ವಿದ್ಯಾರ್ಥಿ ದೆಸೆಯಲ್ಲಿ. ಪಯ್ಯನೂರು ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಕೇರಳ ಸ್ಟೂಡೆಂಟ್ ಯೂನಿಯನ್ ಅಧ್ಯಕ್ಷರಾಗಿ ಗುರುತಿಸಿಕೊಂಡವರು ವೇಣುಗೋಪಾಲ್. ಮುಂದೆ ವೇಣುಗೋಪಾಲ್ ಕೇರಳ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ, ಕೇರಳ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಜವಾಬ್ದಾರಿ ನಿರ್ವಹಿಸಿದ್ದಾರೆ.

ಮೂರು ಬಾರಿ ಶಾಸಕ
ಮುಂದೆ ಅಲಪುಝ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದು 1996ರಲ್ಲಿ ಮೊದಲ ಬಾರಿಗೆ ಕೇರಳ ವಿಧಾನಸಭೆಯನ್ನು ಪ್ರವೇಶಿಸಿದ ವೇಣುಗೋಪಾಲ್, 2001, 2006ರಲ್ಲಿಯೂ ಕ್ಷೇತ್ರವನ್ನು ಗೆದ್ದುಕೊಂಡಿದ್ದರು. 2004-06ರ ಮಧ್ಯೆ ಒಮ್ಮನ್ ಚಾಂಡಿ ಸರಕಾರದಲ್ಲಿ ಮುಜುರಾಯಿ ಮತ್ತು ಪ್ರವಾಸೋದ್ಯಮ ಖಾತೆ ಸಚಿವರಾಗಿದ್ದರು. ಈ ಸಂದರ್ಭದಲ್ಲಿ ಹಲವು ನೆನಪಿನಲ್ಲಿ ಉಳಿಯುವಂತೆ ಪ್ರವಾಸೋದ್ಯಮ ಯೋಜನೆಗಳನ್ನು ಕೈಗೆತ್ತಿಕೊಂಡು ವೇಣುಗೋಪಾಲ್ ಗಮನ ಸೆಳೆದಿದ್ದರು.

ಲೋಕಸಭೆಗೆ, ಕೇಂದ್ರ ಸಚಿವ
ರಾಜ್ಯ ಸಚಿವರಾಗಿದ್ದ ವೇಣುಗೋಪಾಲ್ ಮುಂದೆ ಹತ್ತಿದ್ದು ದೆಹಲಿ ವಿಮಾನ. 2009ರಲ್ಲಿ ಅಲಪುಝ ಕ್ಷೇತ್ರದಿಂದಲೇ ಲೋಕಸಭೆಗೆ ಆಯ್ಕೆಯಾದರು ವೇಣುಗೋಪಾಲ್. ಯುಪಿಎ ಎರಡನೇ ಅವಧಿಯಲ್ಲಿ ನಾಗರೀಕ ವಿಮಾನಯಾನ ಮತ್ತು ಇಂಧನ ಖಾತೆಯ ರಾಜ್ಯ ದರ್ಜೆ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

ಕೊಲ್ಲೂರು ಮೂಕಾಂಬಿಕೆಯ ಭಕ್ತ
ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿಗೆ ಹೊಂದಿಕೊಂಡ ಕಣ್ಣೂರು ಕೆ.ಸಿ ವೇಣುಗೋಪಾಲ್ ಹುಟ್ಟೂರು. ಹೀಗಾಗಿ ಕರ್ನಾಟಕದ ಜತೆಗೂ ಅಲ್ಪ ಸ್ವಲ್ಪ ಒಡನಾಟ ಇಟ್ಟುಕೊಂಡಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ತಾನು ಕೊಲ್ಲೂರು ಮೂಕಾಂಬಿಕೆಯ ಭಕ್ತ ಹಾಗೂ ಇಲ್ಲಿಗೆ ಆಗಾಗ ಭೇಟಿ ನೀಡುತ್ತಿರುತ್ತೇನೆ ಎಂದಿದ್ದಾರೆ.

ವಾಲಿಬಾಲ್ ಪ್ಲೇಯರ್
ಕಾಲೇಜು ದಿನಗಳಲ್ಲಿ ವೇಣುಗೋಪಾಲ್ ವಾಲಿಬಾಲ್ ಪ್ಲೇಯರ್. ಕ್ಯಾಲಿಕಟ್ ವಿಶ್ವವಿದ್ಯಾಲಯ ಮತ್ತು ಪಯ್ಯನೂರು ಕಾಲೇಜು ಪರವಾಗಿ ಅವರು ವಾಲಿಬಾಲ್ ಪಂದ್ಯಗಳನ್ನಾಡಿದ್ದಾರೆ. ಹಾಗಂಥ ಓದಿನಲ್ಲೂ ಹಿಂದುಳಿದವರಲ್ಲ. ಉನ್ನತ ವ್ಯಾಸಾಂಗ ಮುಗಿಸಿರುವ ವೇಣುಗೋಪಾಲ್ ಮ್ಯಾಥಮ್ಯಾಟಿಕ್ಸ್ (ಗಣಿತ)ದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಕೆ. ಕರುಣಾಕರನ್ ಶಿಷ್ಯ
ಕೇರಳ ರಾಜಕಾರಣದ ದೊಡ್ಡ ಹೆಸರು, ಮಾಜಿ ಮುಖ್ಯಮಂತ್ರಿ ಕೆ ಕರುಣಾಕರನ್ ಪರಮಾಪ್ತ ಶಿಷ್ಯ ವೇಣುಗೋಪಾಲ್. ಯಾವತ್ತೂ ತಮ್ಮ ನಾಯಕನಿಗೆ ನಿಷ್ಠೆಯಿಂದಿದ್ದು ಅವರ ನೆರಳಿನಲ್ಲೇ ಗುರುತಿಸಿಕೊಂಡವರು ಅವರು. ಇದರಿಂದ ಬಹುಬೇಗ ಕೇರಳ ಕಾಂಗ್ರೆಸಿನಲ್ಲಿ ಪ್ರವರ್ಧಮಾನಕ್ಕೆ ಬಂದ ವೇಣುಗೋಪಾಲ್ ಮುಂದೆ ನೇರ ರಾಷ್ಟ್ರ ರಾಜಕಾರಣದಲ್ಲಿ ಗುರುತಿಸಿಕೊಂಡರು.

ಹಗರಣ ಬಯಲಿಗೆಳೆದ ವೇಣುಗೋಪಾಲ್
ಯುಪಿಎ ಎರಡನೇ ಅವಧಿಯಲ್ಲಿ ಮನಮೋಹನ್ ಸಿಂಗ್ ಸಂಪುಟದಲ್ಲಿ ವಿಮಾನಯಾನ ರಾಜ್ಯ ಖಾತೆ ಸಚಿವರಾಗಿದ್ದ ವೇಣುಗೋಪಾಲ್ ಇನ್ನೇನು ನಡೆಯಲಿದ್ದ ದೊಡ್ಡ ಹಗರಣವನ್ನು ಬಯಲಿಗೆಳೆದು ಎಲ್ಲರ ಹುಬ್ಬೇರಿಸಿದ್ದರು.
ದೆಹಲಿ-ಕೊಚ್ಚಿ-ತಿರುವನಂತಪುರಂ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಣುಗೋಪಾಲ್ ವಿಮಾನದಲ್ಲಿ ಖಾಲಿ ಇದ್ದ 23 ಸೀಟುಗಳನ್ನು ಕಂಡಿದ್ದರು. ಆದರೆ ಅದೇ ವಿಮಾನದಲ್ಲಿ ಹತ್ತಲು ಹೊರಟಾಗ ವೇಣುಗೋಪಾಲ್ ಗೆ ಟಿಕೆಟ್ ಇಲ್ಲ ಎನ್ನಲಾಗಿತ್ತು. ಕೊನೆಗೆ ವೇಣುಗೋಪಾಲ್ ತನಿಖೆಗೆ ಆದೇಶ ಮಾಡಿದ ನಂತರ ಹಗರಣ ಬೆಳಕಿಗೆ ಬಂದು ಇಬ್ಬರು ಅಧಿಕಾರಿಗಳು ಸಸ್ಪೆಂಡ್ ಆಗಿದ್ದರು.

ಉಸ್ತುವಾರಿ ಸವಾಲಿನ ಹುದ್ದೆ
ಈ ಹಿಂದೆ ಕರ್ನಾಟಕ ಕಾಂಗ್ರೆಸಿನ ಉಸ್ತುವಾರಿ ಹೊಣೆ ಹೊತ್ತಿದ್ದವರು ದಿಗ್ವಿಜಯ್ ಸಿಂಗ್. ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಪಕ್ಷದ ಮೇಲೆ ಹಿಡಿತ ಹೊಂದಿದ್ದ ಹಿರಿಯ ರಾಜಕಾರಣಿ ದಿಗ್ವಿಜಯ್ ಬಿಟ್ಟು ಹೋದ ಸ್ಥಾನದಲ್ಲಿ ವೇಣುಗೋಪಾಲ್ ಕೂತಿದ್ದಾರೆ. ಖಾಲಿ ಸ್ಥಳವನ್ನು ಸಮರ್ಥವಾಗಿ ತುಂಬುವ ಹೊಣೆ ಅವರ ಕೇರಳ ರಾಜಕಾರಣಿಯ ಮೇಲಿದೆ.
ದೇಶದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವ ಅತೀ ದೊಡ್ಡ ರಾಜ್ಯ ಕರ್ನಾಟಕ. ಸದ್ಯ ಅದನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಕೈ ಪಕ್ಷಕ್ಕಿದೆ. ರಾಜ್ಯದಲ್ಲಿ ಬಿಜೆಪಿಯತ್ತ ವಲಸೆ ಹೊರಟಿರುವ ಕಾಂಗ್ರೆಸ್ ರಾಜಕಾರಣಿಗಳು, ಅದರಿಂದ ಪಕ್ಷ ಎದುರಿಸುತ್ತಿರುವ ಮುಜುಗರವನ್ನು ಕೆಸಿ ವೇಣುಗೋಪಾಲ್ ತಡೆಯಬೇಕಾಗಿದೆ.
ಒಟ್ಟಾರೆ ಮುಂದಿನ ಬಾರಿ ಕರ್ನಾಟಕದಲ್ಲಿ ಕೈ ಪಕ್ಷ ಅಧಿಕಾರ ಹಿಡಿಯುವಂತೆ ಮಾಡುವುದು ವೇಣುಗೋಪಾಲ್ ಹೊಣೆಯಾಗಿದೆ.












Click it and Unblock the Notifications