Karnataka Weather: ಕರ್ನಾಟಕದ ಈ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆ
ಬೆಂಗಳೂರು, ಏಪ್ರಿಲ್ 11: ರಾಜ್ಯದಲ್ಲೆ ವರುಣಾನ ಅಬ್ಬರ ಜೋರಾಗಿದೆ. ಕರ್ನಾಟಕದಲ್ಲಿ ಮುಂಗಾರು ಪೂರ್ವ ಮಳೆಯು ದೇಶದ ಹವಾಮಾನದಲ್ಲಿ ಬದಲಾವಣೆಗೆ ಕಾರಣವಾಗಿದ್ದು, ಬಂಗಾಳಕೊಲ್ಲಿಯ ಮಧ್ಯಭಾಗದಲ್ಲಿ ಚಂಡಮಾರುತದ ಪ್ರಭಾವದಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಭರ್ಜರಿ ಮಳೆಯಾಗುತ್ತಿದೆ. ಈಗಾಗಲೇ ರಾಜ್ಯದಲ್ಲಿ ಕೆಲ ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಜನರು ಎಚ್ಚರಿಯಿಂದ ಇರುವಂತೆ ಭಾರತೀಯ ಹವಾಮಾನ ಇಲಾಖೆಯೂ ಮುನ್ಸೂಚನೆಯನ್ನ ನೀಡಿದೆ.
ಕಳೆದ ವರ್ಷಕ್ಕಿಂತ ಈ ವರ್ಷವೂ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಂಗಾರು ಪೂರ್ವ ಚಂಡಮಾರುತದ ಪರಿಣಾಮವಾಗಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಕಳೆದ ಕೆಲವು ದಿನಗಳಿಂದಲೇ ರಾಜ್ಯದಲ್ಲಿ ಹಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣ ಕಾಣಿಸಿಕೊಂಡದ್ದು, ಇದೀಗ ರಾಜ್ಯದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಬೆಂಗಳೂರು ಸೇರಿ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನಿಂದ ಗುಡುಗು, ಮಿಂಚು ಸಹಿತ ಮಳೆ ಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ರೂಪುಗೊಂಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ, ತುಮಕೂರಿನಲ್ಲಿ ಮಳೆಯಾಗಲಿದೆ. ಇನ್ನೂ ಸೋಮವಾರಪೇಟೆ, ಕಳಸ, ಪುತ್ತೂರು, ಹಿರೇಕೆರೂರು, ನಾಪೋಕ್ಲು, ಕಾರ್ಕಳ, ಕದ್ರಾ, ವಿಜಯಪುರ, ಕೊಪ್ಪ, ಕಮ್ಮರಡಿ, ಭಾಗಮಂಡಲ, ಮದ್ದೂರಿನಲ್ಲಿ ಮಳೆಯಾಗಿದೆ.
ಮುಂದಿನ ಒಂದು ವಾರದಲ್ಲಿ ರಾಜ್ಯದಾದ್ಯಂತ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಗಾಳಿಯ ವೇಗ ಗಂಟೆಗೆ 30-50 ಕಿಮೀ ತಲುಪುವ ಸಾದ್ಯತೆಯಿದ್ದು, ಕರಾವಳಿ, ಮಲೆನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಸಾಧಾರಣ ಮಳೆಯಾಗಲಿದ್ದು, ಉತ್ತರ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ತುಂತುರು ಮಳೆಯಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇಂದು ಮಂಗಳೂರಿನಲ್ಲಿ ಮಳೆ ಆರ್ಭಟ ಜೋರಾಗಿದೆ. ನಗರದ ವಿವಿಧೆಡೆ ಬೆಳಗ್ಗೆಯೇ ಗುಡುಗು ಸಹಿತ ಭಾರಿ ಮಳೆಯಾಗಿದೆ. ಸುಮಾರು ಒಂದು ಗಂಟೆಯಿಂದ ಎಡೆಬಿಡದೆ ವರ್ಷಧಾರೆ ಸುರಿದಿದೆ. ಇನ್ನೂ ದಿಢೀರ್ ಮಳೆಯಿಂದಾಗಿ ಸಾರ್ವಜನಿಕರು ಹೈರಾಣಾದರು. ದಿನನಿತ್ಯದ ಕೆಲಸಕ್ಕೆ ಹೋಗುವವರು, ವಿದ್ಯಾರ್ಥಿಗಳು ಪರದಾಡುವಂತಾಯಿತು. ಬೆಂಗಳೂರಿನಲ್ಲಿ ಮುಂಜಾನೆ ಮೋಡ ಕವಿದ ವಾತಾವರಣವಿದ್ದು, ನಿನ್ನೆ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಭರ್ಜರಿ ಮಳೆಯಾಗಿದೆ.
ಇನ್ನೂ ಕೊಪ್ಪಳದಲ್ಲೂ ಗುರುವಾರ ಸಂಜೆ ಗುಡುಗು ಸಮೇತ ಆಲಿಕಲ್ಲು ಮಳೆ ಸುರಿಯಿತು. ಸಂಜೆ ಐದು ಗಂಟೆಗೆ ಆರಂಭವಾದ ಮಳೆ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದೆ. ಅಂದಾಜು ಕಾಲು ಇಂಚು ದಪ್ಪದ ಆಲಿಕಲ್ಲುಗಳು ಬಿದ್ದಿವೆ.ಆಲಿಕಲ್ಲಿನ ರಭಸಕ್ಕೆ ಶೀಟಿನ ಮನೆಗಳು, ಕಬ್ಬಿಣದ ತಗಡಿನ ಮನೆಗಳಿಗೆ ಹಾನಿಯಾಗಿದೆ. ಮಕ್ಕಳು ಆಲಿಕಲ್ಲಿನ ಮಳೆ ಹನಿಗಳನ್ನು ಹಿಡಿದು ಸಂಭ್ರಮಿಸಿದ್ರೆ. ಇತ್ತ ಕಾರಟಗಿ ತಾಲೂಕಿನಲ್ಲಿ ಭತ್ತದ ಬೆಳೆ ಹಾನಿಗೀಡಾಗಿರುವ ಸಾಧ್ಯತೆ ಇದೆ.












Click it and Unblock the Notifications