ಪುತ್ತೂರು, ಹೊಸನಗರದಲ್ಲಿ ಗುಡುಗು ಸಹಿತ ಧಾರಾಕಾರ ಮಳೆ
ಬೆಂಗಳೂರು, ಫೆಬ್ರವರಿ 27: ಪುತ್ತೂರು ಹಾಗೂ ಹೊಸನಗರದಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಿದೆ.
ಮುಂದಿನ ಮೂರು ದಿನಗಳ ಕಾಲ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಕರಾವಳಿ ಭಾಗದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಪುತ್ತೂರಿನಲ್ಲಿ ಬೆಳಗ್ಗೆ 5-6 ಗಂಟೆಯವರೆಗೆ ಗುಡುಗು ಸಹಿತ ಮಳೆಯಾಗಿದೆ. ಫೆಬ್ರವರಿ ಕೊನೇ ವಾರದಲ್ಲಿ ಮಳೆ ಸುರಿದ ಮಾಹಿತಿ ಇಲ್ಲ. ಹೀಗಾಗಿ ಅಕಾಲಿಕ ಮಳೆ ಸುರಿದಿದೆ.
ಮಾರ್ಚ್ ಏಪ್ರಿಲ್ನಲ್ಲಿ ಮಳೆ ಸುರಿಯವುದು ವಾಡಿಕೆ. ಹೀಗಾಗಿ ಗುರುವಾರ ಸುರಿದಿರುವ ಮಳೆ ಅಕಾಲಿಕ ಎಂಬ ಚರ್ಚೆ ನಡೆಯುತ್ತಿದೆ.
ಭಾರತೀಯ ಹವಾಮಾನ ಇಲಾಖೆಯು ಫೆ.27-28 ರಂದು ಒಡಿಶಾದ ಅನೇಕ ಜಿಲ್ಲೆಗಳಲ್ಲಿ ಹಳದಿ ಎಚ್ಚರಿಕೆ ಘೋಷಿಸಿದ್ದು, ಸರ್ಕಾರ ಪರಿಹಾರ ಕಾರ್ಯಕ್ಕೆ ಮುಂದಾಗುವಂತೆ ಸೂಚಿಸಲಾಗಿದೆ.
"ಮುಂದಿನ 48 ಗಂಟೆಗಳಲ್ಲಿ ಅಧಿಕ ಮಳೆಯಾಗಲಿರುವುದು ಖಚಿತವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಲಿದೆ. ಇದೇ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಹಳದಿ ವಾರ್ನಿಂಗ್ ಘೋಷಣೆ ಮಾಡಿದ್ದೇವೆ" ಎಂದು ಭಾರತೀಯ ಹವಾಮಾನ ಇಲಾಖೆಯ ವಿಜ್ಞಾನಿ ಉಮಾ ಶಂಕರ್ ತಿಳಿಸಿದ್ದಾರೆ.

ಬೆಂಗಳೂರು ಹವಾಮಾನ ಹೇಗಿದೆ?
ಬೆಂಗಳೂರಲ್ಲಿ ಕಳೆದ ಒಂದು ದಿನದಿಂದ ಮೋಡಕವಿದ ವಾತಾವರಣವಿದ್ದು, ತಾಪಮಾನ ಮಾತ್ರ ಅಧಿಕವಿದೆ. ಹೀಗೆ ಗರಿಷ್ಠ ತಾಪಮಾನ ಏರಿಕೆಯಾದರೆ ಯಾರೂ ಕೂಡ ಮನೆಯಿಂದ ಹೊರಗೆ ಬಾರದಂತಹ ವಾತಾವರಣ ನಿರ್ಮಾಣವಾಗಲಿದೆ. ಪ್ರತ ವರ್ಷ ಮಳೆ ಹಾಗೂ ಚಳಿ ಎರಡು ಹೆಚ್ಚಿಸುತ್ತಿತ್ತು. ಆದರೆ ಈ ಬಾರಿ ಮಳೆಯೂ ಅಷ್ಟಾಗಿ ಬಂದಿಲ್ಲ, ಚಳಿಯೂ ಕೂಡ ಇರದೆ ಗರಿಷ್ಠ ತಾಪಮಾನ ಮಾತ್ರ ಏರಿಕೆಯಾಗುತ್ತಿದೆ.

ಬೀದರ್‌ನಲ್ಲಿ ಕನಿಷ್ಠ ಉಷ್ಣಾಂಶ ದಾಖಲು
ಬೀದರ್‌ನಲ್ಲಿ 15.8 ಡಿಗ್ರಿ ಸೆಕ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಇಷ್ಟು ದಿನ ಶಿವಮೊಗ್ಗದಲ್ಲಿ ಅತಿ ಕಡಿಮೆ ಉಷ್ಣಾಂಶ ಅಂದರೆ 14 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಆದರೆ ಶಿವಮೊಗ್ಗದಾದ್ಯಂತ ಮೋಡಕವಿದ ವಾತಾವರಣ ನಿರ್ಮಾಣವಾಗುತ್ತಿದ್ದು, ತಾಪಮಾನ ಹೆಚ್ಚಾಗಿದೆ.

24 ಗಂಟೆಗಳಲ್ಲಿ ಎಲ್ಲೆಲ್ಲಿ ಮಳೆ ಸಾಧ್ಯತೆ
ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದ ಕರಾವಳಿ ಭಾಗದಲ್ಲಿ ಮತ್ತಷ್ಟು ಮಳೆ ಬೀಳಲಿದೆ. ಕೊಡಗು, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಆಗುಂಬೆಯಲ್ಲಿ ಮಳೆಯಾಗಲಿದೆ. ಈಗಾಗಲೇ ಪುತ್ತೂರು ಮತ್ತು ಹೊಸನಗರದಲ್ಲಿ ಮಳೆ ಆರಂಭವಾಗಿದೆ.

ಒಡಿಶಾ, ಬಿಹಾರ, ಉತ್ತರಪ್ರದೇಶದಲ್ಲಿ ಮಳೆ
ಒಡಿಶಾ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಇಂದು ಭಾರೀ ಪ್ರಮಾಣದ ಅಕಾಲಿಕ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಗುಡುಗು ಸಹಿತ ಸುರಿದ ಮಳೆಗೆ ರಸ್ತೆಗಳು ಕೆರೆಯಂತಾಗಿದ್ದು ಸಾರಿಗೆ ವ್ಯವಸ್ಥೆ ಸಂಪೂರ್ಣವಾಗಿ ಸ್ತಬ್ಧವಾಗಿದೆ. ಅಲ್ಲದೆ, ರಾಜ್ಯದ ಹಲವೆಡೆ ವಿದ್ಯುತ್ ಸಂಪರ್ಕದಲ್ಲೂ ವ್ಯತ್ಯಯ ಉಂಟಾಗಿದ್ದು, ಹವಾಮಾನ ಇಲಾಖೆ ಪ್ರಸ್ತುತ ಹಳದಿ ಎಚ್ಚರಿಕೆ ಘೋಷಣೆ ಮಾಡಿದೆ.
ಒಡಿಶಾದ ಬೊಲಂಗಿರ್ ಮತ್ತು ಕಂಧಮಲ್ ಜಿಲ್ಲೆಗಳಲ್ಲಿ ಅತೀ ಹೆಚ್ಚು ಮಳೆ ದಾಖಲಾಗಿದೆ. ಇನ್ನೂ ಒಡಿಶಾದ ಸಾಂಸ್ಕೃತಿಕ ನಗರಿ ಪುರಿ, ಜಾರ್ಸುಗುಡಾ, ಸಂಬಲ್ಪುರ, ಬರ್ಗಾರ್, ಡಿಯೋಗರ್, ಕಿಯೋಂಜರ್, ಮಯೂರ್ ಬಂಜ್, ಬೌಂದ್, ಅಂಗುಲ್, ದೇನ್ಕನಲ್, ಬಲಸೋರ್, ಭದ್ರಕ್, ಜೈಪುರ, ಕೇಂದ್ರಾಪರ, ಜಗತ್ಸಿಂಗ್ಪುರ, ಕಟಕ್, ನಯಾಗರ್, ಕಂಧಮಲ್ ಮತ್ತು ಸುಂದರ್ಗರ್ ಜಿಲ್ಲೆಗಳಲ್ಲಿ ಫೆ.28ರಂದು ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.











Click it and Unblock the Notifications