ಅಕ್ಟೋಬರ್ 5ರಿಂದ ಎರಡು ದಿನ ಬೆಂಗಳೂರು ಸೇರಿ ರಾಜ್ಯಾದ್ಯಂತ ಭಾರಿ ಮಳೆ
ಬೆಂಗಳೂರು, ಅಕ್ಟೋಬರ್ 02: ರಾಜ್ಯದಲ್ಲಿ ಅಕ್ಟೋಬರ್ 5 ರಿಂದ ಎರಡು ದಿನ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಕ್ಷಿಣ ಕನ್ನಡ, ಉಡುಪಿ, ಉತ್ತ ಕನ್ನಡದಲ್ಲಿ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಇನ್ನು ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರದಲ್ಲಿ ಭಾರಿ ಮಳೆಯಾಗಲಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರುನಗರ, ತುಮಕೂರಿನಲ್ಲೂ ಮಳೆಯಾಗಲಿದೆ.
ಉತ್ತರ ಕರ್ನಾಟಕದ ಕೆಲ ಭಾಗ ಮತ್ತು ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ಉತ್ತಮ ಮಳೆ ಸುರಿದಿದ್ದು, ಗದಗ ಜಿಲ್ಲೆ ರೋಣ ತಾಲೂಕಿನಲ್ಲಿ ಸಿಡಿಲು ಬಡಿದು ಮಹಿಳೆಯೊಬ್ಬಳು ಮೃತಳಾಗಿದ್ದಾಳೆ.
ಇನ್ನು ಧಾರವಾಡ ಜಿಲ್ಲೆಯ ಹುಬ್ಬಳ್ಳಿ, ಧಾರವಾಡ, ಕಲಘಟಗಿ, ಹಾವೇರಿ ಜಿಲ್ಲೆಯ ಹಾವೇರಿ, ಹಾನಗಲ್, ಹಿರೇಕೆರೂರು, ಶಿಗ್ಗಾಂವಿ, ಸವಣೂರು, ಗದಗ ಜಿಲ್ಲೆಯ ಗದಗ, ರೋಣ, ಗಜೇಂದ್ಗಡ, ಶಿರಹಟ್ಟಿ, ಲಕ್ಷ್ಮೇಶ್ವರದಲ್ಲೂ ಗುಡುಗು ಸಹಿತ ಮಳೆ ಸುರಿದಿದೆ. ಕೊಡಗಿನ ಕೇಂದ್ರ ಮಡಿಕೇರಿ ಸೇರಿದಂತೆ ಸೋಮವಾರಪೇಟೆ, ಸುಂಟಿಕೊಪ್ಪ, ಕುಶಾಲನಗರ, ಚೆಟ್ಟಳ್ಳಿ, ಮಾದಾಪುರ, ಕಗ್ಗೋಡ್ಲು, ಮರಗೋಡು ಸೇರಿದಂತೆ ಹಲವು ಕಡೆಗಳಲ್ಲಿ ಮಳೆ ಸುರಿಯಿತು.
ಕಲಬುರಗಿ ಜಿಲ್ಲೆಯಲ್ಲಿ ಎರಡು ದಿನಗಳಿಂದ ಕಡಿಮೆಯಾಗಿದ್ದ ಮುಂಗಾರು ಶುಕ್ರವಾರ ಮತ್ತೆ ಪ್ರಬಲವಾಗಿದೆ. ಕಲಬುರಗಿ, ಸೇಡಂ, ಜೇವರ್ಗಿ, ಚಿತ್ತಾಪುರ, ಅಫಜಲಪೂರಗಳಲ್ಲಿ ನಿರಂತರ ಒಂದೂವರೆ ಗಂಟೆ ಗುಡುಗು, ಸಿಡಿಲು ಸಹಿತ ಮಳೆಯಾಗಿ.
ಇದರಿಂದ ನಗರ ಪ್ರದೇಶಗಳಲ್ಲಿರುವ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಬಂಗಾಳ ಕೊಲ್ಲಿಯಲ್ಲಿ ಉಂಟಾದ ಗುಲಾಬ್ ಚಂಡ ಮಾರುತ ಹಾಗೂ ಅದರಿಂದ ಮರುಹುಟ್ಟು ಪಡೆದ ಶಾಹಿನ್ ಚಂಡಮಾರುತದ ಪ್ರಭಾವ ಅರಬ್ಬಿ ಸಮುದ್ರದ ಮೇಲೂ ಆಗುತ್ತಿದೆ. ಪರಿಣಾಮ ಕರ್ನಾಟಕದ ಹಲವೆಡೆ ನಾಲ್ಕು ದಿನ ಮಳೆಯಾಗಲಿದೆ.
ಹಾಸನ, ಕೊಡಗು ಮತ್ತು ಚಿಕ್ಕಮಗಳೂರಿನಲ್ಲಿ ಅ. 2 ಮತ್ತು 3ರಂದು ಭಾರಿ ಮಳೆಯಾಗಲಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಚಿಕ್ಕಮಗಳೂರು ಮತ್ತು ಕೊಡಗಿಗೆ ಅ. 4 ಮತ್ತು 5 ರಂದು ಆರೆಂಜ್ ಅಲರ್ಟ್ ಘೋಷಿಸಿದೆ.
ದಕ್ಷಿಣ ಒಳನಾಡಿನ ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಲ್ಲಿ ಅ. 4 ಮತ್ತು 5 ರಂದು ಭಾರಿ ಮಳೆ ಸುರಿಯಲಿದ್ದು ಆರೆಂಜ್ ಅಲರ್ಟ್‌ನ್ನು ಹವಾಮಾನ ಇಲಾಖೆ ಘೋಷಿಸಿದೆ. ಮೈಸೂರು, ಚಾಮರಾಜನಗರ, ಮಂಡ್ಯಕ್ಕೆ ಅ. 2 ಮತ್ತು 3 ರಂದು ಯೆಲ್ಲೋ ಅಲರ್ಟ್ ಮಾತ್ರ ನೀಡಲಾಗಿದೆ.
ದಕ್ಷಿಣ ಒಳನಾಡಿನ ತುಮಕೂರು, ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರಕ್ಕೆ ಅ. 2, 4 ಹಾಗೂ 5 ರಂದು ಯೆಲ್ಲೋ ಅಲರ್ಟ್ ಇರಲಿದೆ.
ಉತ್ತರ ಒಳನಾಡಿನ ಕಲಬುರಗಿ, ಬೀದರ್, ರಾಯಚೂರು, ವಿಜಯಪುರ, ಧಾರವಾಡ, ಗದಗ, ಕೊಪ್ಪಳ ಸೇರಿದಂತೆ ಉತ್ತರ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಅಕ್ಟೋಬರ್ 2 ರಂದು ಸಾಧಾರಣ ಮಳೆಯಾಗಲಿದೆ.

ಹುಬ್ಬಳ್ಳಿಯಲ್ಲಿ ಸುರಿದ ಮಳೆ
ನಗರದಲ್ಲಿ ಶುಕ್ರವಾರ ಸಂಜೆ ವೇಳೆಗೆ ಭರ್ಜರಿ ಮಳೆಯಾಗಿದೆ. ಅರ್ಧ ಗಂಟೆಗಳ ಕಾಲ ಸುರಿದ ವರ್ಷಧಾರೆಗೆ ಕೆಲಹೊತ್ತು ಜನಜೀವನ ಅಸ್ತವ್ಯವಸ್ತವಾಯಿತು. ಹಳೆ ಹುಬ್ಬಳ್ಳಿಯ ಕೆಲವೆಡೆ ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ಪರದಾಡಿದರು.
ಸಂಜೆ 4.30ರ ಸುಮಾರಿಗೆ ಶುರುವಾದ ಮಳೆ 5.15ರವರೆಗೂ ಸುರಿಯಿತು. ಬೆಳಗ್ಗೆಯಿಂದ ಬಿಸಿಲ ವಾತಾವರಣವಿದ್ದರೂ ಮಧ್ಯಾಹ್ನದ ಬಳಿಕ ಏಕಾಏಕಿ ಮೋಡ ಕವಿದು ಭಾರಿ ಮಳೆ ಆಯಿತು. ಬಮ್ಮಾಪುರ ಸಝಾದ ಕೆಬಿ ನಗರದಲ್ಲಿ ಸುಮಾರು 15ಕ್ಕೂ ಹೆಚ್ಚಿನ ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತು. ಸನಿಹ ನಡೆಯುತ್ತಿರುವ ಚರಂಡಿ ಕಾಮಗಾರಿಯಿಂದಾಗಿ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ನೀರು ಮನೆಗೆ ಬಂದಿದೆ. ಅಲ್ಲದೆ, ತೆಗ್ಗು ಪ್ರದೇಶಗಳಲ್ಲಿನ ಮನೆಗಳ ಆವರಣಕ್ಕೆ ನೀರು ನುಗ್ಗಿ ತೊಂದರೆ ಅನುಭವಿಸಿದರು. ಸ್ಥಳಕ್ಕೆ ತಹಸೀಲ್ದಾರ್ ಶಶಿಧರ ಮಾಡ್ಯಾಳ ಅವರು ಭೇಟಿ ನೀಡಿ ಪರಿಶೀಲನೆ ಕೈಗೊಂಡರು.
ಹಲವೆಡೆ ಒಳಚರಂಡಿ ತುಂಬಿ ರಸ್ತೆ ಮೇಲೆ ಕೊಳಚೆ ನೀರು ಹರಿದಿದೆ. ಬಿಆರ್‌ಟಿಎಸ್ ರಸ್ತೆಯುದ್ದಕ್ಕೂ ಮಳೆ ನೀರು ನಿಂತಿತ್ತು. ಮಳೆಯಿಂದಾಗಿ ಜನಸಂಚಾರ ಅಸ್ತವ್ಯಸ್ತಗೊಂಡಿತು.

ಎಲ್ಲೆಲ್ಲಿ ಮಳೆ ಸುರಿದಿದೆ
ಕೃಷ್ಣರಾಜಪೇಟೆ, ಬರಗೂರು, ಮೈಸೂರು, ಕೃಷ್ಣರಾಜಸಾಗರ, ಚಾಮರಾಜನಗರ, ಕೊಳ್ಳೇಗಾಲ, ವಿಟ್ಲ, ಪಂಚನಹಳ್ಳಿ, ಶ್ರೀರಾಮಪುರ, ತಿಪಟೂರು, ಸುಳ್ಯ, ಹೊಸದುರ್ಗ, ಎಚ್‌ಡಿ ಕೋಟೆ, ಮಾಣಿ, ಬೆಳ್ತಂಗಡಿ, ಭಾಗಮಂಡಲ, ಅರಸೀಕೆರೆ, ಶ್ರವಣಬೆಳಗೊಳ, ಅಜ್ಜಂಪುರ, ಶಿರಾಳಕೊಪ್ಪದಲ್ಲಿ ಮಳೆಯಾಗಿದೆ.

ಬೆಂಗಳೂರು ಹವಾಮಾನ ವರದಿ
ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದ್ದು, 29 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಎಚ್‌ಎಎಲ್‌ನಲ್ಲಿ 28.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಬೆಂಗಳೂರು ನಗರದಲ್ಲಿ 28.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 21.7 ಡಿಗ್ರಿ ಸೆಲ್ಸಿಯಸ್ ಕ

ರಾಜ್ಯದ ವಾತಾವರಣ ಹೇಗಿರಲಿದೆ?
ನೈಋತ್ಯ ಮುಂಗಾರು ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ದುರ್ಬಲವಾಗಿದೆ. ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಹಾಗೂ ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ರಾಯಚೂರಿನಲ್ಲಿ 33.0 ಡಿಗ್ರಿ ಸೆಲ್ಸಿಯಸ್ ಅತಿ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಬೀದರ್‌ನಲ್ಲಿ 18.8 ಡಿಗ್ರಿ ಸೆಲ್ಸಿಯಸ್ ಅತಿ ಕನಿಷ್ಠ ಉಷ್ಣಾಂಶ ದಾಖಲಾಗಿದೆ.












Click it and Unblock the Notifications