ಕೋಟಾ, ಕುಂದಾಪುರ ಸೇರಿದಂತೆ ರಾಜ್ಯದ ಹಲವೆಡೆ ವರುಣನ ಆರ್ಭಟ
ಬೆಂಗಳೂರು, ಜೂನ್ 2: ಉಡುಪಿ ಜಿಲ್ಲೆಯ ಕೋಟಾ ಮತ್ತು ಕುಂದಾಪುರ ಸೇರಿದಂತೆ ಕರಾವಳಿ ಭಾಗದ ಹಲವೆಡೆ ಮತ್ತು ಕರ್ನಾಟಕ ರಾಜ್ಯದ ಅನೇಕ ಕಡೆ ಸೋಮವಾರ ಭಾರಿ ಮಳೆ ಸುರಿದಿದೆ.
ಕೋಟಾದಲ್ಲಿ 10 ಸೆ.ಮೀ ಮಳೆಯಾಗಿದ್ದರೆ, ಕುಂದಾಪುರದಲ್ಲಿ 7 ಸೆ.ಮೀ ಮಳೆಯಾಗಿದೆ.
ಇನ್ನೂ ಬೆಳಗಾವಿ, ಪಾವಗಡ, ನರಗುಂದ, ಚಿಕ್ಕೋಡಿ, ಗೋಕರ್ಣ, ಕೊಲ್ಲೂರು, ತಾಳಿಕೋಟೆ, ಜಮಖಂಡಿ, ಕಂಪ್ಲಿ, ಕೊಪ್ಪ, ಹೊಸಪೇಟೆಯಲ್ಲಿ ಸೋಮವಾರ ವರುಣನ ಆರ್ಭಟ ಜೋರಾಗಿತ್ತು.
ಶಿವಮೊಗ್ಗ, ಹಿರಿಯೂರು, ಕಾರವಾರ, ಕಾರ್ಕಳ, ದಾವಣಗೆರೆ, ಹರಿಹರ, ಬಾದಾಮಿ, ಹಾಸನ, ಚಿಕ್ಕೋಡಿ, ಆಗುಂಬೆ ಸೇರಿದಂತೆ ಹಲವೆಡೆ ಗುಡುಗು ಸಹಿತ ಧಾರಾಕಾರ ಮಳೆ ಸುರಿದಿದೆ.

ದಾವಣಗೆರೆಯಲ್ಲಿ ರಸ್ತೆಗಳು ಜಲಾವೃತ್ತ
ದಾವಣಗೆರೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕೆಲ ಗ್ರಾಮದ ರಸ್ತೆಗಳು ಜಲಾವೃತ್ತವಾಗಿವೆ. ರಸ್ತೆಯಲ್ಲಿ ನಿಂತಿದ್ದ ಕಾರುಗಳಲ್ಲಿ ನೀರು ತುಂಬಿವೆ. ಕೆಲವು ಮನೆಗಳಿಗೆ ನೀರು ನುಗ್ಗಿದೆ.

ಮಳೆಯಿಂದ ವಾಹನ ಸಂಚಾರ ಸ್ಥಗಿತ
ವರುಣನ ಆರ್ಭಟದಿಂದ ಚಿಕ್ಕೋಡಿಯ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಬಾದಾಮಿಯಲ್ಲಿ ಗುಡುಗು ಸಹಿತ ಧಾರಾಕಾರ ಮಳೆಯಿಂದಾಗಿ ಅಗಸ್ತ್ಯ ತೀರ್ಥ ಹೊಂಡ ಮೈತುಂಬಿದೆ.

ಮೀನುಗಾರರು ಸಮುದ್ರಕ್ಕೆ ತೆರಳದಂತೆ ಸೂಚನೆ
ಮುಂದಿನ 24 ಗಂಟೆಗಳಲ್ಲಿ ರಾಜ್ಯದ ಹಲವು ಕಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
ಮುಂದಿನ 48 ಗಂಟೆಗಳಲ್ಲಿ ಕರಾವಳಿ ಕರ್ನಾಟಕ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಅನೇಕ ಕಡೆ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಮೀನುಗಾರರು ಸಮುದ್ರಕ್ಕೆ ಹೋಗದಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ.

ಬೆಂಗಳೂರಿನಲ್ಲೂ ಮಳೆ ಸಾಧ್ಯತೆ
ಮುಂದಿನ 24 ಗಂಟೆಗಳಲ್ಲಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಮುಂದುವರೆಯಲಿದ್ದು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಸೋಮವಾರ ಗರಿಷ್ಠ 32 ಡಿಗ್ರಿ ಸೆಲ್ಸಿಯಸ್, ಕನಿಷ್ಠ 22.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.












Click it and Unblock the Notifications