Heavy Rain Alert: ಕೊಡಗಿನಲ್ಲಿ ಮುಂದುವರಿದ ಮಳೆ ಆರ್ಭಟ, ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಏರಿಕೆ
ಕೊಡಗು, ಜೂನ್ 26: ರಾಜ್ಯದ ವಿವಿಧೆಡೆ ಭಾರೀ ಮಳೆ ಸುರಿಯುತ್ತಿದ್ದು, ಕೊಡಗಿನಲ್ಲಿ ಬುಧವಾರವೂ ಭಾರೀ ಮಳೆ ಆರ್ಭಟ ಮುಂದುವರಿದಿದೆ. ಕೆಲವು ದಿನಗಳಿಂದ ಬರುತ್ತಿರುವ ಅತ್ಯಧಿಕ ಮಳೆಯಿಂದಾಗಿ ಇಲ್ಲಿ ಜನ ಜೀವನ ಅಸ್ತವೆಸ್ತವಾಗಿದೆ. ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಏರಿಕೆ ಆಗಿದೆ.
ಮಡಿಕೇರಿ, ಸೋಮವಾರಪೇಟೆ ಸೇರಿದಂತೆ ಕೊಡಗಿನ ಬಹುತೇಕ ಭಾಗಗಳಲ್ಲಿ ಮಂಗಳವಾರ ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿದಿದೆ. ಇಲ್ಲಿ ಮುಂಗಾರು ಬಿರುಸುಗೊಂಡಿದ್ದು, ಇಂದು ಮತ್ತು ಗುರುವಾರ ಎರಡು ದಿನ ಕೊಡಗು ಜಿಲ್ಲೆಗೆ 'ಯೆಲ್ಲೋ ಅಲರ್ಟ್' ನೀಡಲಾಗಿದೆ.

ಮಡಿಕೇರಿ ಇನ್ನಿತರ ಭಾಗಗಳಲ್ಲಿ ಮಳೆ ಹೆಚ್ಚಾಗಿದ್ದು, ಇಲ್ಲಿಂದ ಬರುವ ನೀರು ಹಾರಂಗಿ ಜಲಾಶಯಕ್ಕೆ ಸೇರುತ್ತದೆ. ಅಲ್ಲಿನ ಒಳಹರಿವಿನ ಮಟ್ಟ 500 ಕ್ಯೂಸೆಕ್ ದಾಟಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಸೋಮವಾರಪೇಟೆಯಲ್ಲಿ 20ಮಿ.ಮೀ. ಮಳೆ
ಎರಡು ದಿನದಿಂದ ಜೋರು ಮಳೆ ಆಗಿದೆ. ಸೋಮವಾರಪೇಟೆಯಲ್ಲಿ 20 ಮಿಲಿ ಮೀಟರ್ ಮಳೆ ದಾಖಲಾಗಿದೆ. ಇಲ್ಲಿ ನದಿ ನೀರು ಉಕ್ಕಿ ಹರಿಯುತ್ತಿದ್ದು, ಅತ್ಯಧಿಕ ಪ್ರಮಾಣದಲ್ಲಿ ಮಳೆ ಸುರಿಯುತ್ತಲೇ ಇದೆ. ಜನರು ಮನೆಯಿಂದ ಹೊರ ಬರದಂತಹ ಸ್ಥಿತಿ ಜಿಲ್ಲೆಯಾದ್ಯಂತ ನಿರ್ಮಾಣವಾಗಿದೆ.
ಇಂದು ಬುಧವಾರ ಬೆಳಗ್ಗೆಯಿಂದಲೇ ಮಳೆ ಆರಂಭವಾಗಿದೆ. ಕೆಲವೆಡೆ ಸಾಧಾರಣ ಮಳೆ ಆದರೆ, ಇನ್ನೂ ಹಲವೆಡೆ ಭಾರೀ ಮಳೆ ಆಗುತ್ತಿದೆ. ಮುಂದಿನ 48 ಗಂಟೆಗಳ ಕಾಲ ಇದೇ ರೀತಿ ಮಳೆ ಆಗಲಿದ್ದು, ಶುಕ್ರವಾರದ ಹೊತ್ತಿಗೆ ಮಳೆ ಇಳಿಕೆ ಆಗುವ ಲಕ್ಷಣಗಳು ಇವೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕೇವಲ ಕೊಡಗು ಮಾತ್ರವಲ್ಲದೇ ರಾಜ್ಯದ ಇತರ ಜಿಲ್ಲೆಗಳಲ್ಲೂ ಮುಂಗಾರು ಬಿರುಸುಗೊಂಡಿದ್ದು, ಇದಕ್ಕೆ ಹವಾಮಾನದಲ್ಲಿ ವೈಪರಿತ್ಯಗಳೇ ಕಾರಣ ಎಂದು ಹವಾಮಾನ ತಜ್ಞ ಸಿ.ಎಸ್ ಪಾಟೀಲ್ ಹೇಳಿದ್ದಾರೆ.
ಕೊಡಗು ಜೊತೆಗೆ ಕರಾವಳಿಗೆ ಭಾರೀ ಮಳೆ
ಕೊಡಗು ಜೊತೆಗೆ ಬೆಳಗಾವಿ, ಹಾವೇರಿ, ಗದಗ, ಬಾಗಲಕೋಟೆಗಳಲ್ಲಿ ಹಗುರದಿಂದ ಸಾಧಾರಣ ಮಳೆ ಆಗಲಿದೆ. ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಅತ್ಯಧಿಕ ಮಳೆ ಸುರಿಯಲಿದೆ. ಗಾಳಿಯ ಬೀಸುವಿಕೆಯ ವೇಗವು ಪ್ರತಿ ಗಂಟೆಗೆ ಗರಿಷ್ಠ 55 ಕಿಲೋ ಮೀಟರ್‌ವರೆಗೆ ಬೀಸಲಿದೆ. ಹೀಗಾಗಿ ಮೀನುಗಾರರಿಗೆ ಮೀನುಗಾರಿಕೆಗೆ ಸಮುದ್ರಕ್ಕೆ ಇಳಿಯದಂತೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ.
ಶಿವಮೊಗ್ಗ, ಚಾಮರಾಜನಗರ, ಹಾಸನ, ಚಿತ್ರದುರ್ಗ ಭಾಗದಲ್ಲೂ ಅತ್ಯಧಿಕ ಮಳೆ ಸುರಿಯುವ ಸಾಧ್ಯತೆ ಇದೆ. ಈ ವಾರಾಂತ್ಯಕ್ಕೆ ರಾಜ್ಯದಲ್ಲಿ ಮಳೆ ತುಸು ಇಳಿಕೆ ಆಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications