Karnataka Rain: ಗುಡುಗು-ಮಿಂಚು ಆಲಿಕಲ್ಲು ಸಹಿತ ಮಳೆ ಅಬ್ಬರ: ಈ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ
ರಾಜ್ಯದಲ್ಲಿ ಬೇಸಿಗೆಯಲ್ಲೇ ಮಳೆಗಾಲ ಆರಂಭವಾಗಿದೆ! ಹಲವು ಜಿಲ್ಲೆಗಳಿಗೆ ಪೂರ್ವ ಮುಂಗಾರು ಮಳೆಯ ಆಶೀರ್ವಾದ ಸಿಕ್ಕಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಳೆದ ವಾರಾಂತ್ಯದಿಂದ ವ್ಯಾಪಕ ಮಳೆಯಾಗುತ್ತಿದೆ. ಕೆಲವು ಕಡೆ ಸಾಧಾರಣ ಮಳೆಯಾದರೆ ಇನ್ನೂ ಕೆಲವು ಕಡೆಗಳಲ್ಲಿ ಭಾರಿ ಮಳೆಯೇ ಆಗಿದೆ. ಮಂಗಳವಾರ ಕೂಡ ರಾಜ್ಯದ ಹಲವು ಜಿಲ್ಲೆಗಳಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಮಂಗಳವಾರ ಬೆಳಗಾವಿ, ಹಾವೇರಿ, ಬಳ್ಳಾರಿ, ಚಿಕ್ಕಮಗಳೂರು, ಕೊಡಗು, ಗದಗ, ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಧಾರವಾಡ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಆಲಿಕಲ್ಲು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸಿಡಿಲು, ಗುಡುಗು, ಮಿಂಚಿನ ಅಬ್ಬರ ಜೋರಾಗಿರಲಿದ್ದು ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಮನವಿ ಮಾಡಿದೆ.

ಧಾರವಾಡ, ಹುಬ್ಬಳ್ಳಿ, ದಾಂಡೇಲಿ, ಶಿರಸಿ, ಕಾರವಾರ, ಅಂಕೋಲಾ, ಗೋಕರ್ಣ, ಕುಮುಟಾ, ಹೊನ್ನಾವರ, ಮಂಗಳೂರು, ಮುರುಡೇಶ್ವರದಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯಲ್ಲಿ ತಿಳಿಸಿದೆ.
ಮುನ್ನೆಚ್ಚರಿಕೆ ವಹಿಸುವಂತೆ ಮನವಿ
ಮಿಂಚು & ಗುಡುಗು ಸಿಡಿಲಿನಿಂದ ಎಚ್ಚರವಾಗಿರಬೇಕು ಎಂದು ಸಾರ್ವಜನಿಕರಿಗೆ ತಿಳಿಸಿದೆ. ಸುರಕ್ಷತೆಯ ಕ್ರಮಗಳನ್ನು ತಿಳಿಸುವ ವಿಡಿಯೋವನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
ಗುಡಗು ಮಿಂಚಿನ ಸಂದರ್ಭದಲ್ಲಿ ಸಾರ್ವಜನಿಕರು ಮನೆಯೊಳಗೆ ಇರಬೇಕು, ಕಿಟಕಿ ಮತ್ತು ಬಾಗಿಲುಗಳನ್ನು ಮುಚ್ಚಿ, ಪ್ರಯಾಣ ಮಾಡುವುದನ್ನು ತಪ್ಪಿಸಿ ಎಂದು ಸೂಚಿಸಿದೆ. ಯಾವುದೇ ಕಾರಣಕ್ಕೂ ಮರಗಳ ಕೆಳಗೆ ನಿಲ್ಲಬಾರದು. ಎಲೆಕ್ಟ್ರಿಕ್ ಅಥವಾ ಎಲೆಕ್ಟ್ರಾನಿಕ್ ಉಪಕರಣಗಳನ್ನು ಅನ್‌ಪ್ಲಗ್ ಮಾಡಬೇಕು, ನೀರಿನ ಮೂಲಗಳಿಂದ ದೂರ ಇರಬೇಕು ಎಂದು ತಿಳಿಸಿದೆ. ವಿದ್ಯುತ್‌ನಿಂದ ಚಲಿಸುವ ಎಲ್ಲಾ ಉಪಕರಣಗಳಿಂದ ದೂರ ಇರಬೇಕು, ಪ್ರಯಾಣ ಮಾಡುತ್ತಿದ್ದರೆ ಎಚ್ಚರಿಕೆಯಿಂದ ವಾಹನ ಚಾಲನೆ ಮಾಡುವಂತೆ ತಿಳಿಸಿದೆ.
ಬುಧವಾರವೂ ವ್ಯಾಪಕ ಮಳೆ
ಮಾರ್ಚ್ 26ರಂದು ಕೂಡ ರಾಜ್ಯದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಗುಡುಗು, ಮಿಂಚು ಮತ್ತು ಬಿರುಗಾಳಿ ಬೀಸುವ ಸಾಧ್ಯತೆ ಇದ್ದು, ಗಾಳಿಯ ವೇಗೆ ಗಂಟೆಗೆ 30-40 ಕಿಮೀ ತಲುಪುವ ಸಾದ್ಯತೆಯಿದೆ ಎಂದು ತಿಳಿಸಿದೆ. ಕರಾವಳಿ, ಮಲೆನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದು, ಉತ್ತರ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ತುಂತುರು ಮಳೆಯಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯಲ್ಲಿ ತಿಳಿಸಿದೆ.












Click it and Unblock the Notifications