Rain News: ಬೀದರ್ ಜಿಲ್ಲೆಯ ಹಲವು ಕಡೆಗಳಲ್ಲಿ ಭಾರಿ ಮಳೆ; ವಿಡಿಯೋ ನೋಡಿ
ಕರ್ನಾಟದಲ್ಲಿ ಅವಧಿಗೂ ಮುನ್ನವೇ ಮುಂಗಾರು ಆರಂಭವಾಗುವ ಮುನ್ಸೂಚನೆ ಇದೆಯಾ ಎನ್ನುವ ಅನುಮಾನ ಮೂಡುತ್ತಿದೆ. ಕಳೆದ ಬುಧವಾರದಿಂದ ರಾಜ್ಯದ ಒಂದಿಲ್ಲೊಂದು ಕಡೆ ಮಳೆಯಾಗಿರುವ ಬಗ್ಗೆ ವರದಿಯಾಗುತ್ತಿದೆ. ಶನಿವಾರ ಕಲಬುರಗಿ ನಗರದಲ್ಲಿ ಲಘು ಮಳೆಯಾಗಿದ್ದರೆ. ಭಾನುವಾರ ಬೀದರ್ ಜಿಲ್ಲೆಯ ಹಲವು ಕಡೆಗಳಲ್ಲಿ ಉತ್ತಮ ಮಳೆಯಾಗಿದೆ.
ಬೀರ್ ಜಿಲ್ಲೆಯ ಔರಾದ, ಭಾಲ್ಕಿ, ಬೀದರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆಯಾಗಿದೆ. ಭಾರಿ ತಾಪಮಾನವಿರುವ ಬೀದರ್ ನಲ್ಲಿ ಬೇಸಿಗೆಯಲ್ಲಿ ಮಳೆಯಾಗಿರುವುದು ಜನರಲ್ಲಿ ಸಂತಸ ಮೂಡಿಸಿದೆ.

ಮಲಚಾಪುರದಲ್ಲಿ 34 ಮಿಮೀ ಮಳೆಯಾಗಿರುವ ಬಗ್ಗೆ ವರದಿಯಾಗಿದ್ದು ಅತಿ ಹೆಚ್ಚು ಮಳೆಯಾದ ಪ್ರದೇಶ ಎನಿಸಿಕೊಂಡಿದೆ. ಬೀದರ್ ನಗರದಲ್ಲಿ 28 ಮಿಮೀ ಮಳೆಯಾಗಿದೆ. ಬೀದರ್ ದಕ್ಷಿಣ ಭಾಗದಲ್ಲಿ 25 ಮಿಮೀ ಮಳೆ ಸುರಿದಿದೆ.
ಜೋಳದಬ್ಕಾ 21 ಮಿ.ಮೀ, ಆಣದೂರು 20.5 ಮಿ.ಮೀ, ಧೂಪತಮಹಾಗಾಂವ್ 17.5ಮಿ.ಮೀ, ಕೋಲಾರ್ಕೆ 17.5 ಮಿ.ಮೀ, ಮರಖಾಲ್ 13ಮಿ.ಮೀ, ಕಪಲಾಪುರ 13 ಮಿ.ಮೀ, ಅಮಲಾಪುರ 12 ಮಿಮೀ, ಬೋಂತಿ 10.5 ಮಿ.ಮೀ, ಭಂಡಾರಕುಂಠ 10.5 ಮಿ.ಮೀ, ಕೌತಾ 10 ಮಿ.ಮೀ ಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರದ ವರದಿಯಲ್ಲಿ ಮಾಹಿತಿ ನೀಡಿದೆ.
ಭಾನುವಾರ ರಾತ್ರಿ ಕೂಡ ಬೀದರ್ ಜಿಲ್ಲೆ ಮತ್ತು ಗಡಿಭಾಗಕ್ಕೆ ಹೊಂದಿಕೊಂಡಿರುವ ತೆಲಂಗಾಣದ ಹಲವು ಕಡೆಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
Bidar rains this evening
— Karnataka Weather (@Bnglrweatherman) March 17, 2024
The sound of the rain 🌧️☔ & the joy of updating it can't be expressed in words ❤️🤌🫰#KarnatakaRains https://t.co/mG41sMjhjx pic.twitter.com/6QjrYtkKkc
ರಾಜ್ಯದಲ್ಲಿ ದಿನವೂ ಮಳೆ!
ಒಂದು ಕಡೆ ರಾಜ್ಯದಲ್ಲಿ ಬಿಸಿಲು ತೀವ್ರವಾಗಿದೆ, ಮತ್ತೊಂದು ಕಡೆ ಸುಡುವ ಬಿಸಿಲಿನ ನಡುವೆಯೂ ಕಾದ ಹೆಂಚಿನ ಮೇಲೆ ನೀರು ಚಿಮುಕಿಸಿದಂತೆ ಮಳೆಯಾಗುತ್ತಿದೆ. ಕಳೆದ ಬುಧವಾರದಿಂದ ಭಾನುವಾರದವರೆಗೆ ದಿನಕ್ಕೆ ಒಂದೊಂದು ಜಿಲ್ಲೆಯಲ್ಲಿ ಮಳೆಯಾಗುತ್ತಿದೆ.
ಬುಧವಾರ ಕೊಡಗು, ಗುರುವಾರ ಚಿಕ್ಕಮಗಳೂರು, ಶುಕ್ರವಾರ ಮೈಸೂರು, ಶನಿವಾರ ಕಲಬುರಗಿ ಜಿಲ್ಲೆಯಗಳಲ್ಲಿ ಮಳೆಯಾಗಿದ್ದರೆ. ಭಾನುವಾರ ಬೀದರ್ ಜಿಲ್ಲೆಯ ಹಲವು ಕಡೆಗಳಲ್ಲಿ ಮಳೆಯಾಗುತ್ತಿದೆ.
ಮಾರ್ಚ್ 20ರ ಬಳಿಕ ರಾಜ್ಯದ ಹಲವು ಕಡೆಗಳಲ್ಲಿ ಮಳೆ ಬೀಳುವ ಮುನ್ಸೂಚನೆ ಇದೆ. ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಮೈಸೂರು ಸೇರಿದಂತೆ ಹಲವು ಭಾಗಗಳಲ್ಲಿ ಮಳೆಯಾಗಬಹುದು ಎಂದು ಹೇಳಲಾಗಿದೆ. ಯುಗಾದಿ ವೇಳೆಗೆ ರಾಜ್ಯದ ದಕ್ಷಿಣ ಒಳನಾಡಿನ ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಮೇ - ಜೂನ್ ವೇಳೆಗೆ ರಾಜ್ಯದಲ್ಲಿ ಈ ಬಾರಿ ಅತ್ಯುತ್ತಮ ಮಳೆಯಾಗುವ ಮುನ್ಸೂಚನೆ ಇದೆ.












Click it and Unblock the Notifications