ಮಲೆನಾಡಿನಲ್ಲಿ ಈಗ ಮಳೆಯೋಗ, ಧುಮ್ಮಿಕ್ಕುತ್ತಿದೆ ಜೋಗ
ಬೆಂಗಳೂರು, ಜುಲೈ 21 : ಕಳೆದ ಮೂರು ದಿನಗಳಿಂದ ಕೊಡಗು, ಶಿವಮೊಗ್ಗ, ಉತ್ತರ ಕನ್ನಡ, ಬೆಳಗಾವಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಉತ್ತಮ ಮಳೆ ಸುರಿಯುತ್ತಿದ್ದು, ನದಿಗಳು ಉಕ್ಕಿ ಹರಿಯುತ್ತಿವೆ, ಸೇತುವೆಗಳು ಮುಳುಗಡೆಯಾಗಿವೆ, ರೈತರಿಗೆ ಮತ್ತು ಜನತೆಗೆ ಸಂತಸವನ್ನು ತಂದಿದೆ.
ಶಿವಮೊಗ್ಗದಲ್ಲಿ ಅತೀಹೆಚ್ಚಿನ ಮಳೆಯಾಗಿರುವುದರಿಂದ ಜೋಗ ಜಲಪಾತ ಮೈದುಂಬಿ ಧುಮುಕುತ್ತಿದ್ದು, ನೋಡುಗರಿಗೆ ರಸದೌತಣ ಬಡಿಸುತ್ತಿದೆ. ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ ಗರಿಷ್ಠ 21 ಸೆಂ.ಮೀ. ಮತ್ತು ಲಿಂಗನಮಕ್ಕಿಯಲ್ಲಿ 12 ಸೆಂ.ಮೀ. ಮಳೆಯಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಕದ್ರಾ, ಸಿದ್ದಾಪುರ, ಮಂಚಿಕೇರಿಯಲ್ಲಿ 10 ಸೆಂ.ಮೀ.ನಷ್ಟು ಭಾರೀ ಮಳೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರದಲ್ಲಿ 9 ಸೆಂ.ಮೀ., ಬೆಳಗಾವಿಯ ಜಿಲ್ಲೆಯ ಲೋಂಡ್ ಅರಣ್ಯ ಪ್ರದೇಶದಲ್ಲಿ, ಶಿವಮೊಗ್ಗ ಜಿಲ್ಲೆಯ ಮಳೆಪ್ರದೇಶ ಆಗುಂಬೆಯಲ್ಲಿ 7 ಸೆಂ.ಮೀ. ಮಳೆ ಸುರಿದಿದೆ.
ಮಳೆ ತಂದಿರುವ ಸಂತಸದ ನಡುವೆ ಚಿಕ್ಕಮಗಳೂರಿನಲ್ಲಿ ಮರ ಬಿದ್ದು 33 ವರ್ಷದ ಮಹಿಳೆಯೋರ್ವರು ಮೃತಪಟ್ಟಿದ್ದಾರೆ. ಬೆಳಗಾವಿಯಲ್ಲಿ ಮನೆಯ ಗೋಡೆ ಕುಸಿದು ಓರ್ವರು ಅಸುನೀಗಿದ್ದಾರೆ. ಹಲವಾರು ಕಡೆಗಳಲ್ಲಿ ವಿದ್ಯುತ್ ವ್ಯತ್ಯಯವಾಗಿದೆ, ರಸ್ತೆ ಕುಸಿದು ಸಂಚಾರ ಕಟ್ ಆಗಿದೆ, ಮರಗಳೂ ಧರೆಗುರುಳಿವೆ.
ಕೊಡಗಿನಲ್ಲಿ ಉತ್ತಮ ಮಳೆಯಾಗಿರುವುದರಿಂದ ಹಾರಂಗಿ ಜಲಾಶಯ ಹೆಚ್ಚುಕಡಿಮೆ ತುಂಬುವ ಹಂತಕ್ಕೆ ಬಂದಿದೆ. ಪ್ರಸ್ತುತ ಹಾರಂಗಿ ಜಲಾಶಯದ ಮಟ್ಟ 2852.89 ಅಡಿಗಳಷ್ಟಿದೆ. ಇದರ ಗರಿಷ್ಠ ಮಟ್ಟ 2859 ಅಡಿಗಳು. ಮಂಡ್ಯದ ಕೃಷ್ಣರಾಜ ಸಾಗರ ಅಣೆಕಟ್ಟೆಗೂ ನೀರಿನ ಹರಿವು ಹೆಚ್ಚಾಗಿದ್ದು 81.20 (ಗರಿಷ್ಠ 124.80) ಅಡಿಗೆ ಮುಟ್ಟಿದೆ.
ಕರ್ನಾಟಕ ಪ್ರಕೃತಿ ವಿಕೋಪ ನಿರ್ವಹಣಾ ಮಂಡಳಿಯ ಪ್ರಕಾರ, ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದ ಕರಾವಳಿಯುದ್ದಕ್ಕೂ ಭಾರೀ ಮಳೆ ಸುರಿಯಲಿದೆ. ಆದರೆ, ಬೆಂಗಳೂರು ಸುತ್ತಮುತ್ತಲು ಮೋಡ ಕವಿದ ವಾತಾವರಣವಿದ್ದರೂ ಯಾವುದೇ ಮಳೆಯ ಲಕ್ಷಣಗಳಿಲ್ಲದಿರುವುದು ಚಿಂತೆಯ ವಿಷಯವಾಗಿದೆ.











Click it and Unblock the Notifications