Heavy Rain In Karnataka: ಧಾರಾಕಾರ ಮಳೆ: ರಾಷ್ಟ್ರೀಯ ಹೆದ್ದಾರಿ ಬಂದ್, 30ಕ್ಕೂ ಹೆಚ್ಚು ಜನರ ರಕ್ಷಣೆ!
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ಮಳೆಯಿಂದಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿರುವುದು ವರದಿಯಾಗಿದೆ. ಬುಧವಾರ ಸಂಜೆಯಿಂದಲೇ ರಾಜ್ಯದ ಹಲವು ಭಾಗದಲ್ಲಿ ಧಾರಾಕಾರ ಮಳೆಯಾಗಿದ್ದು, ಧಾರವಾಡ ಸೇರಿದಂತೆ ಕೆಲವು ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿತ್ತು. ಬುಧವಾರ ಸುರಿದ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದೆ. ರಾಷ್ಟ್ರೀಯ ಹೆದ್ದಾರಿ ಬಂದ್‌ನಿಂದಾಗಿ ಸಾವಿರಾರು ಜನ ಪ್ರಯಾಣಿಕರು ಹಾಗೂ ವಾಹನ ಸವಾರರು ನೀರಿನಲ್ಲಿ ಸಿಲುಕಿದ್ದರು.
ಬುಧವಾರ ಬೆಳಿಗ್ಗೆಯಿಂದಲೇ ರಾಜ್ಯದ ಹಲವು ಭಾಗದಲ್ಲಿ ಮೋಡ ಕವಿದ ವಾತಾವರಣ ಇತ್ತು. ಸಂಜೆ ವೇಳೆಗೆ ವಿವಿಧ ಭಾಗದಲ್ಲಿ ಧಾರಾಕಾರ ಮಳೆಯಾಗಿರುವುದು ವರದಿಯಾಗಿದೆ. ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 4 ಬಂದ್ ಆಗಿರುವುದು ವರದಿಯಾಗಿದೆ. ಧಾರಾಕಾರ ಮಳೆಯಿಂದಾಗಿ ಅಂದಾಜು 3 ಗಂಟೆಗೂ ಹೆಚ್ಚು ಧಾರವಾಡದ ಬೈಪಾಸ್ ರಸ್ತೆ ಬಂದ್ ಆಗಿತ್ತು. ಇಲ್ಲಿನ ರಮ್ಯ ರೆಸಿಡೆನ್ಸಿ ಬಳಿ ಬೈಪಾಸ್ ರಸ್ತೆ ಸಂಪೂರ್ಣ ನೀರಿನಿಂದ ತುಂಬಿತ್ತು. ಧಾರಾಕಾರ ಮಳೆಯಿಂದಾಗಿ ನೀರಿನಲ್ಲಿ ಸಿಲುಕಿದ್ದ ಬಸ್‌ನಿಂದ ಪ್ರಯಾಣಿಕರನ್ನು ರಕ್ಷಿಸಲಾಗಿದೆ. ಈ ಮಾರ್ಗದಲ್ಲಿ ಮಳೆ ನೀರು ನಿಂತಿದ್ದರಿಂದ ಸಾರಿಗೆ ಬಸ್ ಮುಂದಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಬಸ್‌ನಲ್ಲಿದ್ದ ಪ್ರಯಾಣಿಕರು ಹೊರ ಬರಲು ಹರಸಾಹಸಪಟ್ಟರು.

ಮೂವತ್ತಕ್ಕೂ ಹೆಚ್ಚು ಜನರ ರಕ್ಷಣೆ: ಈ ಭಾಗದಲ್ಲಿ ಬುಧವಾರ ಸುರಿದ ಧಾರಾಕಾರ ಮಳೆಯಿಂದ ಭಾರೀ ಅನಾಹುತವೇ ಸಂಭವಿಸಿದೆ. ಸುತ್ತಮುತ್ತಲಿನ ಹಳ್ಳಿಯ ಜನ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಧಾರವಾಡದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ತಗ್ಗು ಪ್ರದೇಶವೂ ಸೇರಿದಂತೆ ಹಲವು ಮನೆಗಳಿಗೆ ನೀರು ನುಗ್ಗಿದ್ದು, ಜನ ಪರದಾಡುತ್ತಿದ್ದಾರೆ. ಧಾರವಾಡದ ಬೈಪಾಸ್ ರಸ್ತೆಯಲ್ಲಿ ಬಸ್ ನೀರಿನಲ್ಲಿ ಸಿಲುಕಿತ್ತು. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬಸ್‌ನಲ್ಲಿದ್ದ ಮೂವತ್ತು ಜನರನ್ನ ರಕ್ಷಿಸಿದ್ದಾರೆ. ಧಾರವಾಡ ಗ್ರಾಮೀಣ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಹುಬ್ಬಳ್ಳಿಯಲ್ಲಿ ಜನರ ಪರದಾಟ
ಹುಬ್ಬಳ್ಳಿ - ಧಾರವಾಡ ಅವಳಿ ನಗರದಲ್ಲಿ ಬುಧವಾರ ತಡರಾತ್ರಿ ಸುರಿದ ಧಾರಾಕಾರ ಮಳೆಯಿಂದ ಭಾರೀ ಅವಾಂತರವೇ ಸೃಷ್ಟಿಯಾಗಿದೆ. ಹುಬ್ಬಳ್ಳಿಯಲ್ಲಿ ಬುಧವಾರ ಸುರಿದ ಭಾರೀ ಮಳೆಯಿಂದಾಗಿ ವಾಣಿಜ್ಯ ವಹಿವಾಟು ನಡೆಯುವ ದಾಜಿಬಾನಪೇಟೆಯಲ್ಲಿನ ಸಮಸ್ಯೆ ಆಗಿತ್ತು. ಈ ಭಾಗದಲ್ಲಿ ರಸ್ತೆಯಲ್ಲಿ ಕೊಳಚೆ ನೀರು ತುಂಬಿ ಹರಿಯುತ್ತಿತ್ತು. ಅಲ್ಲದೇ ತುಳಜಾಭವಾನಿ ದೇವಸ್ಥಾನದ ಮುಂದೆ ಚರಂಡಿ ಕೊಳಚೆಯು ಸಂಗ್ರಹಗೊಂಡಿದ್ದರಿಂದ ದೇಗುಲಕ್ಕೆ ಬರುವ ಭಕ್ತರು ಪರದಾಡಿದರು. ಪ್ರತಿ ಬಾರಿ ಮಳೆ ಬಂದಾಗಲೂ ಇದೇ ಸಮಸ್ಯೆ ಇದೆ. ನಾಲಾ ಸ್ವಚ್ಛತೆ ಹೆಸರಲ್ಲಿ ಹಲವು ಬಾರಿ ಕಾರ್ಯಾಚರಣೆ ನಡೆದಿದ್ದರೂ ಶಾಶ್ವತ ಪರಿಹಾರ ಸಿಕ್ಕಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುರುವಾರವೂ ಭಾರೀ ಮಳೆ: ರಾಜ್ಯದಲ್ಲಿ ಗುರುವಾರವೂ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರ್ನಾಟಕದ ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನಲ್ಲಿ ಮಳೆಯಾಗಲಿದೆ ಎನ್ನಲಾಗಿದೆ.












Click it and Unblock the Notifications