ಕರಾವಳಿ, ಮಲೆನಾಡಿನಲ್ಲಿ ಭಾರೀ ವರ್ಷಧಾರೆ

ಬೆಂಗಳೂರು, ಜು. 14 : ಕರ್ನಾಟಕದ ಮೇಲೆ ವರುಣ ದೇವ ಕೃಪೆ ತೋರಿದ್ದಾನೆ. ಕೊಡಗು, ಕರಾವಳಿ ಹಾಗೂ ಮಲೆನಾಡಿನಲ್ಲಿ ಭಾನುವಾರ ಭಾರೀ ಮಳೆಯಾಗಿದೆ. ಹಲವು ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಸುಬ್ರಹ್ಮಣ್ಯ, ಭಾಗಮಂಡಲ, ಮಂಡಗದ್ದೆ ಸೇರಿದಂತೆ ಹಲವೆಡೆ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಚಿತ್ರದುರ್ಗ, ದಾವಣಗೆರೆ, ಬಾಗಲಕೋಟೆ, ಬಿಜಾಪುರ ಮುಂತಾದ ಜಿಲ್ಲೆಗಳಲ್ಲಿ ಇನ್ನೂ ಮಳೆಯಾಗಿಲ್ಲ.

ಕೊಡಗು ಜಿಲ್ಲೆಯಲ್ಲಿ ಶನಿವಾರದಿಂದ ಸುರಿಯುತ್ತಿರುವ ಮಳೆಗೆ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ಭಾಗಮಂಡಲ-ಮಡಿಕೇರಿ, ಭಾಗಮಂಡಲ-ಅಯ್ಯಂಗೇರಿ ರಸ್ತೆ ಸಂಪರ್ಕ ಸ್ಥಗಿತಗೊಂಡಿದ್ದು, ತಲಕಾವೇರಿ ದರ್ಶನಕ್ಕೆ ಬಂದಿದ್ದ ಭಕ್ತರು ವಾಪಸ್ ತೆರಳಿದ್ದಾರೆ. ಕಾವೇರಿ ನದಿಯಲ್ಲಿ ಪ್ರವಾಹದ ಭೀತಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ನದಿ ದಡದಲ್ಲಿ ಯಾಂತ್ರಿಕ ಬೋಟ್ ಹಾಗೂ 10 ಮಂದಿ ಹೋಂಗಾರ್ಡ್‌ಗಳನ್ನು ನಿಯೋಜಿಸಲಾಗಿದೆ.

ದಕ್ಷಿಣ ಕನ್ನಡ ವರದಿ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಕಳೆದ ಮೂರು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು ನೇತ್ರಾವತಿ, ಕುಮಾರಧಾರ ನದಿಗಳ ನೀರಿನ ಮಟ್ಟ ಏರತೊಡಗಿದೆ. ಸುರತ್ಕಲ್ ನ ಮೀನಕಳಿಯಲ್ಲಿ ಪಣಂಬೂರಿಗೆ ಸಂಪರ್ಕಿಸುವ ರಸ್ತೆ ಕಡಲ್ಕೊರೆತದಿಂದಾಗಿ ಸಮುದ್ರದ ಪಾಲಾಗಿದೆ. ಸುಬ್ರಮಣ್ಯದಲ್ಲಿ ಕುಮಾರಧಾರಾ ಸೇತುವೆ ಮುಳುಗಡೆಯಾಗಿದೆ. ಸುಳ್ಯದಲ್ಲಿ ಕೆಲವು ಕಡೆ ಭೂ ಕುಸಿತ ಉಂಟಾಗಿದೆ. ಸುಬ್ರಮಣ್ಯದಲ್ಲಿ ಭಾನುವಾರ 25 ಸೆಂ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. [ಮಂಗಳೂರಿನಲ್ಲಿ ವರುಣನ ಆರ್ಭಟದ ಚಿತ್ರಗಳು]

ಕೊಡಗಿನಲ್ಲಿ ಭಾರೀ ಮಳೆ : ಕೊಡಗು ಜಿಲ್ಲೆಯಲ್ಲಿಯೂ ಭಾರೀ ಮಳೆ ಸುರಿಯುತ್ತಿದ್ದು, ವಿರಾಜಪೇಟೆಯಲ್ಲಿನ ಲಕ್ಷ್ಮಣ ತೀರ್ಥ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಕಾವೇರಿಯ ಪ್ರವಾಹದಿಂದ ಮೂರ್ನಾಡು ಬಳಿಯ ಬಲಮುರಿಯಲ್ಲಿ ಹಳೆ ಸೇತುವೆ ಮುಳುಗಿದೆ. ಕೊಡಗಿನ ಹಲವೆಡೆ ಗುಡ್ಡ ಕುಸಿದಿದ್ದು, ಮನೆಗಳಿಗೆ ಹಾನಿಯಾಗಿದೆ. ಭಾಗಮಂಡಲದಲ್ಲಿ ಭಾನುವಾರ 25, ವಿರಾಜಪೇಟೆಯಲ್ಲಿ 9, ಪೊನ್ನಂಪೇಟೆಯಲ್ಲಿ 7 ಸೆಂ.ಮೀ.ಮಳೆಯಾಗಿದೆ.

rain

ಮಳೆನಾಡಾದ ಮಲೆನಾಡು : ಶಿವಮೊಗ್ಗ ಜಿಲ್ಲೆಯಲ್ಲಿ ಶನಿವಾರದಿಂದ ಉತ್ತಮ ಮಳೆ ಸುರಿಯುತ್ತಿದೆ. ತೀರ್ಥಹಳ್ಳಿ, ಸಾಗರ, ಹೊಸನಗರ ತಾಲೂಕುಗಳಲ್ಲೂ ಧಾರಾಕಾರ ಮಳೆಯಾಗುತ್ತಿದ್ದು, ಆಗುಂಬೆಯಲ್ಲಿ ಭಾನುವಾರ 25 ಸೆಂ.ಮೀ ಮಳೆಯಾಗಿದೆ. ಶೃಂಗೇರಿ ತೀರ್ಥಹಳ್ಳಿ ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ತುಂಗಾ ನದಿ ತುಂಬಿ ಹರಿಯುತ್ತಿದೆ.

ಮಂಡಗದ್ದೆ ಸಮೀಪ ರಾಷ್ಟ್ರೀಯ ಹೆದ್ದಾರಿ ಮೇಲೆ ಒಂದೂವರೆ ಅಡಿಯಷ್ಟು ನೀರು ಹರಿಯುತ್ತಿದೆ. ಮಂಡಗದ್ದೆಯಲ್ಲಿರುವ ಪಕ್ಷಿಧಾಮ ನೀರಿನಲ್ಲಿ ಮುಳುಗಡೆಯಾಗಿದೆ. ಲಿಂಗನಮಕ್ಕಿಯಲ್ಲಿ 10, ಹೊಸನಗರ ಮತ್ತು ಕಮ್ಮರಡಿಯಲ್ಲಿ 7, ತಾಳಗುಪ್ಪ, ಹುಂಚದಕಟ್ಟೆಯಲ್ಲಿ 5 ಸೆಂ.ಮೀ. ಮಳೆ ಸುರಿದಿದೆ. ಲಿಂಗನಮಕ್ಕಿ ಜಲಾಶಯಕ್ಕೆ 12,284 ಕ್ಯುಸೆಕ್ ನಷ್ಟು ನೀರು ಹರಿದುಬರುತ್ತಿದೆ.

ಚಿಕ್ಕಮಗಳೂರಿನಲ್ಲಿ ಮಳೆ : ಚಿಕ್ಕಮಗಳೂರು ಜಿಲ್ಲೆಯಲ್ಲೂ ಮಳೆಯ ಅಬ್ಬರ ಜೋರಾಗಿದ್ದು ತುಂಗಾ, ಭದ್ರಾ ಹಾಗೂ ಹೇಮಾವತಿ ನದಿಗಳ ನೀರಿನ ಮಟ್ಟ ಏರಿಕೆಯಾಗಿದೆ. ಶೃಂಗೇರಿಯಲ್ಲಿ 14, ಕೊಪ್ಪದಲ್ಲಿ 6. ಸಕಲೇಶಪುರದಲ್ಲಿ 7, ಕೊಟ್ಟಿಗೆಹಾರದಲ್ಲಿ 7 ಸೆಂ.ವೀ.ಮಳೆಯಾಗಿದೆ. ಶೃಂಗೇರಿಯಲ್ಲಿ ತುಂಗಾ ನದಿ ತುಂಬಿ ಹರಿಯುತ್ತಿದೆ.

ಬೆಂಗಳೂರು, ಬೆಳಗಾವಿ, ಗದಗ, ಧಾರವಾಡ, ಕೊಪ್ಪಳ ಹಾವೇರಿ ಜಿಲ್ಲೆಯಲ್ಲಿಯೂ ಭಾನುವಾರ ಜಿಟಿ ಜಿಟಿ ಮಳೆಯಾಗಿದೆ. ಬೆಳಗಾವಿಯ ಖಾನಾಪುರದಲ್ಲಿ 4, ಗುಲ್ಬರ್ಗದ ಸೇಡಂ, ಜೇವರ್ಗಿಯಲ್ಲಿ 2, ಚಾಮರಾಜನಗರ ಜಿಲ್ಲೆಯ ಬೇಗೂರು, ಎಂಎಂ ಹಿಲ್ಸ್ ನಲ್ಲಿ 1 ಸೆಂ.ಮೀ. ಮಳೆಯಾಗಿದೆ.

ಮುನ್ಸೂಚನೆ : ರಾಜ್ಯದಲ್ಲಿ ಇನ್ನೂ ಎರಡು ದಿನ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಬಿ.ಪುಟ್ಟಣ್ಣ ಹೇಳಿದ್ದಾರೆ. ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಹೆಚ್ಚು ಮಳೆಯಾಗಲಿದೆ ಎಂದು ಅವರು ಮುನ್ಸೂಚನೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+