ಚಿಕ್ಕಮಗಳೂರು ಮಳೆ ರೌಂಡ್ ಅಪ್, 35 ವರ್ಷದಲ್ಲೇ ಇಂಥ ಮಳೆ ಕಂಡಿಲ್ಲ!
ಚಿಕ್ಕಮಗಳೂರು, ಜುಲೈ 14: ಮಲೆನಾಡಿನ ಭಾಗದಲ್ಲಿ ಬಿಸಿಲು ಕಂಡೇ ಬಹಳ ದಿನಗಳಾಗಿವೆ. ಇನ್ನು ವಿದ್ಯುತ್ ವ್ಯತ್ಯಯ, ಇಂಟರ್ ನೆಟ್ ಸಂಪರ್ಕ ಕಡಿತ, ಮನೆಯ ಗೋಡೆ ಕುಸಿತ, ಜಮೀನುಗಳಿಗೆ ನೀರು ನುಗ್ಗಿದೆ, ಹಳ್ಳದಲ್ಲಿ ಅವರು ಕೊಚ್ಚಿ ಹೋದರಂತೆ, ಇಂಥ ಮಳೆ ಆಗಿ ಮೂವತ್ತೈದು ವರ್ಷ ಆಗಿತ್ತಂತೆ ಎಂಬ ಮಾತುಗಳು ತುಂಬ ಸಹಜವಾಗಿ ಕೇಳಿಬರುತ್ತಿವೆ.
ಶೃಂಗೇರಿ ತಾಲೂಕಿನ ಮೇಗೂರು ಗ್ರಾಮದ ಯುವಕ ಅಶೋಕ್ ಬೈಕ್ ಸಮೇತ ಬಸ್ತಿ ಹಳ್ಳದಲ್ಲಿ ಕೊಚ್ಚಿ ಹೋಗಿದ್ದಾನೆ. ಈ ಬಗ್ಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಶ್ರೀರಂಗಯ್ಯ ಮಾಧ್ಯಮಗಳಿಗೆ ಮಾಹಿತಿ ನೀಡುತ್ತಾ, ತೀವ್ರ ಕಾರ್ಯಾಚರಣೆ ಮಧ್ಯೆ ಕೂಡ ಮೃತ ದೇಹ ಪತ್ತೆಯಾಗಿಲ್ಲ ಎಂದಿದ್ದಾರೆ. ಮಳೆ ಪ್ರಮಾಣ ಸಿಕ್ಕಾಪಟ್ಟೆ ಆಗಿರುವುದರಿಂದ ಎನ್ ಡಿಆರ್ ಎಫ್ ನವರು ಕಾರ್ಯಾಚರಣೆಯನ್ನೇ ನಿಲ್ಲಿಸಿಬಿಟ್ಟಿದ್ದಾರೆ.
ಕೊನೆಗೆ ಸ್ಥಳೀಯರು ಹಾಗೂ ಅಗ್ನಿಶಾಮಕ ಸಿಬ್ಬಂದಿಯೇ ಮೃತ ದೇಹಕ್ಕೆ ಶೋಧ ನಡೆಸುತ್ತಿದ್ದಾರೆ. 4 ದಿನಗಳಿಂದ ಅದೇ ಪ್ರಯತ್ನದಲ್ಲಿದ್ದಾರೆ. ಸುಮಾರು 5 ಕಿಲೋ ಮೀಟರ್ ವರೆಗೂ ಶವಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಅವರ ಶೋಧ ಕಾರ್ಯಾಚರಣೆಗೆ ತೀವ್ರ ಮಳೆಯಿಂದ ಅಡ್ಡಿಯಾಗುತ್ತಿದೆ.

9 ದಿನಗಳಿಂದ ಬಿಸಿಲೇ ಕಾಣದ ಮಲೆನಾಡು ಪ್ರದೇಶ
ಕಳೆದ 9 ದಿನಗಳಿಂದ ಮಲೆನಾಡು ಪ್ರದೇಶದಲ್ಲಿ ಬಿಸಿಲನ್ನೇ ಕಾಣದಂತಾಗಿದೆ. ಜೋರು ಗಾಳಿಯೊಂದಿಗೆ ಧಾರಾಕಾರ ಮಳೆ ಸುರಿಯುತ್ತಿದೆ. ಮಳೆಯ ಅಬ್ಬರಕ್ಕೆ ನೂರಾರು ಕೃತಕ ಜಲಪಾತಗಳು ಸೃಷ್ಟಿಯಾಗಿವೆ. ಇದ್ದಕ್ಕಿದಂತೆ ರಸ್ತೆಗಳ ಬದಿಯಲ್ಲೇ ಪುಟ್ಟ ಪುಟ್ಪ ಝರಿಗಳು ಕಾಣಿಸಿಕೊಂಡಿವೆ. ಕುದುರೆಮುಖ, ಚಾರ್ಮಾಡಿ, ಶೃಂಗೇರಿ, ಕಳಸ, ಕೊಪ್ಪದಲ್ಲಿ ಭಾರೀ ಮಳೆ ಮಳೆಯಾಗುತ್ತಿದೆ.

ಹೊರಜಗತ್ತಿನ ಸಂಪರ್ಕ ಕಳೆದುಕೊಂಡ ಗ್ರಾಮಗಳು
ಇನ್ನು ನದಿ ಪಾತ್ರದ ಆಯ್ದ ಶಾಲೆಗಳಿಗೆ ರಜೆ ನೀಡಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಚಿಕ್ಕಮಗಳೂರಿನಲ್ಲಿ ಶನಿವಾರ ಕೂಡ ಮಳೆ ಮುಂದುವರೆದಿದೆ. ವಾರದಿಂದ ಸುರಿಯುತ್ತಿರುವ ಮಳೆಗೆ ಜನರ ಜೀವನ ತಾಳ ತಪ್ಪಿದಂತಾಗಿದೆ. ಜಿಲ್ಲೆಯ ತುಂಗಾ, ಭದ್ರಾ ಹೇಮಾವತಿ ಸೇರಿದಂತೆ ಪಂಚ ನದಿಗಳು ಉಕ್ಕಿ ಹರಿಯುತ್ತಿದ್ದು, ಅದೆಷ್ಟೋ ಗ್ರಾಮಗಳು ಸಂಪರ್ಕ ಕಳೆದುಕೊಂಡಿವೆ.

ವಿದ್ಯುತ್ ಸಂಪರ್ಕವೂ ಕಡಿತ
ನೂರಾರು ಹಳ್ಳಿಗಳು ವಿದ್ಯುತ್ ಸಂಪರ್ಕ ಕಳೆದುಕೊಂಡು ಪರಿತಪಿಸುವಂತಾಗಿದೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಹೊನ್ನೇಕಾಡು ಗ್ರಾಮದಲ್ಲಿ ಮನೆಯ ಪಕ್ಕದಲ್ಲಿದ್ದ ಗುಡ್ಡ ಕುಸಿದಿದೆ. ನಿರ್ಮಲ್ ಜೈನ್ ಎಂಬುವವರ ಮನೆಯ ಹಿಂಭಾಗಕ್ಕೆ ಗುಡ್ಡದ ಮಣ್ಣು ಅಪ್ಪಳಿಸಿದೆ. ಅದೃಷ್ಟವಶಾತ್ ಮನೆಯವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗುಡ್ಡ ಕುಸಿತದಿಂದ ಬೇರೆಡೆಗೆ ಕುಟುಂಬ ಸ್ಥಳಾಂತರಗೊಂಡಿದೆ. ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಆಗ್ರಹಿಸಿದ್ದು, ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಜೀಪ್ ಮೇಲೆ ಬಿದ್ದ ಮರ
ಚಿಕ್ಕಮಗಳೂರಿನ ರಾಮನಹಳ್ಳಿಯಲ್ಲಿ ಮಳೆ ಹಾಗೂ ಗಾಳಿಗೆ ರಸ್ತೆ ಮೇಲೆ ಸಾಗುತ್ತಿದ್ದ ಜೀಪ್ ಮೇಲೆ ಬೃಹತ್ ಮರ ಬಿದ್ದಿದೆ. ಕೈಮರ ಗ್ರಾಮದ ಜೀಪ್ ಚಿಕ್ಕಮಗಳೂರಿನಿಂದ ವಾಪಸಾಗುತ್ತಿತ್ತು. ಜೀಪ್ ಮಾಲೀಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಿಕ್ಕಮಗಳೂರು ಹಾಗೂ ತರೀಕೆರೆ ಮಧ್ಯೆ ಸಂಪರ್ಕ ಕಲ್ಪಿಸುವ ರತ್ನಗಿರಿ ರಸ್ತೆಗೆ ಆಗಿದ್ದ ತಡೆ ತೆರವು ಮಾಡಲಾಗಿದೆ. ಸ್ಥಳೀಯರು ಹಾಗೂ ಪೊಲೀಸರಿಂದ ರಸ್ತೆ ತೆರವಾಗಿದೆ. ಬಸವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.












Click it and Unblock the Notifications