ಹಿಂಗಾರು ಆರ್ಭಟಕ್ಕೆ ಮಲೆನಾಡು ತತ್ತರ, ಇನ್ನೆರಡು ದಿನ ಮಳೆ
ಬೆಂಗಳೂರು, ನವೆಂಬರ್. 05: ರಾಜ್ಯಾದ್ಯಂತ ಹಿಂಗಾರು ಆರ್ಭಟ ಮುಂದುವರಿದಿದೆ. ಉತ್ತರ ಒಳನಾಡು, ದಕ್ಷಿಣ ಒಳನಾಡು, ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಇನ್ನು ಎರಡು ದಿನ ಕಾಲ ಮುಂದುವರಿಯಲಿದೆ. ಉತ್ತರ ಒಳನಾಡಿನಲ್ಲಿ ಒಣ ಹವೆ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ದಾವಣಗೆರೆಯಲ್ಲಿ 10 ಸೆಂ.ಮೀ ಮಳೆಯಾಗಿದೆ. ಚನ್ನಪಟ್ಟಣ 9, ಶಿಕಾರಿಪುರ 8, ಧರ್ಮಸ್ಥಳ, ತುಮಕೂರು, ಮಾಗಡಿ 7, ಕುಣಿಗಲ್, ಶಿರಾ 5, ಕುಶಾಲನಗರ 4, ಕೊಟ್ಟಿಗೆಹಾರ, ಮಧುಗಿರಿ 3, ಶೃಂಗೇರಿ, ಕಳಸ, ಮೂಡಿಗೆರೆ, ಕೊರಟಗೆರೆ 2, ಮಾಣಿ, ಉಪ್ಪಿನಂಗಡಿ, ಚಿಂತಾಮಣಿ, ಬಂಡೀಪುರದಲ್ಲಿ 1 ಸೆಂ.ಮೀ ಮಳೆಯಾಗಿದೆ.['ಛಪಲ' ಎಫೆಕ್ಟ್ : ಇನ್ನೈದು ದಿನ ರಾಜ್ಯಾದ್ಯಂತ ಭಾರೀ ಮಳೆ]

ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ, ಯಲ್ಲಾಪುರ ಮತ್ತು ಮುಂಡಗೋಡ ತಾಲ್ಲೂಕಿನಲ್ಲಿ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ. ಶಿರಸಿ ತಾಲೂಕಿನಲ್ಲಿ ಬುಧವಾರ ಸಂಜೆ ಗುಡುಗು-ಸಿಡಿಲಿನ ಅಬ್ಬರದೊಂದಿಗೆ ಎರಡು ತಾಸು ಧಾರಾಕಾರ ಮಳೆ ಸುರಿದಿದೆ. ಉಳಿದಂತೆ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲೂ ಮಳೆ ಮುಂದುವರಿದೆ.
ಹಾವೇರಿ ಜಿಲ್ಲೆಯ ಹಿರೇಕೆರೂರು, ಬ್ಯಾಡಗಿ, ಶಿಗ್ಗಾವಿಯಲ್ಲೂ ಮಳೆಯಾಗಿದೆ. ಹಿರೇಕೆರೂರು ತಾಲ್ಲೂಕಿನ ರಟ್ಟೀಹಳ್ಳಿ ಮತ್ತಿತರೆಡೆ ಗುಡುಗು, ಸಿಡಿಲು ಸಹಿತ ಮಳೆಯಾಗಿದೆ. ಶಿಗ್ಗಾವಿ ಸುತ್ತಮುತ್ತ , ಹಾವೇರಿ, ಸವಣೂರು, ರಾಣೆಬೆನ್ನೂರಿನ ಕೆಲವೆಡೆ ತುಂತುರು ಮಳೆಯಾಗಿದೆ.[ಚಂಡಮಾರುತಗಳ ಚೆಂದದ ಹೆಸರಿನ ರಹಸ್ಯ]
ಸಮಸ್ಯೆ ಆಲಿಸಿದ ಮೇಯರ್
ಬಿಬಿಎಂಪಿ ಮೇಯರ್ ಮಂಜುನಾಥ ರೆಡ್ಡಿ ಸ್ವತಃ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಕುಳಿತು ಸಮಸ್ಯೆ ಆಲಿಸಿದರು. ಬೆಂಗಳೂರು ನಗರದಲ್ಲಿ ಕಳೆದ ಎರಡು ದಿನಗಳಿಂದ ಮಳೆ ಸುರಿಯುತ್ತಿದೆ. ಪರಿಹಾರ ಕ್ರಮಕ್ಕೆ ಮುಂದಾದ ಮೇಯರ್ ನಾಗರಿಕರ ದೂರವಾಣಿ ಕರೆ ಸ್ವೀಕರಿಸಿದರು. ಯಾವ ವಾರ್ಡ್? ಅಲ್ಲಿನ ಕಾರ್ಫೋರೇಟರ್ ಯಾರು? ಪರ್ಯಾಯ ಕ್ರಮ ಏನು ತೆಗೆದುಕೊಳ್ಳಬಹುದು? ಎಂಬ ಮಾಹಿತಿ ಕಲೆ ಹಾಕಿಕೊಂಡರು.












Click it and Unblock the Notifications