Heavy Rain Alert: ಇನ್ನೆರಡು ದಿನ ಭಾರಿ ಮಳೆ
ನೈಋತ್ಯ ಮುಂಗಾರು ಕರ್ನಾಟಕದ ಹಲವು ಜಿಲ್ಲೆಗಳನ್ನು ತಂಪಾಗಿಸಿದೆ. ಸೋಮವಾರ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದ್ದು, ತಾಪಮಾನದಲ್ಲಿ ಗಮನಾರ್ಹ ಇಳಿಕೆಯಾಗಿದೆ. ಇನ್ನೂ ಎರಡು ದಿನ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸೋಮವಾರ ಬೆಂಗಳೂರು, ಕೋಲಾರ, ಮಂಡ್ಯ, ಮೈಸೂರು, ತುಮಕೂರು, ಚಾಮರಾಜನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದೆ. ಮುಂದಿನ ಎರಡು ದಿನ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆಯ ಮುನ್ಸೂಚನೆ ಸಿಕ್ಕಿದೆ.

ಯಾವ ಜಿಲ್ಲೆಗಳಲ್ಲಿ ಮಳೆ?
ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಮಂಡ್ಯ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಸಾಕಷ್ಟು ವ್ಯಾಪಕವಾದ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಕೊಡಗು, ಹಾಸನ, ದಕ್ಷಿಣ ಕನ್ನಡ ಘಟ್ಟ ಪ್ರದೇಶ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಚದುರಿದಂತೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಸೋಮವಾರ ಸುರಿದ ಮಳೆ ವಿವರ
ಚಾಮರಾಜನಗರ ಜಿಲ್ಲೆಯಲ್ಲಿ 115.5 ಮಿ.ಮೀ ಮಳೆಯಾಗಿದ್ದು ಹೆಚ್ಚು ಮಳೆಯಾದ ಜಿಲ್ಲೆ ಎನಿಸಿಕೊಂಡಿದೆ. ಮೈಸೂರು 108.5 ಮಿ.ಮೀ, ಕೋಲಾರ 94 ಮಿ.ಮೀ, ಬೆಂಗಳೂರು ನಗರ 69 ಮಿ.ಮೀ, ಬೆಂಗಳೂರು ಗ್ರಾಮಾಂತರ 43 ಮಿ.ಮೀ, ಮಂಡ್ಯ 55.5 ಮಿ.ಮೀ, ರಾಮನಗರ 35 ಮಿ.ಮೀ, ತುಮಕೂರು 37.5 ಮಿ.ಮೀ, ಹಾಸನ 33.5 ಮಿ.ಮೀ, ಕೊಡಗು 25.5 ಮಿ.ಮೀ, ಚಿಕ್ಕಬಳ್ಳಾಪುರ 19 ಮಿ.ಮೀ, ಚಿಕ್ಕಮಗಳೂರು 17.5 ಮಿ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಅಂಕಿಅಂಶಗಳು ಹೇಳಿವೆ.
ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನಲ್ಲಿ ಸೋಮವಾರ ಉತ್ತಮ ಮಳೆಯಾಗಿದ್ದು, ಇಂದು ಕೂಡ ಜಿಲ್ಲೆಯ ಹಲವು ಕಡೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದೆ.












Click it and Unblock the Notifications