ಸಂಸದ ಬಸವರಾಜ ಬೊಮ್ಮಾಯಿ ವಿರುದ್ಧ ಗುಡುಗಿದ ಸಚಿವ ದಿನೇಶ್ ಗುಂಡೂರಾವ್
ಬೆಂಗಳೂರು, ಜುಲೈ 30: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಕ್ಕೆ ಬೇಕಾದ ಯೋಜನೆಗಳ ಕುರಿತು ಚರ್ಚಿಸುವ ನೀತಿ ಆಯೋಗದ ಸಭೆಗೆ ಗೈರು ಹಾಜರಾಗುವ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ ಎನ್ನುವ ಸಂಸದ ಬಸವರಾಜ ಬೊಮ್ಮಾಯಿ ಆರೋಪಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸಚಿವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀತಿ ಆಯೋಗದ ಸಭೆಗೆ ಹಾಜರಾಗದೆ ರಾಜ್ಯಕ್ಕೆ ಅನ್ಯಾಯ ಎಸಗಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ. ಈಗ ರಾಜ್ಯಕ್ಕಾದ ಅನ್ಯಾಯದ ಬಗ್ಗೆ ಮಾತಾಡುವ ಬೊಮ್ಮಾಯಿಯವರು ಬಜೆಟ್‌ನಲ್ಲಿ ಕರ್ನಾಟಕದ ಪ್ರಸ್ತಾಪವೇ ಮಾಡದಿದ್ದಾಗ ಯಾವ ಬಿಲದಲ್ಲಿ ಅಡಗಿಕೊಂಡಿದ್ದರು.

19 ಜನ ಸಂಸದ 5 ಜನ ಕೇಂದ್ರ ಸಚಿವರೂ ಇದ್ದರೂ ಬಜೆಟ್‌ನಲ್ಲಿ ರಾಜ್ಯಕ್ಕಾದ ಅನ್ಯಾಯದ ಬಗ್ಗೆ ಬಿಜೆಪಿ-ಜೆಡಿಎಸ್ ನಾಯಕರ ನಾಲಗೆಯೇ ಹೊರಳಲಿಲ್ಲ. ಮೋದಿ ಸರ್ಕಾರ ಕರ್ನಾಟಕಕ್ಕೆ ನಿರಂತರ ಅನ್ಯಾಯ ಎಸಗುತ್ತಿದೆ. ಅದರ ಬಗ್ಗೆ ಮಾತಾಡುವ ತಾಕತ್ತಿಲ್ಲದೆ, ನೀತಿ ಸಭೆಗೆ ಹಾಜರಾಗದಿರುವುದರಿಂದ ಅನ್ಯಾಯ ಆಯಿತು ಎಂದು ಬಡಬಡಿಸುವುದು ಹಾಸ್ಯಾಸ್ಪದ.
ಬಜೆಟ್‌ನಲ್ಲಿ ಕರ್ನಾಟಕಕ್ಕೆ ಆದ ಅನ್ಯಾಯದ ಪ್ರತಿಭಟನಾ ರೂಪವಾಗಿ ನೀತಿ ಸಭೆಗೆ ಸಿಎಂ ಹಾಜರಾಗಿಲ್ಲ. ಕೇವಲ ಕರ್ನಾಟಕವಲ್ಲ, ತಮಿಳುನಾಡು, ತೆಲಂಗಾಣ, ಕೇರಳ, ಪಂಜಾಬ್ ಸೇರಿದಂತೆ ಬಿಜೆಪಿಯೇತರ ಆಡಳಿತವಿರುವ ಎಲ್ಲಾ ರಾಜ್ಯಗಳು ನೀತಿ ಆಯೋಗದ ಸಭೆಯನ್ನು ಬಹಿಷ್ಕರಿಸಿವೆ.

ನೀತಿ ಆಯೋಗದ ಸಭೆಯನ್ನು ಬಹಿಷ್ಕರಿಸಿದ್ದು ಕೇಂದ್ರದ ತಾರತಮ್ಯ ನೀತಿಯ ವಿರುದ್ಧವೇ ಹೊರತು ಯಾವುದೇ ವೈಯಕ್ತಿಕ ಹಿತಾಸಕ್ತಿಯಿಂದಲ್ಲ. ಬೊಮ್ಮಾಯಿಯವರು ಈ ರಾಜ್ಯದ ಮುಖ್ಯಮಂತ್ರಿಯಾಗಿ ಈಗ ಸಂಸದರಾಗಿದ್ದಾರೆ. ರಾಜ್ಯದ ಮೇಲೆ ಅವರಿಗೆ ನಿಜವಾದ ಕಾಳಜಿಯಿದ್ದರೆ ಕರ್ನಾಟಕಕ್ಕೆ ನಿರಂತರ ಅನ್ಯಾಯ ಎಸಗುತ್ತಿರುವ ಮೋದಿ ಸರ್ಕಾರದ ಧೋರಣೆಯನ್ನು ಪ್ರಶ್ನಿಸಲಿ ಎಂದು ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಂಸದ ಬಸವರಾಜ ಬೊಮ್ಮಾಯಿ ಆರೋಪವೇನು..?
ಗದಗನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಕ್ಕೆ ಬೇಕಾದ ಯೋಜನೆಗಳ ಕುರಿತು ಚರ್ಚಿಸುವ ನೀತಿ ಆಯೋಗದ ಸಭೆಗೆ ಗೈರು ಹಾಜರಾಗುವ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ. ರೈಲ್ವೆ ಸೇರಿದಂತೆ ಪ್ರಮುಖ ಯೋಜನೆಗಳಿಗೆ ರಾಜ್ಯ ಸರ್ಕಾರ ತನ್ನ ಪಾಲಿನ ಹಣ ಕೊಡದೇ ಕೇಂದ್ರ ಸರ್ಕಾರದ ವಿರುದ್ದ ಅಸಹಕಾರ ತೋರುತ್ತಿದ್ದಾರೆ. ಕಾಂಗ್ರೆಸ್ ಪಕ್ಷದವರು ಅಪಪ್ರಚಾರದಲ್ಲಿ ನಿಸ್ಸೀಮರು. ನಿರಂತರವಾಗಿ ಕೇಂದ್ರದ ಮೇಲೆ ಆಪಾದನೆ ಮಾಡುವುದು ಅವರಿಗೆ ಚಟವಾಗಿದೆ. ಕಾಂಗ್ರೆಸ್ ಪಕ್ಷದವರು ಅಪಪ್ರಚಾರ ಮಾಡುವ ಮೂಲಕ ರಾಜ್ಯದ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು.












Click it and Unblock the Notifications