Bengaluru: ಬೆಂಗಳೂರಿನ ನಮ್ಮ ಕ್ಲಿನಿಕ್‌ಗಳಲ್ಲಿ ಶೀಘ್ರವೇ ಆರೋಗ್ಯ ATM: ಏನಿದರ ವಿಶೇಷ..?
ಬೆಂಗಳೂರು, ಅಕ್ಟೋಬರ್ 18: ಬೆಂಗಳೂರು ನಗರ ಪ್ರದೇಶದಲ್ಲಿ ಆರ್ಥಿಕವಾಗಿ ಹಿಂದುಳಿದವರೂ ಸೇರಿದಂತೆ ಎಲ್ಲಾ ವರ್ಗದ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುವ ದೃಷ್ಟಿಯಿಂದ ಹುಟ್ಟಿಕೊಂಡ ಮಹತ್ವಾಕಾಂಕ್ಷೆಯ ಯೋಜನೆಯೇ ನಮ್ಮ ಕ್ಲಿನಿಕ್. ನಗರದಲ್ಲಿರುವ ದಿನಗೂಲಿ ಕಾರ್ಮಿಕರು, ಕೊಳಗೇರಿ ನಿವಾಸಿಗಳು ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸುಲಭವಾಗಿ ವೈದ್ಯಕೀಯ ಸೇವೆಯನ್ನು ನಮ್ಮ ಕ್ಲಿನಿಕ್ಗಳು ನೀಡುತ್ತಿದೆ.
ಸಾಮಾನ್ಯವಾಗಿ ನಮ್ಮ ಕ್ಲಿನಿಕ್‌ಗಳಲ್ಲಿ 12 ರೀತಿಯ ವೈದ್ಯಕೀಯ ಸೇವೆಗಳು ಲಭ್ಯವಿದ್ದು, ಪ್ರತಿ ಕ್ಲಿನಿಕ್ನಲ್ಲಿಯೂ ವೈದ್ಯಕೀಯ ಅಧಿಕಾರಿ, ನರ್ಸ್, ಲ್ಯಾಬ್ ಟೆಕ್ನೀಷಿಯನ್ ಮತ್ತು ಗ್ರೂಪ್ ಡಿ ನೌಕರ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರ ಜೊತೆಗೆ ಇನ್ನೊಂದು ಮಹತ್ವದ ಸೌಲಭ್ಯ ನೀಡಲು ಕರ್ನಾಟಕ ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ಮುಂದಾಗಿದೆ.

ಬೆಂಗಳೂರು ನಗರದಾದ್ಯಂತ ಇರುವ ನಮ್ಮ ಕ್ಲಿನಿಕ್‌ಗಳಲ್ಲಿ ಶೀಘ್ರದಲ್ಲೇ ಆರೋಗ್ಯ ಎಟಿಎಂ ಯಂತ್ರಗಳು ಬರಲಿದೆ. ಚಿಕಿತ್ಸೆ ತ್ವರಿತ ಹಾಗೂ ಸುಲಭವಾಗಿಸುವ ದೃಷ್ಟಿಯಿಂದ ಬೆಂಗಳೂರಿನ ನಮ್ಮ ಕ್ಲಿನಿಕ್‌ಗಳಲ್ಲಿ ಎಟಿಎಂನಂತಹ ಯಂತ್ರಗಳನ್ನು ಶೀಘ್ರದಲ್ಲೇ ಅಳವಡಿಕೆ ಆಗಲಿದೆ. ಇದು ಸಾಂಕ್ರಾಮಿಕವಲ್ಲದ ಕಾಯಿಲೆಗಳನ್ನು ಸ್ವಯಂ-ಸ್ಕ್ರೀನ್ ಮಾಡಲು ಸಹಾಯ ಮಾಡುತ್ತದೆ.
ಬ್ಯಾಂಕ್ ಎಟಿಎಂನಂತೆ ಈ ಯಂತ್ರಗಳಲ್ಲಿ ಇನ್‌ಪುಟ್ ಮತ್ತು ಡಿಸ್‌ಪ್ಲೇಗಾಗಿ ಟಚ್‌ಸ್ಕ್ರೀನ್ ವ್ಯವಸ್ಥೆ ಇರುತ್ತದೆ. ಜೊತೆಗೆ 12-ಲೀಡ್ ಇಸಿಜಿ, ಡಿಜಿಟಲ್ ಸ್ಟೆತೊಸ್ಕೋಪ್ ಹಾಗೂ ಬಿ.ಪಿ ಅಳೆಯುವ ಮಾಪಕಗಳನ್ನು ಹೊಂದಿರುತ್ತದೆ. ಅಲ್ಲದೇ ಡೆಂಗ್ಯೂ, ಗರ್ಭಾವಸ್ಥೆ, ಟೈಫಾಯಿಡ್, ಮಲೇರಿಯಾ ಮತ್ತು ಎಚ್‌ಐವಿ ಪರೀಕ್ಷಿಸಲು ಕಿಟ್ ಹಾಗೂ ತೂಕ ಮತ್ತು ಎತ್ತರ ಅಳೆಯುವ ಮಾಪಕಗಳು ಈ ಯಂತ್ರದಲ್ಲಿ ಇರುತ್ತದೆ.
ಇನ್ನು ಈ ಯಂತ್ರಗಳನ್ನು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗೆ ಸಂಪರ್ಕಿಸಲಾಗುತ್ತದೆ. ಇದರಿಂದ ಪರೀಕ್ಷೆ ಮಾಡಿಸಿಕೊಂಡ ರೋಗಿಯ ಮಾಹಿತಿ ವೈದ್ಯರು ತಿಳಿಯಲು ಸಹಾಯವಾಗುತ್ತದೆ. ಇದರಿಂದ ಚಿಕಿತ್ಸೆ ಪಡೆಯುವುದು ಹಾಗೂ ನೀಡುವುದು ಎರಡೂ ಕೂಡ ಸುಲಭವಾಗುತ್ತದೆ.
ಸದ್ಯ ಬೆಂಗಳೂರಿನ ಕೆಲವು ನಮ್ಮ ಕ್ಲಿನಿಕ್‌ಗಳಲ್ಲಿ ಈ ಆರೋಗ್ಯ ಎಟಿಎಂಗಳನ್ನು ಅಳವಡಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಟೆಂಡರ್‌ಗಳನ್ನು ಕರೆದಿದೆ. ಶೀಘ್ರದಲ್ಲೇ ಗುತ್ತಿಗೆಗೆ ಕಂಪನಿ ಆಯ್ಕೆ ಸಹ ನಡೆಯಲಿದೆ. ಆರಂಭದ ಪ್ರಾಯೋಗಿಕ ಹಂತದಲ್ಲಿ ಈ ಯಂತ್ರದಿಂದ ಪಡೆಯುವ ಎಲ್ಲಾ ಸೇವೆಗಳು ಉಚಿತವಾಗಿ ನೀಡಲಾಗುತ್ತದೆ. ಬಳಿಕ ಜನರು ಯಂತ್ರವನ್ನು ಬಳಸುವ ಆಧಾರದ ಮೇಲೆ ಕೆಲವು ಸಣ್ಣ ಪುಟ್ಟ ಬದಲಾವಣೆಗಳಾಗುವ ಸಾಧ್ಯತೆಗಳಿದೆ ಎಂದು ತಿಳಿದು ಬಂದಿದೆ.












Click it and Unblock the Notifications