ಹೆಚ್ ಡಿ ಕುಮಾರಸ್ವಾಮಿ ಕಣ್ಣೀರು ಹಾಕುವುದು ಅದೊಂದೆ ಕಾರಣಕ್ಕೆ: ಕಾರಣ ಬಿಚ್ಚಿಟ್ಟ ಡಿ ಕೆ ಸುರೇಶ್
ಬೆಂಗಳೂರು, ನವೆಂಬರ್ 02: ಕಣ್ಣೀರಿನಲ್ಲಿ ಅನೇಕ ವಿಧಗಳಿವೆ. ಪದೇ ಪದೇ ಬರುವ ಕಣ್ಣೀರು, ನಾಟಕೀಯ ಕಣ್ಣೀರು, ಉದ್ವೇಗದ ಕಣ್ಣೀರು. ಕುಮಾರಸ್ವಾಮಿ ಹಾಕುವ ಕಣ್ಣೀರು ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರ ಇರುತ್ತದೆ. ಅವರಿಗೆ ಎಲ್ಲಾ ಸಂದರ್ಭದಲ್ಲೂ ಕಣ್ಣೀರು ಬರುವುದಿಲ್ಲ ಎಂದು ಮಾಜಿ ಸಂಸದ ಡಿ ಕೆ ಸುರೇಶ್ ಅವರು ಹೇಳಿದರು.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿ, ಜನನಾಯಕರು ಜನರ ಕಣ್ಣೀರು ಒರೆಸಬೇಕು. ಕಣ್ಣೀರು ಹಾಕಿ ಅನುಕಂಪ ಗಿಟ್ಟಿಸಿಕೊಳ್ಳುವುದು, ಕುಮಾರಸ್ವಾಮಿ ಕೇವಲ ಸ್ವಾರ್ಥಕ್ಕೆ ಎಂದು ಎಲ್ಲರಿಗೂ ಗೊತ್ತಿದೆ ಎಂದು ಡಿ ಕೆ ಸುರೇಶ್ ಅವರು ತಿಳಿಸಿದರು.

ಅಣೆಕಟ್ಟು ಕಟ್ಟಿದ್ದು ದೇವೇಗೌಡರು ಆಧುನಿಕ ಭಗೀರಥ ಎಂದು ಕರೆಸಿಕೊಂಡಿದ್ದು ಯೋಗೇಶ್ವರ್ ಎಂಬ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಕುರಿತು ಮಾತನಾಡಿ, ಇಕ್ಕಲೂರು ಅಣೆಕಟ್ಟು ಕಟ್ಟಲು ಆರಂಭಿಸಿದ್ದು, ಮಾನ್ಯ ವೀರೇಂದ್ರ ಪಾಟೀಲ್ ಅವರು. ಅದನ್ನು ಪ್ರಾರಂಭ ಮಾಡಿದ್ದು ಗುಂಡೂರಾವ್ ಅವರ ಕಾಲದಲ್ಲಿ. ಇವರು ಅದನ್ನು ನನ್ನದು ಎಂದು ಹೇಳಿಕೊಳ್ಳುತ್ತಿದ್ದಾರೆ. ಇವರ ಕಾಲದಲ್ಲಿ ಅನುದಾನದ ಪರಿಷ್ಕರಣೆಯಾಗಿದೆ. ಅಷ್ಟಕ್ಕೇ ಯೋಜನೆ ತಮ್ಮದು ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದರು.
ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಟೀಕೆ ಕುರಿತು ಮಾತನಾಡಿ, ನಮ್ಮ ಐದೂ ಗ್ಯಾರಂಟಿಗಳು ರಾಜ್ಯದ ಜನರ ಆರ್ಥಿಕ ಶಕ್ತಿ ಹೆಚ್ಚಿಸುತ್ತಿವೆ. ಇದು ಮಾನ್ಯ ಪ್ರಧಾನಮಂತ್ರಿಗಳಿಗೂ ಗೊತ್ತಿದೆ. ಕರ್ನಾಟಕದ ಈ ಮಾದರಿ ಮುಂದಿನ ದಿನಗಳಲ್ಲಿ ದೇಶದಲ್ಲಿ ಕಡ್ಡಾಯವಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಕೇಂದ್ರ ಸರ್ಕಾರವು ಈ ಯೋಜನೆಗಳನ್ನು ಅನಿವಾರ್ಯವಾಗಿ ಅಳವಡಿಸಿಕೊಳ್ಳುವ ಪರಿಸ್ಥಿತಿ ಉದ್ಭವವಾಗುತ್ತದೆ ಎಂಬುದನ್ನು ಪ್ರಧಾನಮಂತ್ರಿಗಳು ಅರ್ಥ ಮಾಡಿಕೊಳ್ಳಲಿದ್ದಾರೆ. ಪ್ರಧಾನಮಂತ್ರಿಗಳು ಗ್ಯಾರಂಟಿಗಳನ್ನು ಈಡೇರಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಇದನ್ನು ಈಡೇರಿಸುವುದೇ ಕಾಂಗ್ರೆಸ್ ಗುರಿ. ಕಾಂಗ್ರೆಸ್ ಪಕ್ಷ ಕೊಟ್ಟ ಭರವಸೆಗಳಿಂದ ಯಾವತ್ತೂ ಹಿಂದೆ ಸರಿದಿಲ್ಲ ಎಂದರು.
ಗ್ಯಾರಂಟಿ ಯೋಜನೆ ಬಗ್ಗೆ ಡಿಸಿಎಂ ಹಾಗೂ ಖರ್ಗೆ ಅವರ ಹೇಳಿಕೆಯಿಂದ ಪಕ್ಷಕ್ಕೆ ಹಿನ್ನಡೆಯಾಗುತ್ತಿದೆಯೇ ಎಂದು ಕೇಳಿದಾಗ, ಈ ಗ್ಯಾರಂಟಿ ಯೋಜನೆಯಲ್ಲಿ ಆದಾಯ ತೆರಿಗೆ, ಜಿಎಸ್ ಟಿ ಪಾವತಿದಾರರು, ಸರ್ಕಾರಿ ಅಧಿಕಾರಿಗಳು ಫಲಾನುಭವಿಗಳಾಗಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಈ ವಿಚಾರವಾಗಿ ಶಾಸಕರುಗಳಿಗೆ ದೂರು ಬರುತ್ತವೆ. ಅವಶ್ಯಕತೆ ಇರುವವರಿಗೆ ಮಾತ್ರ ಈ ಯೋಜನೆ ಸಿಗಲಿ ಎಂದು ಹೇಳುತ್ತಾರೆ. ಇಂತಹ ವಿಚಾರಗಳನ್ನು ಇಟ್ಟುಕೊಂಡು ಕೆಲವು ಶಾಸಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಅನ್ನಭಾಗ್ಯ ಯೋಜನೆಯಲ್ಲಿ ಹೆಚ್ಚುವರಿ ಐದು ಕೆ.ಜಿ ಅಕ್ಕಿ ಕೊಡಿ, ಹಣ ಬೇಡ ಎನ್ನುತ್ತಾರೆ. ಹೀಗಾಗಿ ಈ ಯೋಜನೆಯ ಅನುಕೂಲ ಪಡೆಯುತ್ತಿರುವವರನ್ನು ಗುರುತಿಸಬೇಕು.
ಯೋಜನೆ ಲಾಭ ಸಿಗದ ಅರ್ಹರನ್ನು ಇನ್ನು ಪರಿಣಾಮಕಾರಿಯಾಗಿ ಗುರುತಿಸಬೇಕು. ಇದು ಯೋಜನೆಯ ಪರಿಷ್ಕರಣೆಯಲ್ಲ. ಉದಾಹರಣೆಗೆ ರಾಮನಗರ ಜಿಲ್ಲೆಯಲ್ಲಿ ಶೇ 92 ರಷ್ಟು ಜನರಿಗೆ ಈ ಯೋಜನೆ ಲಾಭ ಸಿಗುತ್ತಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯಲ್ಲಿ ಹತ್ತಾರು ಸಾವಿರ ಮನೆಗಳಿಗೆ ಯೋಜನೆ ಸಿಕ್ಕಿರಲಿಲ್ಲ. ನಾವು ನಮ್ಮ ಕಾರ್ಯಕರ್ತರು, ಮುಖಂಡರನ್ನು ಬಿಟ್ಟು, ವಂಚಿತರಿಗೆ ಯೋಜನೆ ಸಿಗುವಂತೆ ಮಾಡಿದ್ದೆವು ಎಂದು ತಿಳಿಸಿದರು.
ಜನಗಣತಿ ನಂತರ ಕ್ಷೇತ್ರ ಪುನರ್ ವಿಂಗಡಣೆ ಮಾಡಿದರೆ ದಕ್ಷಿಣ ಭಾರತಕ್ಕೆ ಅನ್ಯಾಯವಾಗಲಿದೆ ಎಂಬ ಪ್ರಿಯಾಂಕ ಖರ್ಗೆ ಅವರ ಹೇಳಿಕೆ ಕುರಿತು ಮಾತನಾಡಿ, ನಾನು ಬಹಳ ಹಿಂದೆಯೇ ಈ ವಿಚಾರದ ಬಗ್ಗೆ ಹೇಳಿದ್ದೆ. ಕೇಂದ್ರ ಸರ್ಕಾರದಿಂದ ತೆರಿಗೆ ಹಂಚಿಕೆಯಲ್ಲಿ ಮೋಸ ಒಂದು ಭಾಗವಾದರೆ, ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರ ಪುನರ್ ವಿಂಗಡಣೆ ಮಾಡುವಾಗ ದಕ್ಷಿಣ ಭಾರತದ ರಾಜ್ಯಗಳಿಗೆ ಮತ್ತಷ್ಟು ಅನ್ಯಾಯವಾಗಲಿದೆ. ನಮ್ಮ ಹಕ್ಕು ಪ್ರತಿಪಾದನೆ ಕಷ್ಟವಾಗುತ್ತದೆ. ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದ್ದೆ. ಉತ್ತರ ಪ್ರದೇಶದಲ್ಲಿ ಕ್ಷೇತ್ರಗಳ ಸಂಖ್ಯೆ ದುಪ್ಪಟ್ಟು ಆಗಲಿದ್ದು,ದಕ್ಷಿಣ ಭಾರತದ ಕ್ಷೇತ್ರಗಳ ಸಂಖ್ಯೆ ಕುಸಿಯಲಿದೆ. ಹೀಗಾಗಿ ಬಹಳ ಜವಾಬ್ದಾರಿಯಿಂದ ನಮ್ಮ ಹಕ್ಕು ರಕ್ಷಣೆ ಮಾಡಿಕೊಳ್ಳಬೇಕು. ಇದರ ಬಗ್ಗೆ ಧ್ವನಿ ಎತ್ತಬೇಕು ಎಂದರು.












Click it and Unblock the Notifications