ಬಿಜೆಪಿ-ಜೆಡಿಎಸ್ ಮೈತ್ರಿ; ಇಂದು ಅಮಿತ್ ಶಾ ಹಾಗೂ ಕುಮಾರಸ್ವಾಮಿ ನಡುವೆ ಚರ್ಚೆಗೆ ಬರುವ ವಿಚಾರಗಳು ಇಲ್ಲಿವೆ
ಬೆಂಗಳೂರು, ಸೆಪ್ಟೆಂಬರ್ 21: 2024 ರ ಲೋಕಸಭಾ ಚುನಾವಣೆಗಾಗಿ ಕರ್ನಾಟಕದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಮೈತ್ರಿಗೆ ಭರ್ಜರಿ ಸಿದ್ದತೆ ನಡೆಯುತ್ತಿದ್ದು, ಬಿಜೆಪಿ ನಾಯಕರ ಜೊತೆ ಮೈತ್ರಿ ಕುರಿತು ಅಂತಿಮ ಹಂತದ ಚರ್ಚೆ ಮಾಡಲು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ದಿಲ್ಲಿಗೆ ತೆರಳಿದ್ದಾರೆ.
ಹೌದು, ಗುರುವಾರವೇ ಬಿಜೆಪಿ - ಜೆಡಿಎಸ್ ಮೈತ್ರಿ ಅಂತಿಮಗೊಳ್ಳುವ ಸಾಧ್ಯತೆ ಇದೆ. ಸೀಟು ಹಂಚಿಕೆಯ ಬಗ್ಗೆಯೂ ಅಂತಿಮ ನಿರ್ಧಾರ ಹೊರಬೀಳುವ ನಿರೀಕ್ಷೆ ಇದೆ. ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ.

ಈಗಾಗಲೇ ಹಲವು ದಿನಗಳ ಹಿಂದೆಯೇ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ವೇಳೆ ಉಭಯ ಪಕ್ಷಗಳ ನಡುವೆ ಮೈತ್ರಿ ಕುರಿತಂತೆ ಮಾತುಕತೆ ನಡೆದಿದೆ. ಅಲ್ಲದೇ ಕ್ಷೇತ್ರ ಹಂಚಿಕೆ ಕುರಿತು ಚರ್ಚೆಯಾಗಿದೆ. ಇದೀಗ ಮುಂದಿನ ಹಂತದ ಮಾತುಕತೆಗಾಗಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಅಮಿತ್ ಶಾ ಜೊತೆಗೆ ಚರ್ಚಿಸಿ ಅಂತಿಮಗೊಳಿಸಲಿದ್ದಾರೆ ಎನ್ನಲಾಗಿದೆ.
ಇನ್ನೂ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳನ್ನ ತಮಗೆ ಬಿಟ್ಟು ಕೊಡಲು ಬೇಡಿಕೆಯನ್ನ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಮುಂದಿಡುವ ಸಾಧ್ಯತೆ ಇದೆ. ಜೆಡಿಎಸ್ ಕೇಳಲು ನಿರ್ಧರಿಸಿರುವ ಆ ಕ್ಷೇತ್ರಗಳಲ್ಲಿ ಎರಡು ಅಥವಾ ಮೂರು ಕ್ಷೇತ್ರಗಳಲ್ಲಿ ಹಾಲಿ ಬಿಜೆಪಿಯ ಸಂಸದರಿರುವ ಸಂಭವವಿದೆ. ಹೀಗಾಗಿ ಹಲವು ಲೆಕ್ಕಾಚಾರಗಳನ್ನ ಹಾಕಿಕೊಂಡಿರುವ ಬಿಜೆಪಿ ನಾಯಕರು ಕುಮಾರಸ್ವಾಮಿ ಜೊತೆಗೆ ಚರ್ಚಿಸಿಲಿದ್ದಾರೆ.

ಈಗಾಗಲೇ ಐದು ಕ್ಷೇತ್ರಗಳನ್ನ ಜೆಡಿಎಸ್ ಕೇಳಿದ್ದು, ಹಾಸನ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ ಹಾಗೂ ಮಂಡ್ಯ ಕ್ಷೇತ್ರಗಳಿಗಾಗಿ ಜೆಡಿಎಸ್ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. ಮಂಡ್ಯ ಕ್ಷೇತ್ರದ ಬಗ್ಗೆ ಅಂತಿಮ ನಿರ್ಧಾರವಾಗಿಲ್ಲ ಎಂದು ಹೇಳಲಾಗಿದ್ದು, ಇಂದು ಅಂತಿಮ ಚರ್ಚೆ ನಡೆಯಲಿದೆ.
ಇಂದು ಚರ್ಚಗೆ ಬರಬಹುದಾದ ವಿಷಯಗಳು ಇಲ್ಲಿವೆ
ಲೋಕಸಭಾ ಚುನಾವಣೆಯಲ್ಲಿನ ಸ್ಥಾನಗಳ ಹೊಂದಾಣಿಕೆ ಕುರಿತು ಚರ್ಚೆಯಾಗಲಿದ್ದು, ಬಿಜೆಪಿ ಮತ್ತು ಜೆಡಿಎಸ್ ಯಾವ ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕು ಎಂಬುದು ಇತ್ಯರ್ಥವಾಗಲಿದೆ. ಇನ್ನೂ ಹಾಲಿ ಬಿಜೆಪಿ ಸಂಸದರಿರುವ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ಬಗ್ಗೆ ಬಿಜೆಪಿ ರಾಷ್ಟ್ರೀಯ ನಾಯಕರು ತಮ್ಮ ಸಂಸದರನ್ನು ಮನವೊಲಿಸುವುದು ಹೇಗೆ ಎನ್ನುವುದು ನಿರ್ಧಾರವಾಗಬೇಕು. ಇನ್ನೂ ಬಿಜೆಪಿ-ಜೆಡಿಎಸ್ ಮೈತ್ರಿ ಕೇವಲ ಲೋಕಸಭಾ ಚುನಾವಣೆಗೆ ಮಾತ್ರ ಸೀಮಿತವಾಗಿ ಇರಬೇಕೆ ಅಥವಾ ಮುಂದಿನ ಹಂತಕ್ಕೂ ಕೊಂಡೊಯ್ಯಬೇಕೆ ಎಂಬ ಬಗ್ಗೆ ಇಂದು ಚರ್ಚೆಯಾಗಲಿದೆ.
ಇನ್ನೂ ಲೋಕಸಭಾ ಚುನಾವಣೆ ಬಿಜೆಪಿ-ಜೆಡಿಎಸ್ ಮೈತ್ರಿ ಕುರಿತು ಈಗಾಗಲೇ ಹಲವು ನಾಯಕರ ವಿರೋಧಗಳು ಕೇಳಿ ಬಂದಿದ್ದು, ವಿರೋಧ ವ್ಯಕ್ತಪಡಿಸಿರುವ ಶಾಸಕರನ್ನಹೇಗೆ ಮನವೊಲಿಸಬೇಕು ಹಾಪಗೂ ಉಭಯ ಪಕ್ಷಗಳ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರ ನಡುವೆ ಸಮಸ್ಯೆ ಉದ್ಭವಿಸದಂತೆ ಹೇಗೆ ನಿಭಾಯಿಸಬೇಕು ಎನ್ನುವ ರೂಪುರೇಷೆ ಕುರಿತು ಚರ್ಚೆಯಾಗಲಿದೆ ಎನ್ನಲಾಗಿದೆ.
ದೆಹಲಿಗೆ ತೆರಳುವ ಮುನ್ನ ಕುಮಾರಸ್ವಾಮಿ ಹೇಳಿದ್ದೇನು?
ಇತ್ತ ದೆಹಲಿಗೆ ತೆರಳುವ ಮುನ್ನ ಬೆಂಗಳೂರಿನಲ್ಲಿ ಮೈತ್ರಿ ವಿಚಾರವಾಗಿ ಮಾತನಾಡಿದ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ, ಬಿಜೆಪಿ - ಜೆಡಿಎಸ್ ಮೈತ್ರಿ ವಿಚಾರವಾಗಿ ಶುಕ್ರವಾರ ಮಾತನಾಡುತ್ತೇನೆ. ಎಷ್ಟು ಸೀಟ್ ಅಂತಾ ನಾವು ಚರ್ಚಿಸಿಲ್ಲ, ಬಿಜೆಪಿಯೂ ಚಿಂತನೆ ಮಾಡಿಲ್ಲ. 28 ಲೋಕಸಭಾ ಕ್ಷೇತ್ರಗಳ ಇಂದಿನ ಪರಿಸ್ಥಿತಿ ಅವಲೋಕಿಸಿ ಚರ್ಚೆ ಮಾಡುತ್ತೇವೆ. ಮೈತ್ರಿ ವಿಚಾರವಾಗಿ ಗುರುವಾರ ಸಂಜೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಜೊತೆ ಚರ್ಚೆ ಮಾಡುವುದಾಗಿ ಹೇಳಿದ್ದಾರೆ.
ಅವಶ್ಯಕತೆ ಬಿದ್ದರೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರು ಬಿಜೆಪಿ ಜೆಡಿಎಸ್ ಮೈತ್ರಿ ಬಗ್ಗೆ ಚರ್ಚಿಸುತ್ತಾರೆ. ಎಲ್ಲ ಮಾಹಿತಿಯನ್ನು ದಿಲ್ಲಿಯಲ್ಲಿಯೇ ಹೇಳುತ್ತೇವೆ ಎಂದು ತಿಳಿಸಿದರು.












Click it and Unblock the Notifications