Bajrang Dal: ಕಾಂಗ್ರೆಸ್ 5 ವರ್ಷ ಅಧಿಕಾರದಲ್ಲಿ ಇದ್ದಾಗ ಬಜರಂಗ ದಳವನ್ನು ಬ್ಯಾನ್ ಮಾಡಲಿಲ್ಲ, ಏಕೆ?: ಎಚ್ ಡಿ ಕುಮಾರಸ್ವಾಮಿ
ಕೊಪ್ಪಳ,ಮೇ3: ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಬಜರಂಗದಳ ಬ್ಯಾನ್ ನಿಂದ ರಾಜ್ಯ ರಾಜಕಾರಣದಲ್ಲಿ ಚುನಾವಣಾ ಬಿಸಿ ಇನ್ನಷ್ಟು ಜೋರಾಗಿದೆ. ಕಾಂಗ್ರೆಸ್ 5 ವರ್ಷ ಅಧಿಕಾರದಲ್ಲಿ ಇದ್ದಾಗ ಬಜರಂಗ ದಳವನ್ನು ಬ್ಯಾನ್ ಮಾಡಲಿಲ್ಲ, ಏಕೆ? ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಈ ಕುರಿತು ಕೊಪ್ಪಳದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಬಜರಂಗ ದಳವನ್ನು ನಿಷೇಧ ಮಾಡಲಾಗುವುದು ಎಂದು ಘೋಷಣೆ ಮಾಡಿದೆ. ಬ್ಯಾನ್ ಮಾಡಿದ್ರೆ ಸಮಸ್ಯೆಗೆ ಪರಿಹಾರ ಆಗುತ್ತಾ? ಎರಡೂ ಪಕ್ಷಗಳು ಈ ಬಗ್ಗೆ ಯೋಚನೆ ಮಾಡಬೇಕು ಎಂದು ಟಾಂಗ್ ನೀಡಿದರು.

ಬಜರಂಗದಳದಲ್ಲಿ ಅಮಯಾಕರನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅವರ ಮನಸ್ಸು ಕೆಡಿಸಿ ಹಾಳು ಮಾಡಲಾಗುತ್ತಿದೆ. ಅವರ ತಲೆಯಲ್ಲಿ ಏನೆನೋ ತುಂಬಿ ಅವರನ್ನ ಹಾಳು ಮಾಡ್ತಿದ್ದಾರೆ. ಅಮಾಯಕರನ್ನು ಚಿತಾವಣೆ ಮಾಡೋರನ್ನು ಮೊದಲು ಮಟ್ಟಹಾಕಬೇಕು. ಅದು ಬಿಟ್ಟು ಬ್ಯಾನ್ ಮಾಡ್ತಿನಿ ಅಂದ್ರೆ ಉಪಯೋಗ ಏನು? ಕಾಂಗ್ರೆಸ್ ನವರು ಐದು ವರ್ಷ ಅಧಿಕಾರದಲ್ಲಿ ಇದ್ದಾಗ ಇವರು ಯಾಕೆ ಬ್ಯಾನ್ ಮಾಡಲಿಲ್ಲ ಎಂದು ಕುಟುಕಿದರು.
ರಾಜ್ಯದಲ್ಲಿ ಪ್ರವಾಹ, ನೆರೆ ಬರಗಳಂತ ಕಷ್ಟದಲ್ಲಿದ್ದಾಗ ಪ್ರಧಾನಿ ಮೋದಿ ಅವರು ಬರಲಿಲ್ಲ. ಈಗ ಚುನಾವಣೆ ಹೊತ್ತಲಿ ಬಂದು ರೋಡ್ ಶೋ ಮಾಡಿ ಕೈ ಬೀಸಿ ಹೋಗುತ್ತಿದ್ದಾರೆ ಎಂದು ಪ್ರಧಾನಿ ಮೋದಿ ವಿರುದ್ದ ಕಿಡಿಕಾರಿದರು.
ಮೋದಿಯವರು ನಮ್ಮನ್ನು ಟೀಕೆ ಮಾಡ್ತಿದ್ದಾರೆ. ನಮಗೆ ಸಿದ್ದಾಂತ ಇಲ್ಲ ಎನ್ನುತ್ತಿದ್ದಾರೆ. ನಾವು ಬಿಜೆಪಿ ಜತೆ ಮೈತ್ರಿ ಮಾಡಿಕೊಂಡರೆ ಸಿದ್ದಾಂತ ಸರಿಯಾಗುತ್ತದಾ? ಕಾಂಗ್ರೆಸ್ ಜತೆ ಹೋದರೆ ಸೈದ್ದಾಂತಿಕತೆ ಸರಿ ಇರಲ್ವಾ? ಎಂದು ಪ್ರಧಾನಿಗೆ ತಿರುಗೇಟು ತಿರುಗೇಟು ನೀಡಿದರು.

ಕಲ್ಯಾಣ ಕರ್ನಾಟಕ ಭಾಗಕ್ಕೆ ಅತೀ ಹೆಚ್ಚು ಕೊಡುಗೆ ಕೊಟ್ಟವನು ನಾನು. ಸಾಲ ಮನ್ನಾ ಮಾಡಿ ರೈತರ ಜೀವ ಉಳಿಸಿದ್ದು ನಾನು. ಅದನ್ನು ಮೋದಿ ಮಾಡಿದ್ರಾ? ಮೋದಿಯವರ ವರ್ಚಸ್ಸು ಕಡಿಮೆಯಾಗಿದೆ. ಅವರ ಪ್ರಚಾರ ಈ ಸಲ ಚುನಾವಣೆ ಮೇಲೆ ಪರಿಣಾಮ ಬೀರಲ್ಲ. 9 ವರ್ಷ ಆಯಿತಲ್ಲಾ, ಅವರ ವರ್ಚಸ್ಸು ಕೂಡ ಕಡಿಮೆಯಾಗಿದೆ ಎಂದು ಲೇವಡಿ ಮಾಡಿದರು.
ರಾಜ್ಯದಲ್ಲಿ ಮೋದಿ ಪ್ರಚಾರದಿಂದ ನಮಗೆ ಜೋಶ್ ಬಂದಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿಕೆ ಉತ್ತರಿಸಿದ ಅವರು, ಅವರು ಹಾಗೇ ಹೇಳಲೇಬೇಕು. ಅವರಿಗೆ ಬೇರ ಗತಿಯಲ್ಲ, ಮೋದಿ ಮುಖ ತೋರಿಸಿ ವೋಟ್ ಕೇಳ್ತಿದ್ದಾರೆ. ಬೊಮ್ಮಾಯಿ ಮುಖ ತೋರಿಸಿ ವೋಟ್ ಕೇಳಗಾಗುತ್ತಾ? ಅವರು ಏನ್ ಶ್ರಮ ಹಾಕಿದರೂ ಹಳೆ ಮೈಸೂರು ಭಾಗದಲ್ಲಿ 10 ಸೀಟ್ ಗೆಲ್ಲಲ್ಲ. ಹೋದ ಬಾರಿ ಗೆದ್ದ ಕ್ಷೇತ್ರಗಳು ಕೂಡಾ ಬಿಜೆಪಿ ಕಳೆದುಕೊಳ್ಳುತ್ತೆ. ಶಿವಮೊಗ್ಗದವರೆಗೂ ಬಿಜೆಪಿ ಎಷ್ಟು ಗಳಿಸುತ್ತೆ ಎನ್ನುವುದನ್ನು ನೋಡಿ. ಈ ಭಾರಿ ನಂಜನಗೂಡು, ಗುಂಡ್ಲಪೇಟೆ, ಮಡಿಕೇರಿಯಲ್ಲಿ ಕೂಡ ಬಿಜೆಪಿ ಗೆಲ್ಲಲ್ಲ ಎಂದು ಹೇಳಿದರು
ಚನ್ನಪಟ್ಟಣದಲ್ಲಿ ಮೋದಿ ಪ್ರಚಾರ ಮಾಡಿದ್ದಾರೆ. ಅದರಿಂದ ಏನಾಯ್ತು? ಅವರು ಬಂದರು ಹೋದರು. ನಾನು ಇನ್ನು ಚನ್ನಪಟ್ಟಣಕ್ಕೆ ಹೋಗಿಲ್ಲ. ಅಲ್ಲಿನ ಜನ ಮಕ್ಕಳಂತೆ ನಮ್ಮನ್ನು ಸಲಹಿದ್ದಾರೆ. ಇವರು ಬಂದು ದೂರದ ಬೆಟ್ಟ ತೋರಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಕಲ್ಯಾಣಕ ಕರ್ನಾಟಕಕ್ಕೆ ಬಿಜೆಪಿಯ ಕೊಡುಗೆ ಏನು? ಕೃಷ್ಣಾ ನ್ಯಾಯಧಿಕರಣದ ತೀರ್ಪು ಬಂದು ಹತ್ತು ವರ್ಷ ಆಯಿತು. ಈ ಭಾಗಕ್ಕೆ, ಮುಖ್ಯವಾಗಿ ನೀರಾವರಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಏನು ಮಾಡಿವೆ? ಜೆಡಿಎಸ್, ಕಾಂಗ್ರೆಸ್ ರೈತರಿಗೆ ಅನ್ಯಾಯ ಮಾಡಿವೆ ಅಂತಾರೆ ಮೋದಿ ಅವರು. ಹಾಗಾದರೆ, ಅವರು ರೈತರಿಗೆ ಎನ್ ಮಾಡಿದ್ದಾರೆ ಎಂದು ಹೇಳಬೇಕಲ್ಲವೆ? ಅವರ ಫಸಲ್ ಭಿಮಾ ಯೋಜನೆಯ ಪ್ರೀಮಿಯಂ ಹಣವನ್ನೆ ಕೊಡಲಿಲ್ಲ. ಆ ಯೋಜನೆ ಮೋಸದ ಬಗ್ಗೆ ಇಡೀ ದೇಶದ ಉದ್ದಗಲಕ್ಕೂ ಚರ್ಚೆ ಆಗ್ತಿದೆ. ಇದಕ್ಕೆ ಮೋದಿ ಉತ್ತರ ಏನು ಎಂದು ಕೇಳಿದರು.
ಇಷ್ಟು ದಿನ ಏನನ್ನೂ ಮಾಡದವರು ಈಗ ಬಂದು ನಲ್ಲಿಯಲ್ಲಿ ನೀರು ಕೊಡ್ತಿನಿ ಅಂತ ಮೋದಿ ಹೇಳ್ತಾ ಇದ್ದಾರೆ. ಯಾವ ಗ್ರಾಮದಲ್ಲಿ ಜಲ್ ಜೀವನ್ ಮಿಷನ್ ಯಶಸ್ವಿಯಾಗಿದೆ? ಹಣ ಕೆಲವರ ಕಿಸಿಗೆ ಹರಿದಿದೆಯೇ ಹೊರತು ನೀರು ಹರಿದಿಲ್ಲ. ಇದರಲ್ಲಿ ಸಂಬಂಧ ಪಟ್ಟ ಮಂತ್ರಿಗಳು ಸಂಪದ್ಭರತರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications