ಸ್ಯಾಂಟ್ರೋ ರವಿ ಜತೆ ಬಿಜೆಪಿ ಸಚಿವರ ಸಂಪರ್ಕ; ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸ್ಪೋಟಕ ಮಾಹಿತಿ
ಬೆಂಗಳೂರು, ಜ. 04: ವರದಕ್ಷಿಣಿ ಕಿರುಕುಳ, ಜಾತಿ ನಿಂದನೆ, ಹಲ್ಲೆ, ವಂಚನೆ ಸೇರಿ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ಸ್ಯಾಂಟ್ರೋ ರವಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈ ಬೆನ್ನಲ್ಲೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪೋಟಕ ಮಾಹಿತಿಗಳನ್ನು ಹೊರಹಾಕಿದ್ದಾರೆ.
ಸ್ಯಾಂಟ್ರೋ ರವಿ ಮತ್ತು ರಾಜ್ಯ ಬಿಜೆಪಿ ನಾಯಕರಿಗೆ ಸಂಬಂಧವಿದೆ ಎಂದು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
2018ರ ತಮ್ಮ ನೇತೃತ್ವದ ಸಮ್ಮಿಶ್ರ ಸರ್ಕಾರವವನ್ನು ಉರುಳಿಸಲು ಯಾರನ್ನೆಲ್ಲ ಬಳಕೆ ಮಾಡಿಕೊಳ್ಳಲಾಯಿತು..? ಬಾಂಬೆಗೆ ಹೋದವರ ಮೋಜು ಮಸ್ತಿಗೆ ಸಕಲ ವ್ಯವಸ್ಥೆ ಮಾಡಿದರು ಯಾರು..? ಎಂಬ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಮೈಸೂರು ಪೊಲೀಸರು ಎಫ್‌ಐಆರ್ ದಾಖಲು ಮಾಡಿರುವ ಸ್ಯಾಂಟ್ರೋ ರವಿ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ಕೆಲ ಪ್ರಭಾವಿ ಸಚಿವರ ನಡುವೆ ಇರುವ ಸಂಬಂಧ ಏನು..? ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲೇಬೇಕು ಎಂದು ಆಗ್ರಹಿಸಿದ್ದಾರೆ.

ಬಿಜೆಪಿ ನಾಯಕರಿಂದ ಈ ರಾಜ್ಯ ಉಳಿಯಲು ಸಾಧ್ಯವಿಲ್ಲ
ಈ ರಾಜ್ಯವು ಬಿಜೆಪಿ ನಾಯಕರಿಂದ ಉಳಿಯಲು ಸಾಧ್ಯವಿಲ್ಲ. ಸ್ಯಾಂಟ್ರೋ ರವಿ ಎಂಬಾತ ಅನೇಕ ಸಚಿವರ ಜತೆ ನಂಟು ಹೊಂದಿದ್ದಾನೆ. ಫೋಟೋಗಳನ್ನು ತೆಗೆಸಿಕೊಂಡಿದ್ದಾನೆ. ಆದರೆ, ಶಿಕ್ಷಣ ಸಚಿವ ನಾಗೇಶ್ ಅವರ ಜತೆ ಅದೇಗೆ ಹೋಗಿ ಫೋಟೋ ತೆಗೆಸಿಕೊಂಡನೋ ಗೊತ್ತಿಲ್ಲ ಎಂದು ಕುಮಾರಸ್ವಾಮಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.
17 ಜನ ಮಂತ್ರಿಗಳು ತಮ್ಮ ವಿರುದ್ಧ ಸುದ್ದಿವಾಹಿನಿಗಳಲ್ಲಿ ಕೆಲ ವಿಷಯಗಳನ್ನು ಪ್ರಸಾರ ಮಾಡಬಾರದು ಎಂದು ಕೋರ್ಟ್ ನಿಂದ ತಡೆಯಾಜ್ಞೆ ತಂದರಲ್ಲ, ಬಾಂಬೆಗೆ ಇಲ್ಲಿಂದ ಶಾಸಕರನ್ನು ಮೋಜು ಮಾಡಲು ಕರೆದುಕೊಂಡು ಹೋದರಲ್ಲ, ಈ ಡೋಂಗಿ ಬಿಜೆಪಿ ಎಲ್ಲರಿಗೂ, ಗೌರವ ಕೊಡುವ ಪಕ್ಷ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಾರಲ್ಲ, ಹಾಗಾದರೆ, ನನ್ನ ನೇತೃತ್ವದ ಮೈತ್ರಿ ಸರ್ಕಾರ ಕೆಡವಲು ಕೆಲವರನ್ನು ಕರೆದುಕೊಂಡು ಹೋದರಲ್ಲ, ಆ ವ್ಯಕ್ತಿ ಯಾರು..? ಎಂದು ಪ್ರಶ್ನಿಸಿದ್ದಾರೆ.
ಬೀದರ್ ಮತ್ತು ಕಲಬುರ್ಗಿ ಜಿಲ್ಲೆಗಳಲ್ಲಿ ಪಂಚರತ್ನ ರಥಯಾತ್ರೆ ಮುಗಿಸಿಕೊಂಡು ಬಂದ ಮೇಲೆ ವಿವರವಾಗಿ ಈ ಬಗ್ಗೆ ಮಾತನಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಸ್ಯಾಂಟ್ರೋ ರವಿ- ಬಿಜೆಪಿಗರ ನಡುವಿನ ಸಂಬಂಧದ ಬಗ್ಗೆ ತನಿಖೆ ಮಾಡಿಸಲಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಮ್ಮು ತಾಕತ್ತು ಬಗ್ಗೆ ಮಾತನಾಡುತ್ತಾರೆ, ಈ ವಿಷಯದಲ್ಲಿ ಅವರು ದಮ್ಮು ತಾಕತ್ತು ತೋರಿಸಲಿ ಎಂದು ಟಾಂಗ್ ನೀಡಿದ್ದಾರೆ.
ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಬೇಕು. ಸದಾ ದಮ್ಮು ತಾಕತ್ತು ಬಗ್ಗೆ ಮಾತನಾಡುವ ಇವರು, ಸ್ಯಾಂಟ್ರೋ ರವಿ ಮತ್ತು ತಮ್ಮ ಸಂಪುಟದ ಸಚಿವರ ನಡುವೆ ಇರುವ ಸಂಬಂಧದ ಬಗ್ಗೆ ತನಿಖೆಗೆ ಆದೇಶ ನೀಡಲಿ ಎಂದು ಸವಾಲು ಹಾಕಿದ್ದಾರೆ.
ಸ್ಯಾಂಟ್ರೋ ರವಿ ಎನ್ನುವ ಈ ವ್ಯಕ್ತಿ ಯಾರು..? ಈ ಸರಕಾರದಲ್ಲಿ ಯಾರೊಂದಿಗೆ ಈತನ ಸಂಪರ್ಕ ಇದೆ. ಈತನ ಬಗ್ಗೆ ಮಾಹಿತಿಯನ್ನು ರಹಸ್ಯವಾಗಿಡಿ ಎಂದು ಯಾರಿಗೆ ಸೂಚನೆ ಕೊಟ್ಟಿದ್ದೀರಿ..? ಎಂದು ಪ್ರಶ್ನಿಸಿದ್ದಾರೆ.

ಕುಮಾರಕೃಪ ಅತಿಥಿ ಗೃಹದಲ್ಲಿ ಸ್ಯಾಂಟ್ರೋ ರವಿಗೆ ಕೊಠಡಿ!
ಸ್ಯಾಂಟ್ರೋ ರವಿ ಮೇಲೆ ಕೇಸುಗಳು ಎಷ್ಟಿವೆ..? ಸ್ಯಾಂಟ್ರೋ ರವಿಗೆ ಐದು ಹೆಸರುಗಳಿವೆ. 1995 ರಿಂದಲೂ ಈತನ ಮೇಲೆ ಕೇಸುಗಳಿವೆ. ಮೈಸೂರು, ಬೆಂಗಳೂರುನಲ್ಲಿ ಎಷ್ಟೋ ಕೇಸ್ ಇವೆ..? ಕಳೆದ ತಿಂಗಳವರೆಗೆ ಕುಮಾರಕೃಪ ಅತಿಥಿ ಗೃಹದಲ್ಲಿ ಇವನಿಗೆ ಕೊಠಡಿ ಕೊಟ್ಟವರು ಯಾರು? ಕೊಠಡಿ ಕೊಡುವಂತೆ ಯಾರು ಶಿಫಾರಸು ಮಾಡಿದ್ದರು? ಇದೆಲ್ಲವನ್ನು ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ರಾಜ್ಯದ ಜನತೆಗೆ ತಿಳಿಸಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಕುಮಾರಕೃಪದಲ್ಲಿ ಕೂತು ಈತ ಭಾರೀ ವ್ಯವಹಾರ ನಡೆಸಿದ್ದಾನೆ. ಇವನ ಹಿಂದೆ ಅಡಗಿ ಕೂತಿರುವ ಅಸಲಿ ವ್ಯಕ್ತಿ ಯಾರು? ಪೊಲೀಸ್ ಅಧಿಕಾರಿಗೆ ಇವನು ಮೊಬೈಲ್ ಕರೆ ಮಾಡಿ, ನಾಳೆ ಬಂದು ನೋಡು ಅಂತ ಹೇಳುತ್ತಾನೆ. ತನ್ನ ಸರ್ ಎಂದು ಕರೆಯುವಂತೆ ಆ ಪೊಲೀಸ್ ಅಧಿಕಾರಿಗೆ ತಾಕೀತು ಮಾಡುತ್ತಾನೆ. ಇದೆಲ್ಲಾ ದಾಖಲೆ ಇದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.

ದಲಿತ ಹೆಣ್ಣು ಮಗಳು ಸ್ಯಾಂಟ್ರೋ ರವಿ ಮೇಲೆ ದೂರು ನೀಡಿದ್ದಾರೆ
ದಲಿತ ಕುಟುಂಬದ ಹೆಣ್ಣು ಮಗಳು ಇವನ ಮೇಲೆ ಕಂಪ್ಲೇಂಟ್ ಕೊಟ್ಟಿದ್ದಾರೆ. ಇಂಥವನ ಹೆಗಲ ಮೇಲೆ ಕೇಸರಿ ಟವೆಲ್ ಹಾಕಿ ಪಕ್ಷಕ್ಕೆ ಸೇರಿಸಿಕೊಂಡ ಬಿಜೆಪಿ ನಾಯಕರಿಗೆ ನಾಚಿಕೆ ಆಗಬೇಕು. ನಮ್ಮ ಮೇಲೆ ಟ್ರೋಲ್ ಮಾಡುವ ಬಿಜೆಪಿ ಸೋಷಿಯಲ್ ಮೀಡಿಯಾವರು, ದಮ್ಮು, ತಾಕತ್ತು ಇದ್ದರೆ ಈ ವಿಷಯವನ್ನು ಟ್ರೋಲ್ ಮಾಡಲಿ ಎಂದು ಕಿಡಿಕಾರಿದ್ದಾರೆ.
ಇನ್ನು, ಪ್ರದೀಪ್ ಎಂಬ ವ್ಯಕ್ತಿ ಶೂಟ್ ಮಾಡಿಕೊಂಡು ಸಾವನ್ನಪ್ಪಿದ ಘಟನೆ ಬಗ್ಗೆ ಪ್ರಸ್ತಾಪ ಮಾಡಿದ ಕುಮಾರಸ್ವಾಮಿ , ಅರವಿಂದ ಲಿಂಬಾವಳಿ ಹಾಗೂ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲ್ಪಟ್ಟಿರುವ ಗೋಪಿಗೆ ಏನು ಸಂಬಂಧ? ಎಂದು ಪ್ರಶ್ನಿಸಿದ್ದಾರೆ.
ಮುಂದುವರಿದು, "ನನಗಿರುವ ಮಾಹಿತಿ ಪ್ರಕಾರ ಗೋಪಿ ಮುಖಾಂತರ 50 ರಿಂದ 60 ಕೋಟಿ ರೂಪಾಯಿ ಸಂಗ್ರಹ ಆಗಿದೆ. ಮುಖ್ಯವಾಗಿ ಬಿಲ್ಡರುಗಳಿಂದ ಹಣ ಕೀಳಲಾಗಿದೆ. ಈ ಕಾರಣಕ್ಕೆ ಲಿಂಬಾವಳಿ ಸಚಿವ ಸ್ಥಾನ ಕಳೆದುಕೊಂಡರಾ..? ಈ ಬಗ್ಗೆ ಜನರಿಗೆ ಗೊತ್ತಾಗಬೇಕು. ಬಿಲ್ದರುಗಳನ್ನು ದರ್ಜೇವಾರು ವಿಭಜಿಸಿ ಹಣ ವಸೂಲಿ ಮಾಡುತ್ತಿದ್ದರಲ್ಲ, ಆ ಹಣವನ್ನು ಸಂಗ್ರಹ ಮಾಡಿದವರು ಯಾರು..? ಯಾವ ಅಪಾರ್ಟ್ ಮೆಂಟ್ ನಲ್ಲಿ ಈ ವ್ಯವಹಾರ ನಡೆಯಿತು ಎನ್ನುವುದು ಜನಕ್ಕೆ ಗೊತ್ತಾಗಬೇಕಿದೆ" ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಜೆಪಿ ವಿರುದ್ದ ಆರೋಪಗಳ ಪಟ್ಟಿಯನ್ನೇ ಮಾಧ್ಯಮಗಳ ಮುಂದಿಟ್ಟಿದ್ದಾರೆ.












Click it and Unblock the Notifications