ಮಲೆನಾಡು, ಕರಾವಳಿಗೆ ಸೇತುವೆಗಳ ಕೊಡುಗೆ ಘೋಷಿಸಿದ ಕುಮಾರಸ್ವಾಮಿ
Recommended Video

ಬೆಂಗಳೂರು, ಅಕ್ಟೋಬರ್ 23: ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರಕ್ಕೆ ಐದು ತಿಂಗಳು ಪೂರೈಸಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ 150 ದಿನಗಳ ಸಾಧನೆಯನ್ನು ತೆರೆದಿಟ್ಟಿದ್ದಾರೆ.
ಸಾಲಮನ್ನಾ, ಋಣ ಪರಿಹಾರ ಕಾಯ್ದೆ, ಕೊಡಗು ಅಭಿವೃದ್ಧಿ, ಶಿಕ್ಷಣ ಸೇರಿದಂತೆ ವಿವಿಧ ವಲಯಗಳ ಅಭಿವೃದ್ಧಿಗೆ ಬಿಡುಗಡೆ ಮಾಡಿರುವ ಅನುದಾನಗಳು, ಯೋಜನೆಗಳ ಬಗ್ಗೆ ಕುಮಾರಸ್ವಾಮಿ ಮಂಗಳವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ವಿವರಿಸಿದರು.
ಈ ಬಾರಿ ಮುಖ್ಯವಾಗಿ ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ಅತಿವೃಷ್ಟಿಯಿಂದ ರಸ್ತೆ ಮತ್ತು ಸೇತುವೆಗಳು ಹಾನಿಗೊಳಗಾಗಿವೆ. ಅಲ್ಲದೆ, ಅನೇಕ ಕಡೆ ಊರುಗಳ ನಡುವೆ ಸಂಪರ್ಕ ಕಲ್ಪಿಸಲು ನದಿಗಳು, ಹಳ್ಳಗಳಿಗೆ ಅಡ್ಡಲಾಗಿ ಸೇತುವೆಗಳಿಲ್ಲ. ಹೆಚ್ಚಿನ ಕಡೆ ಸಣ್ಣ ತೂಗುಸೇತುವೆಗಳನ್ನು ನಿರ್ಮಿಸಲಾಗಿದ್ದು, ಅವುಗಳೂ ಅಪಾಯಕಾರಿ ಸ್ಥಿತಿಯಲ್ಲಿವೆ.
ಹೀಗಾಗಿ ರಾಜ್ಯದೆಲ್ಲೆಡೆ ಸಂಪರ್ಕ ಸೌಲಭ್ಯವನ್ನು ಸುಧಾರಿಸುವ ಸಲುವಾಗಿ ಶಾಲಾ ಸಂಪರ್ಕ ಸೇತು ಎಂಬ ಹೊಸ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ಶಾಲಾ ಸಂಪರ್ಕ ಸೇತು
ರಾಜ್ಯದ ಮಲೆನಾಡು ಹಾಗೂ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ತೋಡು, ಹಳ್ಳ-ಕೊಳ್ಳಗಳನ್ನು ದಾಟಲು ಬಳಸುವ ಅಪಾಯಕಾರಿ ಸ್ಥಿತಿಯಲ್ಲಿರುವ ಸಣ್ಣ ತೂಗುಸೇತುವೆ, ಕಾಲು ಸಂಕಗಳ ಬದಲಿಗೆ ಶಾಶ್ವತ ಸೇತುವೆಗಳನ್ನು ನಿರ್ಮಿಸಲು ಶಾಲಾ ಸಂಪರ್ಕ ಸೇತು ಯೋಜನೆಯನ್ನು ಹೊಸದಾಗಿ ರೂಪಿಸಲಾಗಿದೆ.

444 ತೂಗುಸೇತುವೆ
ಶಾಲಾ ಸಂಪರ್ಕ ಸೇತು ಯೋಜನೆಗಾಗಿ ಮೊದಲ ಹಂತದಲ್ಲಿ ಕರಾವಳಿ ಭಾಗದ 3 ಜಿಲ್ಲೆಗಳು ಹಾಗೂ ಮಲೆನಾಡು ಭಾಗದ 4 ಜಿಲ್ಲೆಗಳ ಒಟ್ಟು 444 ತೂಗುಸೇತುವೆಗಳನ್ನು ಗುರುತಿಸಲಾಗಿದ್ದು, ಅಲ್ಲಿ ಶಾಶ್ವತ ಸಂಪರ್ಕ ಸೇತುವೆ ನಿರ್ಮಿಸಲಾಗುವುದು.
ಇದಕ್ಕಾಗಿ ಪ್ರಸಕ್ತ ವರ್ಷ 100 ಕೋಟಿ ರೂ. ಅನುದಾನ ಒದಗಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಚುರುಕು
ರಾಜ್ಯದಲ್ಲಿ ಪ್ರಗತಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಳ್ಳಲು ಇರುವ ಅಡೆತಡೆಗಳನ್ನು ನಿವಾರಿಸಲು ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಮನ್ವಯ ಸಭೆಗಳನ್ನು ಕಾಲ ಕಾಲಕ್ಕೆ ನಡೆಸಲಾಗುತ್ತಿದೆ.
ಭೂಸ್ವಾಧೀನ ಪ್ರಕ್ರಿಯೆ, ವಿದ್ಯುತ್ ಕಂಬಗಳ ಸ್ಥಳಾಂತರ ಮತ್ತಿತರ ಸಮಸ್ಯೆಗಳನ್ನು ಸಮನ್ವಯ ವಹಿಸಿ ಶೀಘ್ರವಾಗಿ ಪರಿಹರಿಸಿ ಕ್ರಮ ಕೈಗೊಳ್ಳಲು ಇದರಿಂದ ಅನುಕೂಲವಾಗಿದೆ.

ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ
ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಹಂತ 3 ರ ಕಾಮಗಾರಿಗಳು ಅಂತಿಮ ಹಂತದಲ್ಲಿದ್ದು, ಹಂತ 4 ರ ಅಡಿ 3,500 ಕೋಟಿ ರೂ ವೆಚ್ಚದಲ್ಲಿ 2720 ಕಿ.ಮೀ. ಉದ್ದದ ರಸ್ತೆ ಸುಧಾರಣೆ ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.












Click it and Unblock the Notifications