ಸದನದಿಂದ ಶಾಸಕರ ಅಮಾನತು; ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಎಚ್.ಡಿ. ಕುಮಾರಸ್ವಾಮಿ ಕಿಡಿ
ಬೆಂಗಳೂರು, ಜುಲೈ. 19: ವಿಧಾನಸಭೆಯಲ್ಲಿ ಪ್ರತಿಪಕ್ಷ ಶಾಸಕರನ್ನು ಕಲಾಪದಿಂದ ಅಮಾನತು ಮಾಡಿರುವ ಕ್ರಮ ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಬಿಜೆಪಿ ಜೊತೆ ಪ್ರತಿಭಟನೆಗೆ ಕುಳಿತು ಎಚ್.ಡಿ ಕುಮಾರಸ್ವಾಮಿ ಬೆಂಬಲ ನೀಡಿದ್ದಾರೆ.
ವಿಧಾನಸೌಧದ ಬಳಿ ಮಾಧ್ಯಮಗಳ ಜತೆ ಮಾತನಾಡಿದ ಎಚ್.ಡಿ ಕುಮಾರಸ್ವಾಮಿ, ಸ್ಪೀಕರ್ ಅವರು ಉದ್ದೇಶಪೂರ್ವಕವಾಗಿ ಶಾಸಕರನ್ನು ಅಮಾನತು ಮಾಡಿದ್ದಾರೆ. ಮುಖ್ಯಮಂತ್ರಿಯ ಸನ್ನೆ ಮೇರೆಗೆ ಸ್ಪೀಕರ್ ಹುಡುಗಾಟಿಕೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು, ಪ್ರತಿಪಕ್ಷಗಳ ಒಕ್ಕೂಟಕ್ಕೆ ಇಂಡಿಯಾ ಎಂದು ಹೆಸರಿಟ್ಟು, ಇವತ್ತು ಪ್ರತಿಪಕ್ಷಗಳನ್ನು ಹತ್ತಿಕ್ಕಲು ಹೊರಟಿದ್ದಾರೆ. ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದಾರೆ. ಸರ್ಕಾರದ ಬಲ್ಡೋಜ್ ನೀತಿ ಸರಿಯಲ್ಲ ಎಂದಿದ್ದಾರೆ.

ಪೀಠದಲ್ಲಿ ದಲಿತರು ಕುಳಿತುಕೊಂಡಿದ್ದಾರೆ ಅನ್ನುವ ಕಾಂಗ್ರೆಸ್ ಆರೋಪದ ಬಗ್ಗೆ ಕಿಡಿಕಾರಿದ ಮಾಜಿ ಮುಖ್ಯಮಂತ್ರಿ, ಇದು ಕ್ಷುಲ್ಲಕ, ಕೀಳು ಮಟ್ಟದ ಅಭಿರುಚಿ. ದಲಿತರ ಅನುಕುಂಪ ಪಡೆಯಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಆ ಪೀಠದಲ್ಲಿ ಕುಳಿತಿರೋರು ಉಪ ಸಭಾಧ್ಯಕ್ಷರು. ಆ ವಿಷಯವನ್ನು ಕಾಂಗ್ರೆಸ್ ನವರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
"ಕಳೆದ ಎರಡು ದಿನಗಳು ಕಾಂಗ್ರೆಸ್ ಪಕ್ಷ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಮಹಾ ಘಟಬಂಧನ್ ಸಭೆಗೆ ಬಂದಿದ್ದ ಹೊರ ರಾಜ್ಯಗಳ ರಾಜಕಾರಣಿಗಳಿಗೆ ಶಿಷ್ಟಾಚಾರ ಬದಿಗೊತ್ತಿ, ರಾಜ್ಯದ ಘನತೆಯನ್ನು ಹತ್ತಿಕ್ಕಿ ಐಎಎಸ್ ಅಧಿಕಾರಿಗಳನ್ನು ಚಾಕರಿಗೆ ನಿಯೋಜಿಸಿದ್ದು ಸರಿಯಲ್ಲ. ರಾಜ್ಯ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಂಡಿದೆ. ಐಎಎಸ್ ಅಧಿಕಾರಿಗಳನ್ನು ರಾಜಕೀಯ ಸಭೆಗೆ ಬಳಸಿಕೊಂಡಿದ್ದಾರೆ. ಸರ್ಕಾರದ ಹಿರಿಯ ಅಧಿಕಾರಿಗಳನ್ನ ದುರ್ಬಳಕೆ ಮಾಡಿಕೊಳ್ಳಲಾಗಿದೆ" ಎಂದು ಎಚ್‌ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.

"ಸದನದಲ್ಲಿ ಇವತ್ತು ಈ ವಿಚಾರವಾಗಿ ಜೆಡಿಎಸ್, ಬಿಜೆಪಿ ಶಾಸಕರು ಸೇರಿ ಚರ್ಚೆ ನಡೆಸಲು ಮುಂದಾದೆವು. ಪ್ರತಿಷ್ಠೆಯಿಂದ ನಾವು ಮಾಡಿದ್ದೆ ಅನ್ನೋ ಸರಿ ಅಂತ ಕಾಂಗ್ರೆಸ್‌ನವರು ನಡೆದುಕೊಂಡಿದ್ದಾರೆ. ಹಿಂದೆ ನಾವು ಅಧಿಕಾರದಲ್ಲಿ ಇದ್ದಾಗ ಯಾವುದೇ ರೀತಿಯ ಗಣ್ಯರಿಗೆ ಸೇವೆ ಮಾಡಲು ಐಎಎಸ್ ಅಧಿಕಾರಿಗಳನ್ನು ಬಳಸಿಕೊಂಡಿಲ್ಲ. 2018ರಲ್ಲಿ ನಾನು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಗಣ್ಯರನ್ನು ಸ್ವಾಗತಿಸಲು ಅಧಿಕಾರಿಗಳನ್ನು ಬಳಸಿಕೊಂಡಿಲ್ಲ. ಅವರನ್ನು ಕಳಿಸಿ ಗಣ್ಯರನ್ನ ಬರ ಮಾಡಿಕೊಂಡಿಲ್ಲ" ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
"ನಾನು ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿ ಯಾವುದೇ ಶಿಷ್ಟ ಚಾರ ಉಲ್ಲಂಘನೆ ಮಾಡಿಲ್ಲ. ಅಧಿಕಾರಿಗಳನ್ನು ಗುಲಾಮರಾನ್ನಾಗಿ ಮಾಡಿಕೊಂಡು ಅಧಿಕಾರಿಗಳನ್ನು ಯಾರ ಮನೆ ಬಾಗಿಲಿಗೂ ಕಳುಹಿಸಿಲ್ಲ. ಈ ಸರ್ಕಾರ ಸುಳ್ಳು ಹೇಳಿದೆ. ವಿರೋಧ ಪಕ್ಷಗಳ ಬಲ್ಡೋಜ್ ಮಾಡಲು ಹೊರಟಿರೋದು ಸರ್ಕಾರದ ಉದ್ಧಟತನ. ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ. ಬಿಜೆಪಿ ಮತ್ತು ನಾವು ಸೇರಿ ಹೋರಾಟ ಮಾಡುತ್ತಿದ್ದೇವೆ. ಕೆಲವು ಮಂತ್ರಿಗಳು ಶಾಸಕರನ್ನು ಹೆದರಿಸುವ ಕೆಲಸ ಮಾಡಿದ್ದಾರೆ. ನಿಮ್ಮನ್ನು ಮುಗಿಸುವುದಾಗಿ ಸದನದಲ್ಲಿ ಬೆದರಿಕೆ ಹಾಕಿದ್ದಾರೆ. ಇದು ಪ್ರಜಾಪ್ರಭುತ್ವವೇ?" ಎಂದು ಪ್ರಶ್ನಿಸಿದ್ದಾರೆ.
ಸ್ಪೀಕರ್ ಯು.ಟಿ.ಖಾದರ್ ಬುಧವಾರ ಬಿಜೆಪಿ ಶಾಸಕರಾದ ಆರ್. ಅಶೋಕ್, ಡಾ. ಅಶ್ವಥ್ ನಾರಾಯಣ, ವಿ. ಸುನೀಲ್ ಕುಮಾರ್, ಅರವಿಂದ್ ಬೆಲ್ಲದ್, ವೇದವ್ಯಾಸ್ ಕಾಮತ್, ಯಶಪಾಲ್ ಸುವರ್ಣ, ಧೀರಜ್ ಮುನಿರಾಜ್, ಆರಗ ಜ್ಞಾನೇಂದ್ರ, ಭರತ್ ವೈ ಶೆಟ್ಟಿ, ಉಮಾನಾಥ್ ಕೋಟ್ಯಾನ್ ಅವರನ್ನ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.












Click it and Unblock the Notifications