Jagadish Shettar: ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆ: ನಿಜವಾಯ್ತು ಎಚ್‌ಡಿ ಕುಮಾರಸ್ವಾಮಿ ನುಡಿದ ಭವಿಷ್ಯ!
ಇತ್ತೀಚಿಗಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸದ್ಯ ಮತ್ತೆ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಈ ಬಗ್ಗೆ ಸ್ವತ: ಜಗದೀಶ್ ಶೆಟ್ಟರ್ ಅವರೇ ಘೋಷಿಸಿದ್ದಾರೆ. ಇದು ಕಾಂಗ್ರೆಸ್‌ಗೆ ಬಿಗ್ ಶೋಕ್ ನೀಡಿದೆ. ಇದರಿಂದ ಜೆಡಿಎಸ್ ಅಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ನುಡಿದ ಭವಿಷ್ಯವೂ ನಿಜವಾದಂತಾಗಿದೆ.
ಕಳೆದ ವಿಧಾನಸಭೆ ಚುನಾವಣೆ ವೇಳೆ ತಮಗೆ ಟಿಕೆಟ್ ಕೊಟ್ಟಿಲ್ಲ ಎಂದು ಆರೋಪಿಸಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಜಗದೀಶ್ ಶೆಟ್ಟರ್ ಕಾಲಿಟ್ಟಿದ್ದರು. ಆದರೆ ಕಳೆದ ಕೆಲ ತಿಂಗಳಿನಿಂದ ಶೆಟ್ಟರ್ ಬಿಜೆಪಿ ಸೇರುತ್ತಾರೆನ್ನುವ ಗುಮಾನಿ ಹಬ್ಬಿತ್ತು. ಕಳೆದ ಡಿಸೆಂಬರ್‌ನಲ್ಲಿ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಪರೋಕ್ಷವಾಗಿ ಇದೇ ಭವಿಷ್ಯವನ್ನು ನುಡಿದಿದ್ದರು.

ನಿಜವಾಯ್ತು ಎಚ್‌ಡಿಕೆ ನುಡಿದ ಭವಿಷ್ಯ!
ಈ ಹಿಂದೆ ಡಿಸೆಂಬರ್‌ನಲ್ಲಿ ಕಾಂಗ್ರೆಸ್ ಸರ್ಕಾರ ಶೀಘ್ರದಲ್ಲೇ ಪತನವಾಗಲಿದೆ ಎಂದು ಜೆಡಿಎಸ್ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹೇಳಿಕೊಂಡಿದ್ದರು. ಪಕ್ಷದ ದೊಡ್ಡ ನಾಯಕರೊಬ್ಬರು ಬಿಜೆಪಿ ಹೈಕಮಾಂಡ್ ಸಂಪರ್ಕದಲ್ಲಿದ್ದು, ಅವರು ಹಲವು ಶಾಸಕರೊಂದಿಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಬಹುದು ಎಂದು ಹೇಳಿದ್ದರು. ಸದ್ಯ ಆ ಮಾತು ನಿಜವಾದಂತೆ ಕಾಣಿಸುತ್ತಿದೆ. ಡಿಸೆಂಬರ್‌ನಲ್ಲೂ ಜಗದೀಶ್ ಶೆಟ್ಟರ್ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದರು.
ಎಚ್‌ಡಿ ಕುಮಾರಸ್ವಾಮಿ ಅವರು ನುಡಿದ ಭವಿಷ್ಯ ಇದುವೇ ಆಗಿದ್ದರೆ ಜಗದೀಶ್ ಶೆಟ್ಟರ್ ಜೊತೆಗೆ ಬಿಜೆಪಿ ಸೇರ್ಪಡೆಗೊಳ್ಳುವ ಶಾಸಕರು ಯಾರು ಎಂಬ ಪ್ರಶ್ನೆ ಈಗ ಕಾಡತೊಡಗಿದೆ. ಇವರೊಂದಿಗೆ ಮತ್ತಿನ್ಯಾರು ಬಿಜೆಪಿ ಸೇರಲಿದ್ದಾರೆನ್ನುವ ಕುತೂಹಲ ರಾಜ್ಯ ರಾಜಕೀಯದಲ್ಲಿ ಮೂಡಿದೆ.
ಕೇಂದ್ರ ನಾಯಕರೊಂದಿಗೆ ಶೆಟ್ಟರ್ ಚರ್ಚೆ
ಕರ್ನಾಟಕದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ಇಂದು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದರು. ಈ ವೇಳೆ ಶೆಟ್ಟರ್ ಅವರೊಂದಿಗೆ ಸುಧೀರ್ಘ ಮಾತುಕತೆ ನಡೆಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಗದೀಶ್ ಶೆಟ್ಟರ್ ತಾವು ಬಿಜೆಪಿ ಸೇರ್ಪಡೆಗೊಳ್ಳುವ ವಿಚಾರ ನಿಜವೆಂದು ಹೇಳಿದ್ದಾರೆ.
ಬಿಜೆಪಿ ಸೇರ್ಪಡೆಯ ಘೋಷಣೆ ಮಾಡಿರುವ ಜಗದೀಶ್ ಶೆಟ್ಟರ್, ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವ ಮತ್ತು ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸೋದಾಗಿ ಹೇಳಿದ್ದಾರೆ. ಇಂದು ಸಂಜೆ ಬಿಎಸ್ ಯಡಿಯೂರಪ್ಪ ಮತ್ತು ವಿಜಯೇಂದ್ರ ಬೆಂಗಳೂರಿಗೆ ಹಿಂದಿರುಗುವ ಸಾಧ್ಯತೆಗಳಿವೆ.
ಹೀಗಾಗಿ 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಬಹುದು ಎನ್ನಲಾಗುತ್ತಿದೆ. ಕಳೆದ ವರ್ಷ ಕರ್ನಾಟಕದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಜಗದೀಶ್ ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು. ಹುಬ್ಬಳ್ಳಿ-ಧಾರವಾಡದಿಂದ ಕಾಂಗ್ರೆಸ್ ಟಿಕೆಟ್ ನೀಡಿದ್ದರೂ ಇಲ್ಲಿಂದ ಸೋತಿದ್ದರು. ಇದಾದ ನಂತರ ಪಕ್ಷ ಅವರನ್ನು ಎಂಎಲ್ಸಿ ಮಾಡಿತ್ತು. ವಿಧಾನಸಭೆ ಚುನಾವಣೆಯಲ್ಲಿ ಜಗದೀಶ್ ಶೆಟ್ಟರ್ ಸೋತಿದ್ದರೂ ಉತ್ತರ ಕರ್ನಾಟಕದಲ್ಲಿ ಉತ್ತಮ ಹಿಡಿತವಿದೆ. ಲಿಂಗಾಯತ ಸಮುದಾಯದ ದೊಡ್ಡ ನಾಯಕರಲ್ಲಿ ಅವರನ್ನು ಪರಿಗಣಿಸಲಾಗಿದೆ. ಅವರು ಬಿಜೆಪಿ ಸೇರಿದರೆ ಪಕ್ಷಕ್ಕೆ ಮತ್ತೊಮ್ಮೆ ಈ ವೋಟ್ ಬ್ಯಾಂಕ್ ಲಾಭ ಸಿಗಲಿದೆ. ಇದರಿಂದ ಕಾಂಗ್ರೆಸ್‌ಗೆ ಹಿನ್ನಡೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ.












Click it and Unblock the Notifications