ಪೆನ್ ಡ್ರೈವ್ ಕೇಸ್ ಮೊದಲೇ ಗೊತ್ತಿದ್ದರೇ ಯಾರೇ ಹೇಳಿದ್ರು ಪ್ರಜ್ವಲ್ ಗೆ ಟಿಕೆಟ್ ಕೊಡ್ತಿರ್ಲಿಲ್ಲ: ಕುಮಾರಸ್ವಾಮಿ
ಬೆಂಗಳೂರು, ಮೇ 07: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣ ದಿನೇದಿನೆ ತಿರುವು ಪಡೆದುಕೊಳ್ಳುತ್ತಿದೆ. ವಿಡಿಯೋ ಲೀಕ್ ಹಿಂದೆ ಡಿಸಿಎಂ ಡಿಕೆ ಶಿವಕುಮಾರ್ ಕೈವಾಡ ಇರುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ಡಿ ಕುಮಾರಸ್ವಾಮಿ ಈಗಾಗಲೇ ಆರೋಪ ಮಾಡಿದ್ದಾರೆ.
ಈ ಕುರಿತು ಜೆಡಿಎಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಟಿ ನಡೆಸಿದ ಕುಮಾರಸ್ವಾಮಿ ಅವರು, ಈ ಪೆನ್ ಡ್ರೈವ್ ಪ್ರಕರಣ ನನಗೆ ಮೊದಲೇ ಗೊತ್ತಿದ್ದರೇ ನಾನು ಯಾರೇ ಹೇಳಿದ್ರು ಸಹ ಹಾಸನ ಲೋಕಸಭಾ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಅವರಿಗೆ ಟಿಕೆಟ್ ನೀಡುತ್ತಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.

ಎಸ್ಐಟಿ ಎಂಬುದು ಈಗ ಸಿದ್ದರಾಮಯ್ಯ ಇನ್ವೆಸ್ಟಿಗೇಷನ್ ಟೀಮ್ ಮತ್ತು ಶಿವಕುಮಾರ್ ಇನ್ವೆಸ್ಟಿಗೇಷನ್ ಟೀಮ್ ಆಗಿದೆ. ನಿಜವಾಗಿ ಸಂತ್ರಸ್ತೆಯರಿಗೆ ನ್ಯಾಯ ಕೊಡಿಸುವ ಉದ್ದೇಶ ಅವರದ್ದಾಗಿದ್ದರೆ ವಿಡಿಯೋ ಹರಿಯಬಿಟ್ಟವರನ್ನು ಯಾಕೆ ಇನ್ನೂ ಬಂಧಿಸಿಲ್ಲ? ಆ ವಿಚಾರವಾಗಿ ದೂರು ನೀಡಿದ್ದರೂ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಪ್ರಶ್ನಿಸಿದರು.
ನಾನು ಪ್ರಜ್ವಲ್ ರೇವಣ್ಣರನ್ನ ವಹಿಸಿಕೊಂಡು ಮಾತನಾಡುತ್ತಿಲ್ಲ. ಒಂದು ತನಿಖೆ ಪ್ರಾರಂಭ ಮಾಡಿದಾಗ ಮಾಹಿತಿ ಸೋರಿಕೆ ಆಗಬಾರದು. ಸರ್ಕಾರಕ್ಕೆ, ಸಂತ್ರಸ್ತೆಯರಿಗೆ ರಕ್ಷಣೆ ಕೊಡುವುದು ಬೇಕಾಗಿಲ್ಲ. ಈ ಸರ್ಕಾರಕ್ಕೆ ಬೇಕಾಗಿರುವುದು ಕೇವಲ ಪ್ರಚಾರ ಅಷ್ಟೇ ಎಂದು ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.












Click it and Unblock the Notifications