HD Kumaraswamy: ನಾನು ನೈಸ್ ಭೂಮಿ ಖರೀದಿ ಮಾಡಿದ್ದರೆ ನೇಣು ಹಾಕಿಕೊಳ್ಳುತ್ತೇನೆ: ಹೆಚ್‌ ಡಿ ಕುಮಾರಸ್ವಾಮಿ

ಬೆಂಗಳೂರು: ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನನ್ನ ಮೇಲೆ ಆರೋಪ ಮಾಡಿದ್ದಾರೆ. ಕುಮಾರಸ್ವಾಮಿ ಕೂಡ ನೈಸ್ ಯೋಜನೆ ವ್ಯಾಪ್ತಿಯಲ್ಲಿ ಭೂಮಿ ಹೊಂದಿದ್ದಾರೆ ಎಂದು ಸುಳ್ಳು ಆರೋಪ ಮಾಡಿದ್ದಾರೆ. ಆ ಭಾಗದಲ್ಲಿ ಎಲ್ಲಿಯೇ ಆದರೂ ನಾನು ಜಮೀನು ಖರೀದಿ ಮಾಡಿರುವುದನ್ನು ರುಜುವಾತು ಮಾಡಿದರೆ ಸಾರ್ವಜನಿಕವಾಗಿ ನೇಣು ಹಾಕಿಕೊಳ್ಳುತ್ತೇನೆ ಎಂದು ಕುಮಾರಸ್ವಾಮಿ ಅವರು ಸವಾಲು ಹಾಕಿದರು.

ಸುಳ್ಳು ಯಾರ ಮನೆ ದೇವರು ಎಂಬುದು ಅರ್ಥವಾಗುತ್ತಿದೆ. ನೈಸ್ ಯೋಜನೆ ಹೆಸರಿನಲ್ಲಿ ಗುತ್ತಿಗೆದಾರನ ಜತೆ ಶಾಮೀಲಾಗಿ ಅಪಾರ ಪ್ರಮಾಣದ ಭೂಮಿಯನ್ನು ಲೂಟಿ ಹೊಡೆಯುತ್ತಿರುವ ಡಿಕೆಶಿ ಬಗ್ಗೆ ಮೊದಲನೇ ಕಂತಿನ ದಾಖಲೆಗಳನ್ನು ಬಿಡುಗಡೆ ಮಾಡಿದ್ದೇನೆ. ಇನ್ನು ಹಲವಾರು ಕಂತುಗಳಷ್ಟು ಬಿಡುಗಡೆ ಮಾಡುವ ದಾಖಲೆಗಳು ಬಾಕಿ ಇದೆ ಎಂದು ಕೇಂದ್ರ ಸಚಿವರು ಎಚ್ಚರಿಕೆ ನೀಡಿದರು.

HD Kumaraswamy NICE Land he would hang himself if he had purchased land linked to the project

ಡಿಕೆಶಿ ಪಾಪದ ಕೊಡ ತುಂಬಿದೆ!

ನಾನು ನೋಡುತ್ತಾ ಬಂದಿದ್ದೇನೆ. ಈ ವ್ಯಕ್ತಿಗೆ ಹೇಳಲು ಬಯಸುತ್ತೇನೆ. ನಿಮ್ಮ ಪಾಪದ ಕೊಡ ತುಂಬಿದೆ. ನೀವು 10 ಸಾವಿರ ಎಕರೆ ಮಾಡಿ. ಆದರೆ ನ್ಯಾಯವಾಗಿ ಮಾಡಿ. ಒಳ್ಳೆಯ ಮಾರ್ಗದಲ್ಲಿ ಸಂಪಾದನೆ ಮಾಡಿ. ಬೇಡ ಎಂದವರು ಯಾರು? ಈಗಾಗಲೇ ಬೆಂಗಳೂರು ಮೈಸೂರು ನಡುವೆ ಎಕ್ಸ್ ಪ್ರೆಸ್ ಹೆದ್ದಾರಿ ಆಗಿದೆ. ಮತ್ತೊಂದು ರಸ್ತೆ ಯಾಕೆ ಬೇಕು? ಬೆಂಗಳೂರಿನಿಂದ ಮೈಸೂರಿನ ತನಕ 1.75 ಲಕ್ಷ ಎಕರೆ ಜಮೀನು ಗುರುತಿಸಿದ್ದಾರೆ. ಅದನ್ನು ಲೂಟಿ ಹೊಡೆಯಬೇಕು.

ನೈಸ್, ನೈಸೆಲ್ ಎಲ್ಲಾ ಹೋಗಿ ಡಿವೈನಿಟಿ ಅಂತ ಬರುತ್ತಿದೆ. ತೆಲಂಗಾಣದ ವ್ಯಕ್ತಿಗೆ ಇವರು ರೆಡ್ ಕಾರ್ಪೆಟ್ ಹಾಸುತ್ತಿದ್ದಾರೆ. ಎಷ್ಟು ಕೋಟಿಗೆ ಡೀಲ್ ಆಗುತ್ತಿದೆ? ಮಹೇಶ್ ರೆಡ್ಡಿ ಎನ್ನುವ ವ್ಯಕ್ತಿ ಯಾರು ಎನ್ನುವ ಎಲ್ಲಾ ಮಾಹಿತಿಯೂ ನನ್ನ ಬಳಿ ಇದೆ. ಸಮಯ ಬರುತ್ತೆ ಎಲ್ಲಾ ವಿಚಾರ ನಿಮಗೆ ತಿಳಿಯುತ್ತದೆ. ನೈಸ್ ಯೋಜನೆಗಾಗಿ ಭೂಮಿ ಕಳೆದುಕೊಂಡಿರುವ ಜನರನ್ನು ಭೇಟಿಯಾದ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವರು, ರಸ್ತೆಯ ಉದೇಶಕ್ಕೆ ಸ್ವಾಧೀನ ಮಾಡಿಕೊಳ್ಳಲಾದ ಭೂಮಿಯಲ್ಲಿ ರಿಯಲ್ ಎಸ್ಟೇಟ್ ದಂಧೆ ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಈಗಾಗಲೇ ರಾಜ್ಯ ಹೈಕೋರ್ಟ್ ನೈಸ್ ಯೋಜನೆಯ ಬಗ್ಗೆ ಕಟುವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ. ಅದನ್ನು ಪ್ರಶ್ನಿಸಿ ನೈಸ್ ಕಂಪನಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಹಾಕಿಕೊಂಡಿದೆ. ಈ ತಿಂಗಳ 5ರಂದು ಆ ಅರ್ಜಿ ವಿಚಾರಣೆಗೆ ಬರುತ್ತದೆ. ಆ ನಂತರ ಈ ಹೋರಾಟಕ್ಕೆ ಮತ್ತೊಂದು ಆಯಾಮ ಬರುತ್ತದೆ ಎಂದು ಸಚಿವರು ಹೇಳಿದರು.

ಹೈದರಾಬಾದ್ ಮೂಲದ ಉದ್ಯಮಿ ಮಹೇಶ್ ರೆಡ್ಡಿ ಎಂಬ ವ್ಯಕ್ತಿಯ ಜತೆ ಸೇರಿ ರಾಜ್ಯದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ನೈಸ್ ಯೋಜನೆಯನ್ನು ಲಪಟಾಯಿಸಲು ಹೊರಟಿದ್ದಾರೆ. ಹೈದರಾಬಾದ್ ನಲ್ಲಿ ನೆಲೆಸಿರುವ ಉದ್ಯಮಿ ರಿಯಲ್ ಎಸ್ಟೇಟ್ ನಡೆಸುತ್ತಿದ್ದು, ವಿವಿಧ ವ್ಯವಹಾರಗಳನ್ನು ನಡೆಸುತ್ತಿದ್ದಾರೆ. ಅಂತಹ ವ್ಯಕ್ತಿಯ ಜತೆ ಮುಖ್ಯಮಂತ್ರಿ ಶಾಮೀಲಾಗಿ ಇಡೀ ಯೋಜನೆಯನ್ನೇ ಲಪಟಾಯಿಸಲು ಸಂಚು ರೂಪಿಸಿದ್ದಾರೆ. ಇವರೊಂದಿಗೆ ಇನ್ನಷ್ಟು ಪ್ರಭಾವಿಗಳು ಕೈ ಜೋಡಿಸಿದ್ದಾರೆ. ಹಾಗೆಯೇ, ಯೋಜನೆಗೆ ಸ್ವಾಧೀನ ಮಾಡಿಕೊಂಡಿರುವ ಅಷ್ಟೂ ಭೂಮಿಯನ್ನು ಲೂಟಿ ಹೊಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಸಚಿವರು ದೂರಿದರು.‌

HD Kumaraswamy: ಈ ಭೂಮಿಯನ್ನು ಖರೀದಿಸಿದ್ದು ಏಕೆ?

ನೈಸ್ ಯೋಜನೆಯಿಂದ ಭೂಮಿ ಕಳೆದುಕೊಂಡ ತೋಟದಗುಡ್ಡದಹಳ್ಳಿ, ಅಂಚೆಪಾಳ್ಯ, ತಿರುಮಲಪುರ, ಕೆ.ಜಿ.ಶ್ರೀಕಂಠಪುರ, ಗಂಗನಹಳ್ಳಿ, ಕಾಚೋಹಳ್ಳಿ, ಹೊಸಹಳ್ಳಿ, ಗೊಲ್ಲರಹಟ್ಟಿ ಸೇರಿದಂತೆ ಅನೇಕ ಹಳ್ಳಿಗಳ ಭೂ ಸಂತ್ರಸ್ತರಿಂದ ಅಹವಾಲು ಸ್ವೀಕರಿಸಿದ ಬಳಿಕ ಮಾತನಾಡಿದ ಕೇಂದ್ರ ಸಚಿವರು, ನೈಸ್ ಯೋಜನೆ ಒಂದರಲ್ಲಿಯೇ ಈ ಮುಖ್ಯಮಂತ್ರಿ ಬ್ರಹ್ಮಾಂಡ ಭ್ರಷ್ಟಾಚಾರ ಮತ್ತು ಭೂಕಬಳಿಕೆ ನಡೆಸಿದ್ದಾರೆ. ಬಿ ಎಂ ಕಾವಲ್ ಪ್ರದೇಶದಲ್ಲಿ ಈ ವ್ಯಕ್ತಿ ಸುಮಾರು 200ರಿಂದ 300 ಎಕರೆಯಷ್ಟು ಭೂಮಿಯನ್ನು ಖರೀದಿಸಿದ್ದಾರೆ. ಅಷ್ಟು ಭೂಮಿಯನ್ನು ಇವರು ಯಾವ ಮಾರ್ಗದಲ್ಲಿ ಖರೀದಿಸಿದರು? ನೈಸ್ ಯೋಜನೆ ವ್ಯಾಪ್ತಿಯಲ್ಲಿರುವ ಈ ಭೂಮಿಯನ್ನು ಅವರು ಖರೀದಿಸಿದ್ದು ಏಕೆ? ಎಂದು ಕೇಂದ್ರ ಸಚಿವರು ಪ್ರಶ್ನಿಸಿದರು.

ಈ ಭೂಮಿ ಇರುವ ಪ್ರದೇಶಕ್ಕೆ ಮಾಧ್ಯಮಗಳನ್ನು ಮತ್ತು ಸಾರ್ವಜನಿಕರನ್ನು ಕರೆದುಕೊಂಡು ಹೋಗಿ ತೋರಿಸಿದ ಸಚಿವ ಕುಮಾರಸ್ವಾಮಿ ಅವರು, ಇದು ಅತ್ಯಂತ ಫಲವತ್ತಾದ ಕೃಷಿ ಭೂಮಿಯಾಗಿದೆ. ಇಲ್ಲಿ ಈ ಮುಖ್ಯಮಂತ್ರಿ ಸುಮಾರು 300 ಎಕರೆಯಷ್ಟು ಜಮೀನು ಹೊಂದಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಬಿಡದಿಯಲ್ಲಿ 44 ಎಕರೆ ಜಮೀನು ಖರೀದಿಸಿದ್ದೇನೆ

ಇಂತಹ ವ್ಯಕ್ತಿ ನಾನು ಜಮೀನು ಖರೀದಿ ಮಾಡಿದ್ದೇನೆ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ರಾಜಕೀಯಕ್ಕೆ ಬರುವ ಮೊದಲೇ ಬಿಡದಿಯಲ್ಲಿ 44 ಎಕರೆ ಜಮೀನು ಖರೀದಿಸಿದ್ದೇನೆ. ಅಲ್ಲಿ ನಾನು ಇವರೊಂದಿಗೆ ರಿಯಲ್ ಎಸ್ಟೇಟ್ ಮಾಡುತ್ತಿಲ್ಲ. ಬದಲಿಗೆ ಕೃಷಿ, ಪಶುಸಂಗೋಪನೆ ಮಾಡುತ್ತಿದ್ದೇನೆ. ಬೇಕಿದ್ದರೆ ಬಂದು ನೋಡಬಹುದು. ಕಾನೂನುಬಾಹಿರವಾಗಿ ನಾನೇನಾದರೂ ಒಂದು ಇಂಚು ಅಕ್ರಮವಾಗಿ ಭೂಮಿಯನ್ನು ಸಂಪಾದಿಸಿದರೆ ತಕ್ಷಣವೇ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಇವರ ಹಾಗೆ ಮುಗ್ಧರನ್ನು ಹೆದರಿಸಿ ಬೆದರಿಸುವ ಮೂಲಕ ಭೂಮಿಯನ್ನು ಕಿತ್ತುಕೊಳ್ಳುವ ಜಾಯಮಾನ ನನ್ನದಲ್ಲ ಎಂದು ಮುಖ್ಯಮಂತ್ರಿ ವಿರುದ್ಧ ಕುಮಾರಸ್ವಾಮಿ ಅವರು ತೀವ್ರ ವಾಗ್ದಾಳಿ ನಡೆಸಿದರು.

ಅವನು ಯಾವನೋ ನನ್ನ ಬಗ್ಗೆ 3ಬಿ ಎಂದು ಮಾತನಾಡಿದ್ದಾನೆ. ಬ್ಲಾಕ್ ಮೇಲ್ ಮಾಡುವುದು, ಬ್ಲಾಕ್ ಮ್ಯಾಜಿಕ್ ಮಾಡುವುದು, ಬೆನ್ನಿಗೆ ಚೂರಿ ಹಾಕುವುದು ನನ್ನ ಜಾಯಮಾನವಲ್ಲ. ಯಾರು ಯಾರಿಗೆ ಇವೆಲ್ಲವನ್ನೂ ಮಾಡಿದರು ಎಂಬುದು ರಾಜ್ಯದ ಜನರಿಗೆ ಚೆನ್ನಾಗಿ ಗೊತ್ತಿದೆ. ಇವರೆಲ್ಲ ಸೇರಿ ನೈಸ್ ಯೋಜನೆ ವ್ಯಾಪ್ತಿಯ ಭೂಮಿಯನ್ನು ಯಾವ ರೀತಿಯಲ್ಲಿ ಲಪಟಾಯಿಸಿದ್ದಾರೆ ಎಂಬುದು ನನಗೆ ಗೊತ್ತಿದೆ. ರೈತರ ಭೂಮಿ ವಾಪಸ್ ಬರುವ ತನಕ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಗುಡುಗಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+