Dhruva Narayan: ಆರ್.ಧ್ರುವನಾರಾಯಣ ನಿಧನ ಸುದ್ದಿ ಕೇಳಿ ಆಘಾತವಾಗಿದೆ: ಕುಮಾರಸ್ವಾಮಿ ಸಂತಾಪ
ಬೆಂಗಳೂರು, ಮಾರ್ಚ್ 11: ರಾಜ್ಯ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷರು, ಸರಳ ಸಜ್ಜನ ರಾಜಕಾರಣಿಯಾಗಿದ್ದ ಆರ್.ಧ್ರುವನಾರಾಯಣ ಅವರು ಹೃದಯಾಘಾತದಿಂದ ನಿಧನರಾದರು ಎಂಬ ಸುದ್ದಿ ಕೇಳಿ ನನಗೆ ತೀವ್ರ ದಿಗ್ಭ್ರಮೆ, ಆಘಾತ ಉಂಟಾಗಿದೆ ಎಂದು ಹಳೇ ಮೈಸೂರು ಭಾಗದ ಪ್ರಭಾವಿ ಕಾಂಗ್ರೆಸ್ ಮುಖಂಡ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ (61) ನಿಧನಕ್ಕೆ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.
ಟ್ವೀಟ್ ಮೂಲಕ ಸಂತಾಪ ಸೂಚಿಸಿರುವ ಎಚ್.ಡಿ ಕುಮಾರಸ್ವಾಮಿ, ಅತ್ಯಂತ ಸ್ನೇಹಶೀಲ ವ್ಯಕ್ತಿಯಾಗಿದ್ದ ಅವರು ವಿಭಿನ್ನ ರಾಜಕಾರಣಿ ಆಗಿದ್ದರು. ಸೋಲು ಗೆಲುವುಗಳನ್ನು ಸಮಚಿತ್ತದಿಂದ ಸ್ವೀಕರಿಸುತ್ತಿದ್ದ ಅವರು ಮತ್ತೊಬ್ಬರಿಗೆ ಮಾದರಿ ಆಗಿದ್ದರಲ್ಲದೆ, ಶಾಸಕರಾಗಿ, ಲೋಕಸಭೆ ಸದಸ್ಯರಾಗಿ ರಾಜ್ಯಕ್ಕೆ ಎಣೆ ಇಲ್ಲದ ಸೇವೆ ಮಾಡಿದ್ದರು. ಅವರನ್ನು ಕಳೆದುಕೊಂಡಿದ್ದು ವೈಯಕ್ತಿಕವಾಗಿ ನನಗೆ ಬಹಳ ದುಃಖ ಉಂಟು ಮಾಡಿದೆ ಎಂದು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಆರ್.ಧ್ರುವನಾರಾಯಣ ಅವರ ಅಗಲಿಕೆ ನಮ್ಮ ರಾಜ್ಯಕ್ಕೆ ಭರಿಸಲಾಗದ ನಷ್ಟ. ಅವರಿಗೆ ಚಿರಶಾಂತಿ ಸಿಗಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷರು, ಸರಳ ಸಜ್ಜನ ರಾಜಕಾರಣಿಯಾಗಿದ್ದ ಶ್ರೀ ಆರ್.ಧ್ರುವನಾರಾಯಣ ಅವರು ಹೃದಯಾಘಾತದಿಂದ ನಿಧನರಾದರು ಎಂಬ ಸುದ್ದಿ ಕೇಳಿ ನನಗೆ ತೀವ್ರ ದಿಗ್ಭ್ರಮೆ, ಆಘಾತ ಉಂಟಾಗಿದೆ.1/2 pic.twitter.com/G9l6CiVA9w
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) March 11, 2023
ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಜಿ ಸಂಸದ ಆರ್. ಧ್ರುವನಾರಾಯಣ ಹೃದಯಾಘಾತದಿಂದ ಶನಿವಾರ ಮೈಸೂರಿನಲ್ಲಿ ನಿಧನರಾದರು. ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಇರದ ಧ್ರುವನಾರಾಯಣ ಅವರು ಶನಿವಾರ ಬೆಳಗ್ಗೆ ಏಕಾಏಕಿ ಸಂಭವಸಿದ ಹೃದಯಾಘಾತದಿಂದ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯಲ್ಲೇ ವಿಧಿವಶರಾಗಿದ್ದಾರೆ.












Click it and Unblock the Notifications