ಕಾಂಗ್ರೆಸ್ ಕನ್ನಡಿಗರಿಗೆ ಮಕ್ಮಲ್ ಟೋಪಿ ಹಾಕಿದೆ: ಎಚ್.ಡಿ.ಕುಮಾರಸ್ವಾಮಿ
ಮೈಸೂರು: ರಾಜ್ಯದಲ್ಲಿ ಮಳೆ ಬೀಳದೆ ನೀರಿಗಾಗಿ ಹಾಹಾಕಾರ ಶುರುವಾಗಿದ್ದು, ರೈತರು & ಜನರು ಪರದಾಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ತಮಿಳುನಾಡು ನೀರಿಗಾಗಿ ಕಿರಿಕ್ ಶುರು ಮಾಡಿದೆ. ಈ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಮ್ಮ ನೀರು ನಮ್ಮ ಹಕ್ಕು ಎಂದು ರಾಜ್ಯದ ಜನರಿಗೆ ಮಕ್ಮಲ್ ಟೋಪಿ ಹಾಕಿದ ಕಾಂಗ್ರೆಸ್ಸಿಗರು ನಮ್ಮ ನೀರು ತಮಿಳುನಾಡಿನ ಹಕ್ಕು ಅಂತಿದ್ದಾರೆ ಎಂದು HDK ಗುಡುಗಿದ್ದಾರೆ.
ಮೈಸೂರಿನಲ್ಲಿ ಇಂದು ಸುತ್ತೂರು ಮಹಾಸಂಸ್ಥಾನ ಮಠಕ್ಕೆ ಭೇಟಿ ನೀಡಿ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಆಶೀರ್ವಾದ ಪಡೆದ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದರು. ಯಾರನ್ನೂ ಕೇಳದೆ, ಜನ ಮತ್ತು ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ತಮಿಳುನಾಡಿಗೆ ನೀರು ಹರಿಸಿದ್ದಾರೆ. ತೀರಾ ನೀರು ಬಿಟ್ಟ ಮೇಲೆ ಪ್ರತಿಪಕ್ಷಗಳಿಂದ, ಜನತೆಯಿಂದ ಆಕ್ರೋಶವು ವ್ಯಕ್ತವಾಗಿದೆ. ಊರೆಲ್ಲ ಕೊಳ್ಳೆ ಹೋದ ಮೇಲೆ ಬಾಗಿಲು ಹಾಕಿಕೊಂಡರು ಎನ್ನುವಂತೆ ಈಗ ಸರ್ಕಾರ ಸರ್ವಪಕ್ಷ ಸಭೆ, ಸುಪ್ರೀಂ ಕೋರ್ಟ್‌ಗೆ ಅರ್ಜಿ ಹಾಕ್ತೀವಿ ಎಂದು ರಾಗ ತೆಗೀತಿದೆ. ನೀರು ಬಿಡುವ ಮುನ್ನ ಇದನ್ನು ಮಾಡಬಹುದಿತ್ತು ಅಲ್ಲವೇ? ಎಂದು ಅವರು ಕಿಡಿಕಾರಿದರು.

ಆಗ ಕೇಳದೆ, ಈಗ ಬಂದಿದ್ದಾರೆ!
ರಾಜ್ಯದಲ್ಲಿ ನೀರಿಗೆ ಹಾಹಾಕಾರವಿದೆ. ಕಾವೇರಿ, ಕಬಿನಿ, ಹಾರಂಗಿ ಸೇರಿದಂತೆ ಯಾವುದೇ ಜಲಾಶಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಂಗ್ರಹ ಆಗಿಲ್ಲ. ಇದು ಗೊತ್ತಿದ್ದರೂ ರಾಜ್ಯ ಸರ್ಕಾರ ತಪ್ಪು ಮಾಡಿದೆ. ಕನ್ನಡಿಗರನ್ನು ಕಡೆಗಣಿಸಿ ತಮಿಳುನಾಡಿಗೆ ನೀರು ಹರಿಸಿದೆ ಎಂದು ಅವರು ಟೀಕಾಪ್ರಹಾರ ನಡೆಸಿದರು. ನೀರಿಲ್ಲದ ಸಮಯದಲ್ಲಿ ಎರಡೂ ರಾಜ್ಯಗಳು ಸಂಕಷ್ಟ ಸೂತ್ರ ಪಾಲಿಸಬೇಕು ಎಂದು ಕಾವೇರಿ ನ್ಯಾಯಾಧೀಕರಣ ನಿರ್ದೇಶನ ನೀಡಿದೆ. ಆದ್ರೆ, ಸರ್ಕಾರ ಈ ಬಗ್ಗೆ ಆಲೋಚನೆಯನ್ನೇ ಮಾಡದೆ ನೀರು ಹರಿಸಿದೆ. ಈಗ ಸರ್ವಪಕ್ಷ ಸಭೆ ಕರೆದು, ಸುಪ್ರೀಂ ಕೋರ್ಟಿಗೆ ಅರ್ಜಿ ಹಾಕಿದರೆ ಏನು ಪ್ರಯೋಜನ? ಎಂದು ಅವರು ಪ್ರಶ್ನಿಸಿದರು.
ನಮ್ಮ ಔದಾರ್ಯಕ್ಕೆ ಬೆಲೆ ಇಲ್ಲ. ತಮಿಳುನಾಡಲ್ಲಿ ಕುರುವೈ ಬೆಳೆಯ ವಿಸ್ತೀರ್ಣವನ್ನು ನಾಲ್ಕು ಪಟ್ಟು ಹೆಚ್ಚು ಮಾಡಿಕೊಳ್ಳಲಾಗಿದೆ. ಇದು ರಾಜ್ಯ ಸರ್ಕಾರಕ್ಕೆ ಗೊತ್ತಿಲ್ಲವೇ? ಈ ಕುರಿತು ಏಕೆ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರಕ್ಕೆ ದೂರು ನೀಡಲಿಲ್ಲ? ತಮಿಳುನಾಡು ಸರ್ಕಾರ ಕ್ಯಾತೆ ತೆಗೆದಾಕ್ಷಣ ಸರ್ಕಾರ ನೀರು ಹರಿಸಿದೆ. ಈಗ ಸುಪ್ರೀಂ ಕೋರ್ಟ್ ಇನ್ನೂ ಹೆಚ್ಚಿನ ನೀರು ಬಿಡಿ ಎಂದು ಹೇಳಿದರೆ ಸರ್ಕಾರ ನೀರು ಹರಿಸುತ್ತದೆಯೇ ಎಂದು ಅವರು ಕಿಡಿಕಾರಿದರು.
ಮೇಕೆದಾಟು ಮಕ್ಮಲ್ ಟೋಪಿ!
ಚುನಾವಣೆಗೆ ಮೊದಲು ಕಾಂಗ್ರೆಸ್ ಪಕ್ಷ ನಮ್ಮ ನೀರು, ನಮ್ಮ ಹಕ್ಕು ಎಂದು ಹೇಳಿಕೊಂಡು ಮೇಕೆದಾಟಿನಿಂದ ಪಾದಯಾತ್ರೆ ನಡೆಸಿ ಜನರಿಗೆ ಮಕ್ಮಲ್ ಟೋಪಿ ಹಾಕಿದರು. ಈಗ ನಮ್ಮ ನೀರು ತಮಿಳುನಾಡು ಹಕ್ಕು ಎಂದು ಹೇಳುತ್ತಾ ರಾಜ್ಯದ ಜನರಿಗೆ ವಂಚನೆ ಎಸಗುತ್ತಿದ್ದಾರೆ. ಇದು ಅನ್ಯಾಯದ ಪರಮಾವಧಿ ಎಂದು ಎಂದು ಕುಮಾರಸ್ವಾಮಿ ಅವರು ಆರೋಪಿಸಿದರು.

ಗ್ಯಾರಂಟಿ ಹೆಸರಿನಲ್ಲಿಯೂ ಟೋಪಿ
ಐದು ಗ್ಯಾರಂಟಿಗಳನ್ನು ಜಾರಿ ಮಾಡುವುದರಲ್ಲಿ ಕಾಂಗ್ರೆಸ್ ಸರ್ಕಾರ ಜನರಿಗೆ ಟೋಪಿ ಹಾಕಿದೆ. 200 ಯುನಿಟ್ ಉಚಿತ ಎಂದವರು ಆಮೇಲೆ ಷರತ್ತುಗಳು ಎಂದರು. ಈಗ ಹೊಸ ಬಿಲ್ ಬಂದ ಮೇಲೆ ಜನರು ಬೆಚ್ಚಿದ್ದಾರೆ ಎಂದ ಎಚ್‌ಡಿಕೆ, ಬಹಳಷ್ಟು ಜನರಿಗೆ ಉಚಿತ ವಿದ್ಯುತ್ ಸೌಲಭ್ಯ ಸಿಗುತ್ತಿಲ್ಲ ಎಂದರು. ಗ್ಯಾರಂಟಿಗಳ ಹೆಸರಿನಲ್ಲಿ ಪ್ರತಿ ತಿಂಗಳು 4ರಿಂದ 5 ಸಾವಿರ ರೂಪಾಯಿ ಪ್ರತಿಯೊಬ್ಬರಿಗೂ ಸಿಗುತ್ತದೆ ಎಂದು ಪೊಳ್ಳು ಹೇಳುತ್ತಿದ್ದಾರೆ. ಒಂದು ಕೈಯ್ಯಲ್ಲಿ ಗ್ಯಾರಂಟಿ ಕೊಟ್ಟು ಇನ್ನೊಂದು ಕೈಯ್ಯಲ್ಲಿ ಬೆಲೆ ಏರಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮತ್ತೊಂದು ಕಡೆ ಜನರ ಮೇಲೆ ಸಾಲದ ಭಾರವನ್ನು ವಿಪರೀತ ಹೊರಿಸುತ್ತಿದ್ದಾರೆ. ಇದಕ್ಕೆ 86 ಸಾವಿರ ಕೋಟಿ ರೂಪಾಯಿ ಸಾಲ ಮಾಡುತ್ತಿದ್ದಾರೆ. ಈ ಸಾಲವನ್ನ ಯಾರು ತೀರಿಸುತ್ತಾರೆ? ಕಾಂಗ್ರೆಸ್ ಪಕ್ಷದಿಂದ ತೀರಿಸುತ್ತಾರಾ? ಜನರನ್ನು ಸುಲಿಗೆ ಮಾಡಿಯೇ ತೀರಿಸುತ್ತಾರೆ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಇದೇ ವೇಳೆ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಮೈತ್ರಿ ಪ್ರಸ್ತಾಪ ಯಾರಿಂದಲೂ ಬಂದಿಲ್ಲ
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ & ಜೆಡಿಎಸ್ ಮೈತ್ರಿ ಬಗ್ಗೆ ಯಾರಿಂದ ಪ್ರಸ್ತಾಪ ಬಂದಿಲ್ಲ. ನಾವೂ ಪ್ರಸ್ತಾಪ ಇಟ್ಟಿಲ್ಲ. ಹೀಗಿದ್ದ ಮೇಲೆ ಮೈತ್ರಿಯ ಮಾತೆಲ್ಲಿ ಬಂತು. ನಾವು ನಮ್ಮದೇ ದಾರಿಯಲ್ಲಿ ಹೋರಾಟ ಮಾಡುತ್ತೇವೆ. ಜಿಟಿ ದೇವೇಗೌಡರ ಅಧ್ಯಕ್ಷತೆಯಲ್ಲಿ ಹೊಸ ಕೋರ್ ಕಮಿಟಿ ರಚನೆ ಮಾಡಿದ್ದೇವೆ. ಸೆಪ್ಟೆಂಬರ್ 1ರಿಂದ ತಂಡ ರಾಜ್ಯಾದ್ಯಂತ ಪ್ರವಾಸ ಮಾಡಲಿದೆ. ಪಕ್ಷವನ್ನು ಕಟ್ಟುತ್ತಾ, ಸಂಘಟನೆಯನ್ನು ಬಲಪಡಿಸಿಕೊಂಡು ಚುನಾವಣೆ ಎದುರಿಸುತ್ತೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.












Click it and Unblock the Notifications