ನಿಖಿಲ್ ವಿವಾಹದ ಬಗ್ಗೆ ಸ್ಪಷ್ಟನೆ ಕೊಟ್ಟ ಎಚ್.ಡಿ.ಕುಮಾರಸ್ವಾಮಿ!
Recommended Video

ಬೆಂಗಳೂರು, ಆಗಸ್ಟ್ 31 : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿಗೆ ಹೆಣ್ಣು ನೋಡಲು ಆಂಧ್ರಪ್ರದೇಶಕ್ಕೆ ಹೋಗಿದ್ದಾರೆ. ಆಂಧ್ರದ ಉದ್ಯಮಿ ಪುತ್ರಿಯನ್ನು ನಿಖಿಲ್ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಶುಭ ಶುಕ್ರವಾರ ವೈರಲ್ ಆಗಿತ್ತು.
ಶುಕ್ರವಾರ ಬೆಳಗ್ಗೆ ಹಬ್ಬಿದ್ದ ಸುದ್ದಿಗೆ ಜೆಡಿಎಸ್ ವರಿಷ್ಠ ಮತ್ತು ನಿಖಿಲ್ ಕುಮಾರಸ್ವಾಮಿ ಅಜ್ಜ ಎಚ್.ಡಿ.ದೇವೇಗೌಡರು ಪ್ರತಿಕ್ರಿಯೆ ನೀಡಿದ್ದರು. ಆದರೆ, ಮಧ್ಯಾಹ್ನದ ಹೊತ್ತಿಗೆ ಈ ಸುದ್ದಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
'ಕೋಟೇಶ್ವರರಾವ್ ಅವರು ನಮ್ಮ ಕುಟುಂಬದ ಸ್ನೇಹಿತರು. ನಿಖಿಲ್‌ಗೆ ಹೆಣ್ಣು ನೋಡಲು ನಾನು ಆಂಧ್ರಪ್ರದೇಶಕ್ಕೆ ಹೋಗಿರಲಿಲ್ಲ' ಎಂದು ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.

ಇಂದು ಬೆಳಗ್ಗೆಯಿಂದ ಆಂಧ್ರಪ್ರದೇಶದ ಉದ್ಯಮಿ ಕೋಟೇಶ್ವರರಾವ್ ಪುತ್ರಿ ಸಹಜರನ್ನು ನಿಖಿಲ್ ಕುಮಾರಸ್ವಾಮಿ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಸಹಜ ಅವರು ಅಂತಿಮ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ.
ಪದ್ಮನಾಭನಗರದ ನಿವಾಸದಲ್ಲಿ ಎಚ್.ಡಿ.ದೇವೇಗೌಡರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿಯೂ ನಿಖಿಲ್ ವಿವಾಹದ ಪ್ರಶ್ನೆ ಎದುರಾಗಿತ್ತು. ಆಗ ಉತ್ತರಿಸಿದ ದೇವೇಗೌಡರು, 'ಅದು ವೈಯಕ್ತಿಕ ವಿಚಾರ. ಹುಡುಗಿ ಒಪ್ಪಿದರೆ ಮದುವೆ ಮಾಡಿಸೋಣ ಬಿಡಿ' ಎಂದು ಹಾಸ್ಯ ಮಿಶ್ರಿತ ಪ್ರತಿಕ್ರಿಯೆ ಕೊಟ್ಟಿದ್ದರು.
ಎಚ್.ಡಿ.ಕುಮಾರಸ್ವಾಮಿ ಅವರು ಪತ್ನಿ ಅನಿತಾ ಕುಮಾರಸ್ವಾಮಿ ಅವರ ಜೊತೆ ಆಂಧ್ರಪ್ರದೇಶ ಪ್ರವಾಸ ಕೈಗೊಂಡಿದ್ದರು. ಕನಕದುರ್ಗಮ್ಮ ದೇವಾಲಯಕ್ಕೆ ಭೇಟಿ ನೀಡಿ, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಭೇಟಿಯಾಗಿದ್ದರು.
ನಿಖಿಲ್ ಕುಮಾರಸ್ವಾಮಿ ಅವರು ಸಹಜ ಜೊತೆ ವಿವಾಹವಾಗುವ ಕುರಿತು ಕೋಟೇಶ್ವರರಾವ್ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರು ಪ್ರತಿಕ್ರಿಯೆ ನೀಡಿದ್ದು, ವಿವಾಹದ ಸುದ್ದಿಯನ್ನು ತಳ್ಳಿ ಹಾಕಿದ್ದಾರೆ. 'ಕುಮಾರಸ್ವಾಮಿ ಅವರು ನಮ್ಮನ್ನು ಭೇಟಿಯಾಗಿಲ್ಲ' ಎಂದು ಕೋಟೇಶ್ವರ ರಾವ್ ಸ್ಪಷ್ಟಪಡಿಸಿದ್ದಾರೆ.
2015ರಲ್ಲಿ ನಿಖಿಲ್ ಕುಮಾರಸ್ವಾಮಿ ಮತ್ತು ಚಿತ್ರ ನಿರ್ಮಾಪಕ ಕೆ.ಸಿ.ಎನ್.ಮೋಹನ್ ಅವರ ಪುತ್ರಿ ವಿವಾಹದ ಮಾತುಕತೆ ನಡೆದಿತ್ತು. ಕುಟುಂಬದವರ ಸಮ್ಮುಖದಲ್ಲಿ ನಿಶ್ಚಿತಾರ್ಥವೂ ನಡೆದಿತ್ತು. ಆದರೆ, ಕಾರಣಾಂತರದಿಂದ ವಿವಾಹ ನಡೆಯಲಿಲ್ಲ.












Click it and Unblock the Notifications