55ರ ಕುಮಾರಣ್ಣನ ಮುಂದಿನ ಐದು ಪ್ರಮುಖ ಸವಾಲು!
ಬೆಂಗಳೂರು, ಡಿ. 16 : ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆ ಪ್ರತಿಪಕ್ಷದ ನಾಯಕ ಹೆಚ್.ಡಿ. ಕುಮಾರಸ್ವಾಮಿ ಸೋಮವಾರ 55ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹುಟ್ಟು ಹಬ್ಬವನ್ನು ಸರಳವಾಗಿ ಆಚರಿಸಿಕೊಂಡ ಕುಮಾರಸ್ವಾಮಿ, ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಅನಾಥ ಮತ್ತು ವಿಕಲಚೇತನ ಮಕ್ಕಳಿಗೆ ಹಣ್ಣು ಹಂಪಲು, ಸಿಹಿ ವಿತರಿಸಿದರು. ಕುಮಾರಸ್ವಾಮಿ ಅವರ ಆರೋಗ್ಯ ಉತ್ತಮವಾಗಿರಲಿ, ಅವರು ನೂರು ವರ್ಷ ಬಾಳಲಿ ಎಂಬುದು ನಮ್ಮ ಪ್ರಾರ್ಥನೆ.
ಡಿ.16 1959 ರಂದು ಜನಿಸಿದ ಕುಮಾರಸ್ವಾಮಿ ತಮ್ಮ 55ನೇ ಹುಟ್ಟುಹಬ್ಬದ ಪ್ರಯುಕ್ತ ಸೋಮವಾರ ಬೆಳಗ್ಗೆ ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲಿರುವ ದೇವಸ್ಥಾನಕ್ಕೆ ದಂಪತಿ ಸಮೇತರಾಗಿ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಪದ್ಮನಾಭನಗರದಲ್ಲಿರುವ ನಿವಾಸಕ್ಕೆ ತೆರಳಿ ಮಾಜಿ ಎಚ್.ಡಿ.ದೇವೇಗೌಡ, ತಾಯಿ ಚೆನ್ನಮ್ಮನವರಿಂದ ಆಶೀರ್ವಾದ ಪಡೆದರು.
ಕುಮಾರಸ್ವಾಮಿ ಅವರ ಹುಟ್ಟಹಬ್ಬದ ಪ್ರಯುಕ್ತ ಅವರ ಅಭಿಮಾನಿಗಳು ಮತ್ತು ಜೆಡಿಎಸ್ ಕಾರ್ಯಕರ್ತರು ವಿವಿಧ ಜಿಲ್ಲೆಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದು, ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗಳಿಸುವ ಸವಾಲು ಕುಮಾರಸ್ವಾಮಿ ಅವರ ಮುಂದಿದೆ. ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಕುಮಾರಸ್ವಾಮಿ ಅವರ ಮುಂದಿರುವ ಐದು ಸವಾಲುಗಳೇನು ನೋಡೋಣ

ಕರ್ನಾಟಕದಲ್ಲಿ ಪಕ್ಷ ಸಂಘಟನೆ
ಜೆಡಿಎಸ್ ಪಕ್ಷ ಕೆಲವು ಜಿಲ್ಲೆಗಳಿ ಮಾತ್ರ ಸೀಮಿತ ಎಂಬ ಅಪವಾದವಿದೆ. ಕುಮಾರಸ್ವಾಮಿ ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆಯಲ್ಲಿದ್ದಾಗ ರಾಜ್ಯಾದ್ಯಂತ ಸಂಚರಿಸಿ ಪಕ್ಷ ಸಂಘಟನೆ ಮಾಡಲು ಶ್ರಮಿಸಿದರೂ, ಈ ಅಪವಾದಿಂದ ಮುಕ್ತವಾಗಲು ಸಾಧ್ಯವಾಗಿಲ್ಲ. ಸದ್ಯ ಅವರ ರಾಜ್ಯಾಧ್ಯಕ್ಷ ಹುದ್ದೆ ತೊರೆದಿದ್ದಾರೆ. ಆದರೂ, ಜಿಲ್ಲೆಗಳಿಗೆ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಪಕ್ಷ ಸಂಘಟನೆ ಮಾಡುವುದು ಅವರ ಮುಂದಿರುವ ಪ್ರಮುಖ ಸವಾಲು.

ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ
2014ರ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳಿಸುವುದು ಕುಮಾರಸ್ವಾಮಿ ಅವರ ಮುಂದಿರುವ ಸವಾಲು. ಜೆಡಿಎಸ್ ಈಗಾಗಲೇ ಲೋಕಸಭೆ ಚುನಾವಣೆ ಸಿದ್ಧತೆ ಆರಂಭಿಸಿದೆ. ಅದರಲ್ಲೂ ಲೋಕಸಭೆ ಉಪ ಚುನಾವಣೆಯಲ್ಲಿ ಕಳೆದುಕೊಂಡ ಜೆಡಿಎಸ್ ಭದ್ರಕೋಟೆ ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಕ್ಷೇತ್ರಗಳನ್ನು ಮರಳಿ ಪಡೆಯುವ ಗುರಿ ಅವರದ್ದು.

ಮತ್ತೊಮ್ಮೆ ಸಿಎಂ ಗದ್ದುಗೆ ಏರುವುದು
ಜೆಡಿಎಸ್ ಪಕ್ಷವನ್ನು ಕರ್ನಾಟಕದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು ಎನ್ನುವುದು ಪಕ್ಷದ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಕನಸು. ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಸ್ಥಾನಕ್ಕೆ ಏರಿದ್ದ ಕುಮಾರಸ್ವಾಮಿ. ರಾಜ್ಯದಲ್ಲಿ ಸ್ಪಷ್ಟಬಹುಮತದೊಂದಿಗೆ ಜೆಡಿಎಸ್ ಅನ್ನು ಅಧಿಕಾರಕ್ಕೆ ತಂದು ಮತ್ತೊಮ್ಮೆ ಸಿಎಂ ಸ್ಥಾನಕ್ಕೇರುವ ಗುರಿ ಹೊಂದಿದ್ದಾರೆ.

ಕಾಂಗ್ರೆಸ್ ಗೆ ತಕ್ಕ ಪಾಠ
ಕರ್ನಾಟಕದಲ್ಲಿ ಜೆಡಿಎಸ್ ಪಕ್ಷದ ರಾಜಕೀಯ ಕಡುವೈರಿ ಕಾಂಗ್ರೆಸ್ ಪಕ್ಷಕ್ಕೆ ತಿರುಗೇಟು ನೀಡುವ ಸವಾಲು ಕುಮಾರಸ್ವಾಮಿ ಅವರ ಮುಂದಿದೆ. ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು, ಪ್ರತಿಪಕ್ಷ ಸ್ಥಾನದಲ್ಲಿ ಜೆಡಿಎಸ್ ಕುಳಿತಿದೆ. ಲೋಕಸಭೆ ಉಪ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಗಳಿಸಿದೆ. ಲೋಕಸಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಿರುಗೇಟು ನೀಡಬೇಕಾಗಿದೆ.

ರಾಜ್ಯದಲ್ಲಿ ಜೆಡಿಎಸ್ ಶಕ್ತಿ ವೃದ್ಧಿಸುವುದು
ಕರ್ನಾಟಕದಲ್ಲಿ ಜೆಡಿಎಸ್ ಸದ್ಯ 40 ಶಾಸಕರನ್ನು ಹೊಂದಿದೆ. ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಸ್ವತಂತ್ರವಾಗಿ ಅಧಿಕಾರಕ್ಕೆ ತರಬೇಕು ಎಂಬುದು ಕುಮಾರಸ್ವಾಮಿ ಕನಸು. ಅದಕ್ಕಾಗಿ ಅವರು ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷದ ಶಕ್ತಿಯನ್ನು ವೃದ್ಧಿಸಬೇಕಾಗಿದೆ.












Click it and Unblock the Notifications