3 ಗಂಟೆ 10 ನಿಮಿಷ ಬಜೆಟ್ ಭಾಷಣ ಓದಿದ ಕುಮಾರಣ್ಣ
ಬೆಂಗಳೂರು, ಫೆಬ್ರವರಿ 08 : 'ನಾನು 2019-20 ಸಾಲಿನ ಆಯವ್ಯಯ ಪತ್ರವನ್ನು ಸದನದ ಮುಂದೆ ಮಂಡಿಸುತ್ತೇನೆ' ಎಂದು ಬಜೆಟ್ ಭಾಷಣ ಆರಂಭಿಸಿದ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸತತ ಮೂರು ಗಂಟೆಗಳ ಕಾಲ ಭಾಷಣ ಮಾಡಿದರು.
ಶುಕ್ರವಾರ ಎಚ್.ಡಿ.ಕುಮಾರಸ್ವಾಮಿ ಅವರು 2019-20ನೇ ಸಾಲಿನ ಬಜೆಟ್ ಮಂಡನೆ ಮಾಡಿದರು. ಯಾವುದೇ ವಿರಾಮ ತೆಗೆದುಕೊಳ್ಳದೇ 3 ಗಂಟೆ 10 ನಿಮಿಷಗಳ ಕಾಲ 161 ಪುಟದ ಬಜೆಟ್ ಭಾಷಣವನ್ನು ಕುಮಾರಸ್ವಾಮಿ ಓದಿದರು.
ಮಧ್ಯಾಹ್ನ 12.35ಕ್ಕೆ ಬಜೆಟ್ ಭಾಷಣ ಆರಂಭಿಸಿದ ಕುಮಾರಸ್ವಾಮಿ ಅವರು 3.40ಕ್ಕೆ ಭಾಷಣವನ್ನು ಜೈ ಹಿಂದ್, ಜೈ ಕರ್ನಾಟಕ ಎಂಬ ಮಾತಿನ ಮೂಲಕ ಭಾಷಣವನ್ನು ಅಂತ್ಯಗೊಳಿಸಿದರು. ಯಾವುದೇ ವಿರಾಮ ತೆಗೆದುಕೊಳ್ಳದೇ ಅವರು ಭಾಷಣ ಓದಿದ್ದು ವಿಶೇಷವಾಗಿತ್ತು.

ಆರೋಗ್ಯವುಳ್ಳವನು ಸದಾ ಸುಖಿ
ಅವನಿಗೆ ಬಾಳಿನಲ್ಲಿ ಬೇಸರವಿಲ್ಲ ಎಂಬ ಕುವೆಂಪು ಅವರ ಮಾತನ್ನು ಬಜೆಟ್ ಭಾಷಣದ ನಡುವೆ ಉಲ್ಲೇಖಿಸಿದರು.
ಭಾಷಣದ ನಡುವೆ ಡಿ.ವಿ.ಗುಂಡಪ್ಪ ಅವರ ಕಗ್ಗಗಳನ್ನು, ಕುವೆಂಪು ಅವರ ಹೇಳಿಕೆಗಳನ್ನು ಎಚ್.ಡಿ.ಕುಮಾರಸ್ವಾಮಿ ಅವರು ಉಲ್ಲೇಖಿಸಿದರು. 'ನನ್ನ ದೃಷ್ಟಿಯಲ್ಲಿ ಅತ್ಯಂತ ದುರ್ಬಲರಿಗೂ ಅತ್ಯಂತ ಪ್ರಬಲರಷ್ಟೇ ಅವಕಾಶ ದೊರಕಿಸುವ ವ್ಯವಸ್ಥೆಯೇ ಪ್ರಜಾಪ್ರಭುತ್ವ' ಎಂದು ಭಾಷಣವನ್ನು ಕುಮಾರಸ್ವಾಮಿ ಆರಂಭಿಸಿದರು.
ಬೀಳುವುದ ನಿಲ್ಲಿಪುದು, ಬಿದ್ದುದನು ಕಟ್ಟುವುದು
ಹಾಲೊಡೆಯ ಕಡೆದದನು ತಕ್ರವಾಗಿಪುದು
ಹಾಳ ಹಾಳಾಗಿಪುದು, ಹಳದ ಹೊಸತಾಗಿಪುದು
ಬಾಳಿಗಿದೆ ಚಿರಧರ್ಮ ಮಂಕುತಿಮ್ಮ ಎಂದು ಕಗ್ಗವನ್ನು ವಾಚಿಸಿದರು.
ಬಜೆಟ್ ಭಾಷಣದ ನಡುವೆಯೇ ಎಚ್.ಡಿ.ಕುಮಾರಸ್ವಾಮಿ ಅವರು 'ನನ್ನ ನಂಬಿಕೆಯೊಂದು ಆಕಾಶ : ನಿಜ, ಅದಕೆ ತಳಬುಡವಿಲ್ಲ, ಆಕಾಶದಲ್ಲಿ ಹೊಳೆವ ನಕ್ಷತ್ರಕ್ಕೆ ಲೆಕ್ಕವಿಲ್ಲ' ಎಂದು ಉಲ್ಲೇಖಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಘೋಷಣೆಗಳನ್ನು ಮಾಡುವಾಗ ಎಚ್.ಡಿ.ಕುಮಾರಸ್ವಾಮಿ ಅವರು, ಜಾತಿ ಮತದ ಗುಹೆಗಳಿಂದ ಹೊರಬನ್ನಿರಿ ಬಯಲಿಗೆ ಕೃತಕ ತಿಮಿರಳಾಳದಿಂದ ವಿಸ್ತಾರದ ಬೆಳಕಿಗೆ ಎಂಬ ಗೋಪಾಲಕೃಷ್ಣ ಅಡಿಗರ ಮಾತನ್ನು ಉಲ್ಲೇಖಿಸಿದರು.











Click it and Unblock the Notifications