ಪ್ರತ್ಯೇಕ ರಾಜ್ಯದ ಕೂಗು, ಮಾಧ್ಯಮಗಳ ಮೇಲೆ ಗೂಬೆ ಕೂರಿಸಿದ ಸಿಎಂ!
ಬೆಂಗಳೂರು, ಜುಲೈ 30 : 'ಉತ್ತರ ಕರ್ನಾಟಕದ ಪ್ರತ್ಯೇಕ ರಾಜ್ಯ ಬೇಡಿಕೆಗೆ ಮಾಧ್ಯಮಗಳೇ ಕಾರಣ. ನಿಮಗೆ ಚರ್ಚೆ ಮಾಡೋಕೆ ಬೇರೆ ವಿಷಯವಿಲ್ಲ. ಒಂದು ವಾರದಿಂದ ಅದಕ್ಕಾಗಿ ಇಂತಹ ಸುದ್ದಿ ಮಾಡುತ್ತಿದ್ದೀರಿ' ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ, 'ಅಖಂಡ ಕರ್ನಾಟಕ ನನ್ನ ನಿಲುವನ್ನು ಹಿಂದೆಯೇ ಸ್ಪಷ್ಟಪಡಿಸಿದ್ದೇನೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಪ್ರತ್ಯೇಕ ರಾಜ್ಯದ ವಿರುದ್ಧ ಏನಾದರೂ ಅನಾಹುತವಾದರೆ ಮಾಧ್ಯಮಗಳೇ ನೇರ ಹೊಣೆ' ಎಂದರು.
'ನಾನು ನೂರು ಬಾರಿ ಹೇಳಿದ್ದೇನೆ. ಪ್ರತಿಯೊಂದರಲ್ಲೂ ತಪ್ಪು ಕಂಡುಹಿಡಿಯುತ್ತಾ ಇದ್ದರೆ ರಾಜ್ಯ ಹಾಳಾಗಬೇಕಾ?, ಅಭಿವೃದ್ಧಿಯಾಗಬೇಕಾ? ನಿವೇ ನಿರ್ಧಾರವನ್ನು ಮಾಡಿ' ಎಂದು ಮಾಧ್ಯಮಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

'ಒಂದು ವಾರದಿಂದ ಇದೇ ಸುದ್ದಿ ಮಾಡುತ್ತಿದ್ದೀರಿ. ನಿಮ್ಮ ಆತ್ಮ ಸಾಕ್ಷಿಗೆ ನಿವೇ ಪ್ರಶ್ನೆ ಮಾಡಿಕೊಳ್ಳಿ. ನೀವು ಮಾಡುತ್ತಿರುವುದು ಸರಿಯೇ?, ತಪ್ಪೇ? ಎಂದು. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಚರ್ಚೆ ಆರಂಭವಾಗಲು ಮಾಧ್ಯಮಗಳೇ ಕಾರಣ' ಎಂದು ಆರೋಪಿಸಿದರು.
'ದಿನ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದೀರಿ. ಜನರು ಏನೂ ಕೇಳುತ್ತಿಲ್ಲ. ಜನರು ಸರ್ಕಾರದ ಪರವಾಗಿ ನಮ್ಮ ಜೊತೆ ಇದ್ದಾರೆ. ಮಾಧ್ಯಮಗಳೇ ಎಲ್ಲವನ್ನು ಸೃಷ್ಟಿ ಮಾಡಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿವೆ' ಎಂದು ಕುಮಾರಸ್ವಾಮಿ ದೂರಿದರು.












Click it and Unblock the Notifications