ಹಾಸನ ಟಿಕೆಟ್ ಫೈಟ್: ಹಾಸನ ಕುರಿತು ದೇವೇಗೌಡರ ತೀರ್ಮಾನವೇ ಅಂತಿಮ : ನಿಖಿಲ್ ಕುಮಾರಸ್ವಾಮಿ
ರಾಮನಗರ,ಏಪ್ರಿಲ್ 5: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಈಗಾಗಲೇ ಚುನಾವಣಾ ಘೋಷಣೆ ಮೊದಲೇ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದ ಜೆಡಿಎಸ್ ನಾಯಕರಿಗೆ ಹಾಸನ ಕ್ಷೇತ್ರವೇ ಕಗ್ಗಂಟಾಗಿದೆ.
ಈ ಕುರಿತು ರಾಮನಗರದಲ್ಲಿ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಹಾಸನ ವಿಧಾನಸಭಾ ಕ್ಷೇತ್ರ ಜೆಡಿಎಸ್ ಟಿಕೆಟ್ ವಿಚಾರದಲ್ಲಿ ಪಕ್ಷದ ವರಿಷ್ಠರಾದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ತೆಗೆದುಕೊಳ್ಳುವ ತೀರ್ಮಾನವೇ ಅಂತಿಮ ಎಂದು ಹೇಳಿದ್ದಾರೆ.

ಈಗಾಗಲೇ ಈ ಕುರಿತು ಚರ್ಚೆ ನಡೆಸಿದ್ದು, ಹಾಸನ ಕ್ಷೇತ್ರ ಜನರ ನಾಡಿಮಿಡಿತ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಪಕ್ಷದ ರಾಜ್ಯಾಧ್ಯಕ್ಷ ಇಬ್ರಾಹಿಂ, ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರೊಂದಿಗೆ ಚರ್ಚಿಸಿ ಒಂದೆರಡು ದಿನಗಳಲ್ಲಿ ದೇವೇಗೌಡ ಅವರೇ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಸ್ಪಷ್ಟ ಪಡಿಸಿದರು.
ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿರುವ ಸ್ವರೂಪ್ ಪಕ್ಷದಲ್ಲಿ ಸಕ್ರಿಯರಾಗಿದ್ದಾರೆ. ಅವರ ತಂದೆ ನಾಲ್ಕು ಬಾರಿ ಶಾಸಕರಾಗಿದ್ದವರು. ಇನ್ನು ನಮ್ಮ ಕುಟುಂಬವೂ ಹಾಸನದ ಅಭಿವೃದ್ಧಿ ವಿಚಾರದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸ್ವರೂಪ್ ಅಭಿಮಾನಿಗಳು ಅವರಿಗೆ ಟಿಕೆಟ್ ನೀಡಬೇಕೆಂದು ಕೇಳುತ್ತಿದ್ದಾರೆ. ಏನೇ ಆಗಲಿ ಅಂತಿಮವಾಗಿ ದೇವೇಗೌಡರು ನಿರ್ಧಾರ ಮಾಡುತ್ತಾರೆ ಎಂದು ಹೇಳಿದರು.
ರಾಜ್ಯಾದ್ಯಂತ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಪ್ರಚಾರವನ್ನ ನಡೆಸುತ್ತಿದ್ದಾರೆ. ಹಾಸನ ಕ್ಷೇತ್ರ ಟಿಕೆಟ್ ವಿಚಾರವನ್ನು ದೊಡ್ಡ ಮಟ್ಟದಲ್ಲಿ ಬಿಂಬಿಸುವ ಅಗತ್ಯವಿಲ್ಲ. ನಾವೆಲ್ಲ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ. ಪ್ರತಿಯೊಬ್ಬ ರಾಜಕಾರಣಿಗೂ ಜನ ಸೇವೆ ಮಾಡುವ ಆಸೆ ಇರುತ್ತದೆ. ಜನ ಸೇವೆ ಮಾಡಲು ರಾಜಕಾರಣ ವೇದಿಕೆಯಾಗಿದೆ ಎಂದು ಹೇಳಿದರು.

ಶಾಸಕಿ ಅನಿತಾ ಕುಮಾರಸ್ವಾಮಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರಾ ಎಂಬ ಕುರಿತು ಮಾತನಾಡಿ, ಶಾಸಕಿ ಅನಿತಾ ಕುಮಾರಸ್ವಾಮಿಯವರು ಈಗಾಗಲೇ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಈ ಹಿಂದೆ ಮಧುಗಿರಿ ಹಾಗೂ ರಾಮನಗರ ಕ್ಷೇತ್ರದಲ್ಲಿ ಅನಿರೀಕ್ಷಿತವಾಗಿ ಸ್ಪರ್ಧೆ ಮಾಡಿದ್ದರು. ಕಳೆದ ಬಾರಿ ರಾಮನಗರದಿಂದ ಸ್ಪರ್ಧೆಗೆ ನನಗೂ ಒತ್ತಡ ಇತ್ತು. ಆಗ ನಾನು ಸಿನಿಮಾದಲ್ಲಿ ಬ್ಯುಸಿ ಆಗಿದ್ದೆ. ಹಾಗಾಗಿ ಅನಿವಾರ್ಯ ಕಾರಣಗಳಿಂದ ಅನಿತಾ ಕುಮಾರಸ್ವಾಮಿ ಅವರು ಸ್ಪರ್ಧೆ ಮಾಡಿ ಗೆಲುವು ಸಾಧಿಸಿದರು.
ರಾಮನಗರ ಕ್ಷೇತ್ರದಲ್ಲಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಉತ್ತಮ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಅನಿತಾ ಅವರು ಟಿಕೆಟ್ ಆಕಾಂಕ್ಷಿಗಳಲ್ಲ. ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಆಸೆಯೂ ಇಲ್ಲ. ಎಲ್ಲಾ ಪಕ್ಷಗಳಲ್ಲೂ ಗೊಂದಲಗಳಿವೆ. ಈ ಕುರಿತು ಅಂತಿಮ ತಿರ್ಮಾನವನ್ನ ವರಿಷ್ಠರು ತಿರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
ನಮ್ಮ ಪಕ್ಷವನ್ನ ಉಳಿಸಿ, ಬೆಳೆಸಿಕೊಳ್ಳಬೇಕಾಗಿದೆ. ಜೆಡಿಎಸ್ ಪಕ್ಷವನ್ನ ದೇವೇಗೌಡರು ಕಟ್ಟಿ ಬೆಳೆಸಿದ್ದಾರೆ. ಮೊದಲಿನಿಂದಲೂ ಜೆಡಿಎಸ್ ಪಕ್ಷ ಹೋರಾಟದ ಹಿನ್ನೆಲೆಯಲ್ಲಿ ಬಂದಿರುವ ಪಕ್ಷವಾಗಿದೆ.
ಆ ಪಕ್ಷವನ್ನು ಉಳಿಸಿಕೊಳ್ಳಲು ನಾವೆಲ್ಲ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಪಕ್ಷ ಹೇಳಿದರೆ ನಾನೇ ಸ್ಪರ್ಧೆಯಿಂದ ಹಿಂದೆ ಸರಿಯುತ್ತೇನೆ ಎಂದು ಹೇಳಿದರು.
ಏಪ್ರಿಲ್ 13ರಂದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗುತ್ತದೆ. ನಾಳೆ ನಾಳಿದ್ದು ಅಧಿಕೃತ ಪಟ್ಟಿಬಿಡುಗಡೆ ಆಗಲಿದೆ. ಮೂರನೇ ಪಟ್ಟಿ ಇರುವ ಬಗ್ಗೆ ಗೊತ್ತಿಲ್ಲ. ಆಕಾಂಕ್ಷಿಗಳು ಹೆಚ್ಚಾಗಿದ್ದಾಗ ಪ್ರತಿಯೊಬ್ಬರನ್ನು ವಿಶ್ವಾಸಕ್ಕೆ ಪಡೆದು ಪಟ್ಟಿ ಬಿಡುಗಡೆ ಮಾಡುವುದು ಅನಿವಾರ್ಯ. ಮೂರನೇ ಪಟ್ಟಿ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.











Click it and Unblock the Notifications