ಕರ್ನಾಟಕದಲ್ಲಿ ಎಚ್‌ಡಿ ದೇವೇಗೌಡರಿಂದ ಚುನಾವಣಾ ಪ್ರಚಾರ ಶೀಘ್ರ: ಕಾಂಗ್ರೆಸ್, ಬಿಜೆಪಿ ಬಳಿ ತೆರಳಲ್ಲ ಎಂದು ಗೌಡರು ಸ್ಪಷ್ಟನೆ
ಬೆಂಗಳೂರು, ಏಪ್ರಿಲ್ 11: ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದು, ಎಲ್ಲ ಪಕ್ಷಗಳು ಮತಯಾಚನೆಗೆ ಸಜ್ಜಾಗಿವೆ. ಈ ನಿಟ್ಟಿನಲ್ಲಿ ಜೆಡಿಎಸ್ ಸಹ ಅಧಿಕಾರದ ಚುಕ್ಕಾಣೆ ಹಿಡಯಲು ಪ್ಲಾನ್ ಮಾಡಿದೆ. ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರು ಜೆಡಿಎಸ್ ಪ್ರಚಾರ ಕುರಿತು ಒಂದಷ್ಟು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ ರಾಜ್ಯದ ವಿವಿಧೆಡೆ ಪ್ರವಾಸ ಮಾಡಲಿದ್ದೇನೆ ಎಂದು ದೇವೇಗೌಡ ಅವರು ಹೇಳಿದ್ದಾರೆ. ಅಷ್ಟೇ ಅಲ್ಲದೇ ಚುನಾವಣೆ ಬಳಿಕ ಯಾವುದೇ ಕಾರಣಕ್ಕೂ ಜೆಡಿಎಸ್ ಪಕ್ಷ ಕಾಂಗ್ರೆಸ್ ಇಲ್ಲವೇ ಬಿಜೆಪಿ ಬಳಿ ಹೋಗಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಅವರು ಮಾತನಾಡಿರುವ ವಿಡಯೋವೊಂದು ಅವರ ಪಕ್ಷದ ಕಚೇರಿಯಿಂದ ಬಿಡುಗಡೆಯಾಗಿದೆ. ಜೆಡಿಎಸ್ ಭದ್ರಕೋಟೆಯಾದ ಹಳೇ ಮೈಸೂರು ಭಾಗದ ಜಿಲ್ಲೆಗಳು ಹಾಗೂ ಉತ್ತರ ಕರ್ನಾಟಕದ ಭಾಗದ ಒಂದೆರಡು ಜಿಲ್ಲೆಗಳಲ್ಲಿ ಚುನಾವಣೆ ಪ್ರಚಾರ ಮಾಡಲಿದ್ದೇನೆ ಎಂದಿದ್ದಾರೆ. ಇದೇ ವಾರ ಅವರು ಪ್ರಚಾರ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ.
ರಾಜ್ಯದ ಹಳೇ ಮೈಸೂರು ಭಾಗದ ಮಂಡ್ಯ, ಹಾಸನ, ಕೋಲಾರ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ರಾಮನಗರ ಮತ್ತು ತುಮಕೂರಲ್ಲಿ ದೇವೇಗೌಡ ಪಕ್ಷ ಪರ ಮತಯಾಚಿಸಲಿದ್ದಾರೆ. ಅಷ್ಟೇ ಅಲ್ಲದೇ ಉತ್ತರ ಕರ್ನಾಟಕ ಭಾಗದ ರಾಯಚೂರು ಮತ್ತು ವಿಜಯಪುರ ಜಿಲ್ಲೆಗಳಲ್ಲೂ ಪ್ರಚಾರ ಮಾಡಲು ಆಸಕ್ತಿ ಹೊಂದಿದ್ದೇನೆ ಎಂದರು.

ಉತ್ತರ ಕರ್ನಾಟಕದಲ್ಲೂ ದೇವೇಗೌಡರ ಪ್ರಚಾರ
ಈ ವಿಜಯಪುರ ಹಾಗೂ ರಾಯಚೂರು ಭಾಗದಲ್ಲಿ ಹಿಂದೆ ಬರಗಾಲದಿಂದ ತೀವ್ರ ಸಂಕಷ್ಟದಲ್ಲಿರುವ ರೈತರನ್ನು ಉಳಿಸಲು ಸಾಕಷ್ಟು ಕೆಲಸ ಮಾಡಿದ್ದೇನೆ. ಕೃಷ್ಣಾ (ನದಿ) ನೀರು ಹಂಚಿಕೆ ವಿವಾದದ ಸಂಬಂಧ ಮತ್ತು ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ವಿಚಾರವಾಗಿಯೂ ಒಂದಷ್ಟು ಕೆಲಸ ಮಾಡಿದ್ದೇನೆ. ಹೀಗಾಗಿ ಆಭಾಗದಲ್ಲಿ ಮತಯಾಚನೆ ಮುಖ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ನನ್ನಂತೆಯೇ ಪಕ್ಷದ ನಾಯಕರು ಆಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಉಳಿದ ಪ್ರದೇಶಗಳಲ್ಲಿ ಪ್ರವಾಸ ಮಾಡಲಿದ್ದಾರೆ. ಈ ಮೂಲಕ ಬಹುಮತ ಗಳಿಸಲಿರುವ ಜೆಡಿಎಸ್ ಯಾವ ಕಾರಣಕ್ಕೆ ಎದುರು ಪಕ್ಷ ಕಾಂಗ್ರೆಸ್ ಇಲ್ಲವೇ ಬಿಜೆಪಿ ಪಕ್ಷದ ಬಳಿ ಹೋಗುವುದಿಲ್ಲ ಎಂದು ಅವರು ಪುನರುಚ್ಚರಿಸಿದರು.
ದೇವೇಗೌಡರಿಗೆ 89 ವರ್ಷ ವಸಯಸ್ಸಾಗಿದೆ. ಅವರು ವಯೋಸಹಜ ಅನಾರೋಗ್ಯದ ಕಾರಣದಂದ ಬಳಲುತ್ತಿದ್ದಾರೆ. ಈ ಕಾರಣದಿಂದಲೇ ಕಳೆದ ಆರು ತಿಂಗಳಿಂದ ಯಾವ ಯಾತ್ರೆ, ವೇದಿಕೆ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡಿರಲಿಲ್ಲ ಎನ್ನಲಾಗಿದೆ.
ಇತ್ತೀಚೆಗೆ ಮೈಸೂರಿನಲ್ಲಿ ನಡೆದಂತಹ ಒಂದೆರಡು ರ್ಯಾಲಿಗಳಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಮತ್ತೆ ಪ್ರವಾಸ ಕೈಗೊಂಡಿದ್ದಾರೆ.
ಹಾಸನ ಕ್ಷೇತ್ರ ಬಗ್ಗೆ ದೇವೇಗೌಡರ ಪ್ರತಿಕ್ರಿಯೆ
ಹಾಸನ ಕ್ಷೇತ್ರದ ಸ್ಪರ್ಧೆ ಕುರಿತು ಪ್ರತಿಕ್ರಿಯಿಸಿದ ಅವರು, ಹಾಸನ ಜೆಡಿಎಸ್ ಪಕ್ಷ ಸಂಸದೀಯ ಕ್ಷೇತ್ರವಾಗಿದ್ದು, ಅದನ್ನು ಮೊಮ್ಮಗ ಸಂಸದ ಪ್ರಜ್ವಲ್ ರೇವಣ್ಣನಿಗೆ ಬಿಡಲಾಗಿದೆ ಎಂದರು. ಸದರಿ ವಿಧಾನಸಭಾ ಕ್ಷೇತ್ರದಲ್ಲಿ ಹಾಸನದಿಂದ ಭವಾನಿ ರೇವಣ್ಣ ಕಣಕ್ಕಿಳಿಯಲು ಸಜ್ಜಾಗಿದ್ದಾರ. ಅವರ ಸೋದರ ಮಾವ ಕುಮಾರಸ್ವಾಮಿ ಅವರು ಹಾಸನ ಟಿಕೆಟ್ ನಿರ್ಧಾರದಲ್ಲಿ ಪಟ್ಟು ಬಿಡುತ್ತಿಲ್ಲ.
ಹೀಗಾಗಿ ದೇವೇಗೌಡರ ಕುಟುಂಬದಲ್ಲಿಯೇ ಹಾಸನ ವಿಧಾನಸಭಾ ಸ್ಥಾನಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯ ಮೂಡಿದೆ. ಭವಾನಿ ರೇವಣ್ಣರನ್ನು ಕಣಕ್ಕಿಳಿಸುವುದಿಲ್ಲ ಮತ್ತು ಬದಲಿಗೆ ಪಕ್ಷದ ನಿಷ್ಠಾವಂತ ಕಾರ್ಯಕರ್ತ ರನ್ನು ಕಣಕ್ಕೆ ಇಳಿಸಲಾಗುವುದು ಎಂದು ದೇವೇಗೌಡ ಹೇಳಿದರು.
ಹಾಸನ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಆದ ಭವಾನಿ ರೇವಣ್ಣ ಅವರು ಕುಮಾರಸ್ವಾಮಿ ಅವರ ಹಿರಿಯ ಸಹೋದರ ಹಾಗೂ ಮಾಜಿ ಸಚಿವ ಎಚ್ ಡಿ ರೇವಣ್ಣನವರ ಪತ್ನಿ. ದೇವೇಗೌಡ ಸೊಸೆ, ಅವರಿಗೆ ಪತಿ ಹಾಗೂ ಪುತ್ರ ಪ್ರಜ್ವಲ್ ಮತ್ತು ಸೂರಜ್ ರೇವಣ್ಣನ ಬೆಂಬಲ ಇದೆ. ಪಕ್ಷದ ವರ್ಚಸ್ಸಿಗೆ ಕುಂದು ಬರುವ ಕಾರಣ ಭವಾನಿಯವರಿಗೆ ಹಾಸನ ಟಿಕೆಟ್ ನೀಡಲು ನಿರಾಕರಿಸಲಾಗುತ್ತಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.












Click it and Unblock the Notifications