ಲೋಕಸಭೆ ಚುನಾವಣೆ 2024; ಹಾಸನದಿಂದ ದೇವೇಗೌಡರು ಕಣಕ್ಕೆ?
ಬೆಂಗಳೂರು, ನವೆಂಬರ್ 30; ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು 2024ರ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆಯೇ?. ಪಕ್ಷ ಎನ್‌ಡಿಎ ಮೈತ್ರಿಕೂಟಕ್ಕೆ ಬೆಂಬಲ ನೀಡಿ, ಬಿಜೆಪಿ ಜೊತೆ ರಾಜ್ಯದಲ್ಲಿ ಸೀಟು ಹಂಚಿಕೆ ಮಾಡಿಕೊಳ್ಳಲು ಮುಂದಾಗಿರುವ ಹೊತ್ತಿನಲ್ಲೇ ಈ ಚರ್ಚೆ ಆರಂಭವಾಗಿದೆ.
2019ರ ಚುನಾವಣೆಯಲ್ಲಿ ಎಚ್. ಡಿ. ದೇವೇಗೌಡರು ಹಾಸನ ಕ್ಷೇತ್ರವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣಗೆ ಬಿಟ್ಟುಕೊಟ್ಟಿದ್ದರು. ತುಮಕೂರು ಕ್ಷೇತ್ರದಿಂದ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆದರೆ 13,339 ಮತಗಳ ಅಂತರದಿಂದ ಬಿಜೆಪಿಯ ಜಿ. ಎಸ್. ಬಸವರಾಜ್ ವಿರುದ್ಧ ಸೋಲು ಕಂಡಿದ್ದರು.

ಕಳೆದ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳ ಪೈಕಿ ಹಾಸನದಲ್ಲಿ ಮಾತ್ರ ಜೆಡಿಎಸ್ (ಪ್ರಜ್ವಲ್ ರೇವಣ್ಣ) ಗೆಲುವು ಸಾಧಿಸಿದ್ದರು. ಬಳಿಕ ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ಎಚ್. ಡಿ. ದೇವೇಗೌಡರನ್ನು ಅವಿರೋಧವಾಗಿ ಆಯ್ಕೆ ಮಾಡಿ ಕಳಿಸಲಾಗಿತ್ತು.
ಚುನಾವಣೆ ತಯಾರಿ ಆರಂಭಿಸಿದ ದೇವೇಗೌಡರು; 2024ರ ಲೋಕಸಭೆ ಚುನಾವಣೆ ಸಮಯಕ್ಕೆ ದೇವೇಗೌಡರಿಗೆ 91 ವರ್ಷ ವಯಸ್ಸಾಗುತ್ತದೆ. ಆದ್ದರಿಂದ ಅವರು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂಬ ಲೆಕ್ಕಾಚಾರವಿತ್ತು. ಆದರೆ ಈಗ ದೇವೇಗೌಡರು ಚುನಾವಣೆ ಸಿದ್ಧತೆಯನ್ನು ಆರಂಭಿಸಿದ್ದಾರೆ. ಆದ್ದರಿಂದ ಅವರು ಚುನಾವಣಾ ಕಣಕ್ಕಿಳಿಯುತ್ತಾರೆ ಎಂಬ ಲೆಕ್ಕಾಚಾರ ಆರಂಭವಾಗಿದೆ.
ಎಚ್. ಡಿ. ದೇವೇಗೌಡರು ತಮ್ಮ ಸ್ವ ಕ್ಷೇತ್ರ ಹಾಸನದಿಂದಲೇ ಲೋಕಸಭೆ ಚುನಾವಣೆಗೆ ಸ್ಪರ್ಧಿಸಬಹುದು ಎಂಬುದು ಸದ್ಯದ ನಿರೀಕ್ಷೆ. ಹಾಗಾದರೆ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಯಾವ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ? ಎಂಬ ಪ್ರಶ್ನೆಗೆ ಜೆಡಿಎಸ್ ಪಕ್ಷದ ನಾಯಕರೇ ಉತ್ತರ ನೀಡಬೇಕಿದೆ.
ಮುಂಬರುವ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ತವರು ಜಿಲ್ಲೆ ಹಾಸನದಲ್ಲಿ ದೇವೇಗೌಡರು ಸಭೆಯೊಂದನ್ನು ಕರೆದಿದ್ದಾರೆ. ಡಿಸೆಂಬರ್ 1ರ ಶುಕ್ರವಾರ ಹೊಳೆನರಸೀಪುರ ತಾಲೂಕು ಶ್ರೀರಾಮದೇವರ ಕಟ್ಟೆಯಲ್ಲಿ ಈ ಸಭೆ ನಡೆಯಲಿದೆ.
ಸಭೆಗೆ ಆಗಮಿಸುವಂತೆ ಎಚ್. ಡಿ. ದೇವೇಗೌಡರು ಪತ್ರದ ಮೂಲಕ ಸಂಸದರು, ಶಾಸಕರು, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯರು, ಪಕ್ಷದ ಮುಖಂಡರಿಗೆ ಆಹ್ವಾನ ನೀಡಿದ್ದಾರೆ.
ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ ಪ್ರತಿನಿಧಿಗಳಿಗೂ ಆಹ್ವಾನ ನೀಡಲಾಗಿದೆ. ಎಚ್. ಡಿ. ದೇವೇಗೌಡರ ಅಧ್ಯಕ್ಷತೆಯಲ್ಲಿಯೇ ಈ ಸಭೆ ನಡೆಯಲಿದೆ. ಲೋಕಸಭೆ ಚುನಾವಣೆ ತಯಾರಿಯನ್ನು ತವರು ಜಿಲ್ಲೆಯಿಂದಲೇ ಗೌಡರು ಆರಂಭಿಸಿದರೆ? ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ.
2019ರ ಮಾರ್ಚ್‌ನಲ್ಲಿ ಎಚ್. ಡಿ. ದೇವೇಗೌಡರು ಹಾಸನದ ಮೂಡಲಹಿಪ್ಪೆ ಗ್ರಾಮದಿಂದ ಲೋಸಕಭೆ ಚುನಾವಣೆ ಪ್ರಚಾರ ಆರಂಭಿಸಿದ್ದರು. "ನಾನು ಈ ಬಾರಿ ಹಾಸನ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸದಿರಲು ನಿರ್ಧರಿಸಿದ್ದೇನೆ" ಎಂದು ಹೇಳಿದ್ದರು.
ಮಾಜಿ ಸಚಿವ ಎಚ್. ಡಿ. ರೇವಣ್ಣ ಪುತ್ರ, ಮೊಮ್ಮಗ ಪ್ರಜ್ವಲ್ ರೇವಣ್ಣಗೆ ಹಾಸನ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದರು. ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ 12,77,552 ಮತಗಳನ್ನು ಪಡೆದು ಜಯಗಳಿಸಿದ್ದರು. ರಾಜ್ಯದ 28 ಕ್ಷೇತ್ರಗಳ ಪೈಕಿ ಜೆಡಿಎಸ್ ಗೆದ್ದಿರುವುದು ಹಾಸನ ಒಂದೇ ಕ್ಷೇತ್ರದಲ್ಲಿ.
ಹಾಸನ ಕ್ಷೇತ್ರಕ್ಕೆ ಎಚ್. ಡಿ. ದೇವೇಗೌಡರ ಉತ್ತರಾಧಿಕಾರಿ ಪ್ರಜ್ವಲ್ ರೇವಣ್ಣ ಎಂದು ಅಂದಾಜಿಸಲಾಗಿದೆ. ಆದರೆ 2024ರ ಚುನಾವಣೆಯಲ್ಲಿ ದೇವೇಗೌಡರು ಅಥವ ಪ್ರಜ್ವಲ್ ರೇವಣ್ಣ ಯಾರು ಹಾಸನದಿಂದ ಕಣಕ್ಕಿಳಿಯುತ್ತಾರೆ? ಎಂಬುದು ಇನ್ನೂ ಅಂತಿಮವಾಗಿಲ್ಲ.
2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ 19 ಕ್ಷೇತ್ರಗಳಲ್ಲಿ ಜಯಗಳಿಸಿದೆ. ಬಳಿಕ ಪಕ್ಷ ಎನ್‌ಡಿಎ ಮೈತ್ರಿಕೂಟಕ್ಕೆ ಬೆಂಬಲ ಘೋಷಣೆ ಮಾಡಿದೆ. ದೆಹಲಿಯಲ್ಲಿ ದೇವೇಗೌಡರ ಸಮ್ಮುಖದಲ್ಲಿಯೇ ಬಿಜೆಪಿ ಅಧ್ಯಕ್ಷ ಜೆ. ಪಿ. ನಡ್ಡಾ ಜೆಡಿಎಸ್ ಅನ್ನು ಮೈತ್ರಿಕೂಟಕ್ಕೆ ಸ್ವಾಗತ ಮಾಡಿದ್ದಾರೆ.
2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ 25 ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್‌ಗೆ ಬೆಂಬಲ ನೀಡಿತ್ತು. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ರಾಜ್ಯದಲ್ಲಿ ಬಿಜೆಪಿ ಜೊತೆ ಸೀಟು ಹಂಚಿಕೆ ಮಾಡಿಕೊಳ್ಳಬೇಕಿದೆ.
ಜೆಡಿಎಸ್ ಪಕ್ಷದ ಜೊತೆ ಸೀಟು ಹಂಚಿಕೆ ಮಾತುಕತೆ ಇನ್ನೂ ಅಂತಿಮಗೊಂಡಿಲ್ಲ. ಮಾಹಿತಿಗಳ ಪ್ರಕಾರ 5 ಕ್ಷೇತ್ರಗಳಿಗೆ ಪಕ್ಷ ಬೇಡಿಕೆ ಇಟ್ಟಿದೆ. ಇದರಲ್ಲಿ ಪಕ್ಷದ ಭದ್ರಕೋಟೆಯಾಗಿರುವ ಹಾಸನ ಸಹ ಒಂದಾಗಿದೆ. ಆದರೆ ಹಾಸನದಿಂದ ಜೆಡಿಎಸ್ ಅಭ್ಯರ್ಥಿ ಯಾರು? ಎಂಬುದೇ ಕುತೂಹಲವಾಗಿದೆ.












Click it and Unblock the Notifications