Cauvery Water Dispute: ಕಾವೇರಿಗಾಗಿ ಹೋರಾಟ; ಕಣ್ಣೀರು ಹಾಕಿದ ಹೆಚ್ ಡಿ ದೇವೇಗೌಡ
ಬೆಂಗಳೂರು, ಸೆಪ್ಟೆಂಬರ್ 25: ಕಾವೇರಿ ವಿಚಾರವಾಗಿ ಮಂಗಳವಾರ ಬೆಂಗಳೂರು ಬಂದ್ ಗೆ ಸರ್ವ ಸಂಘಟನೆಗಳು ಬಂದ್ ಗೆ ಕರೆ ಕೊಟ್ಟಿದ್ದು, ಇತ್ತ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಕಾವೇರಿ ವಿಚಾರವಾಗಿ ಸುದ್ದಿಗೋಷ್ಟಿ ನಡೆಸಿದ ವೇಳೆ ಕಣ್ಣೀರು ಹಾಕಿದ್ದಾರೆ.
ಹೌದು, ಬೆಂಗಳೂರಿನ ಜೆ ಪಿ ನಗರದಲ್ಲಿ ಸೋಮವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿಯವರು ಅಣೆಕಟ್ಟಿಗೆ ಹೋಗಿ ಖುದ್ದು ಪರಿಶೀಲನೆ ನಡೆಸಿದ್ದಾರೆ. ಕುಮಾರಸ್ವಾಮಿ ಈ ಬಗ್ಗೆ ವಿವರಗಳನ್ನು ನೀಡಿದ ಬಳಿಕವೇ ನಾನು ಕಾವೇರಿ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದೇನೆ ಎಂದು ಹೇಳಿದ್ದಾರೆ.

ಕಾವೇರಿ ನದಿ ವಿವಾದದ ಬಗ್ಗೆ ಕೇಂದ್ರ ಸರ್ಕಾರ ಅರ್ಜಿ ಹಾಕಿಬೇಕು. ಕೇಂದ್ರ ಜಲಶಕ್ತಿ ಇಲಾಖೆಯಿಂದ ಸುಪ್ರೀಂಕೋರ್ಟ್ಗೆ ಅರ್ಜಿ ಹಾಕಿಸಲಿ. ಕಾವೇರಿ ವ್ಯಾಪ್ತಿಯ ವಾಸ್ತವಸ್ಥಿತಿ ಅಧ್ಯಯನಕ್ಕೆ ಕೇಂದ್ರ ತಂಡ ಕಳಿಸಲಿ. ತಜ್ಞರ ಸಮಿತಿ ಕಳಿಸಲು ಸುಪ್ರೀಂಕೋರ್ಟ್ ಗೆ ನಿವೇದನೆ ಮಾಡಿಕೊಳ್ಳಲು ಪ್ರಧಾನಿಯವರಿಗೆ ಮನವಿ ಮಾಡುತ್ತೇನೆ. ಪ್ರಧಾನಿ ಮೋದಿ ನನ್ನ ಮನವಿಯನ್ನು ಪರಿಗಣಿಸುವ ವಿಶ್ವಾಸ ಇದೆ ಎಂದು ದೇವೇಗೌಡರು ಹೇಳಿದರು.
ತಮಿಳಿನಾಡಿನ ಅಣ್ಣ ತಮ್ಮಂದಿರು ಕೂಡಾ ಅರ್ಥ ಮಾಡಿಕೊಳ್ಳಬೇಕು. ಅವರೂ ಬದುಕಬೇಕು, ನಾವೂ ಬದುಕಬೇಕು. ನಾನು ರಾಜ್ಯಸಭೆಯಲ್ಲಿ ಮನವಿ ಮಾಡಿದ್ದೇನೆ, ಐದು ಜನರನ್ನು ಪರಿಶೀಲನೆ ಮಾಡಲು ಕಳಿಸಿ ಕೊಡಿ. ಕರ್ನಾಟಕ ಅಥವಾ ತಮಿಳುನಾಡಿನವರು ಬೇಡ, ಬೇರೆ ರಾಜ್ಯಗಳವರನ್ನು ಕಳಿಸಿ ಕೊಡಿ. ಎರಡೂ ರಾಜ್ಯಗಳ ಪರಿಸ್ಥಿತಿ ಅರ್ಥ ಮಾಡಿಕೊಂಡು ವರದಿ ಕೊಡಿ. ನಾನು ನಿಲ್ಲಲೂ ಆಗಲ್ಲ, ರಾಜ್ಯಸಭೆಯಲ್ಲಿ ನನ್ನ ಶಕ್ತಿ ಬಳಕೆ ಮಾಡಿ ಎದ್ದು ನಿಂತು ಮಾತಾಡಿದ್ದೇನೆ, ಕಣ್ಣೀರು ಹಾಕಿದ್ದೇನೆ ಎಂದು ಹೇಳಿದರು.
ನಾಳೆ ಬಂದ್ ವಿಚಾರದಲ್ಲಿ ಯಾರು ಏನು ಮಾತಾಡ್ತಾರೆ ಅದರ ಬಗ್ಗೆ ನಾನು ಮಾತಾಡಲ್ಲ. ನಮ್ಮ ಎಲ್ಲ ಶಾಸಕರು ಕುಳಿತು ಪಕ್ಷದ ಬಗ್ಗೆ ಮಾತಾಡಿದ್ದೇವೆ, ಆ ವಿಚಾರಗಳೆಲ್ಲಾ ಈಗ ಬೇಡ. ಈಗ ಕೇವಲ ಕಾವೇರಿ ವಿಚಾರವಾಗಿ ಮಾತ್ರ ಮಾತನಾಡೋಣ. ರಾಜಕೀಯ ಲಾಭಕ್ಕಾಗಿ ನಾನು ಮಾತಾಡಲ್ಲ, ನಾಡಿನ ಜನತೆಯ ಸಂಕಷ್ಟದ ಹಿನ್ನಲೆಯಲ್ಲಿ ನನ್ನ ಹೋರಾಟ. ಯಾವುದೇ ದಾಕ್ಷಿಣ್ಯ ಇಲ್ಲ ಎಂದು ಹೇಳಿದರು.
ತಮಿಳುನಾಡಿನ ರಾಜಕೀಯ ಶಕ್ತಿ ಬಳಸಿಕೊಳ್ಳಲಿಕ್ಕಾಗೇ ಈ ತೀರ್ಮಾನ ಗಳು ಆಗ್ತಾ ಇವೆಯಾ.? ತಮಿಳುನಾಡಿನಲ್ಲಿ 48 ಎಂಪಿ ಇದ್ರೆ ಇಲ್ಲಿ 28 ಜನ ಇದಾರೆ. ಇದು ನೆನ್ನೆ ಮೊನ್ನೆ ವಿಷಯ ಅಲ್ಲ, ಅವರ ರಾಜಕೀಯ ಶಕ್ತಿಗೆ ನಮ್ಮ ನ್ನು ಹೇಗೆ ದುರ್ಬಳಕೆ ಮಾಡಿಕೊಳ್ತಿದಾರೆ. ನೀರು ಬಿಡಬೇಡಿ ಅಂತ ಮೊದಲ ದಿನವೇ ನಾನು ಹೇಳಿದ್ದೆ, ತಮಿಳುನಾಡಿನವರು ಅರ್ಜಿ ಹಾಕಿದ್ದಾರೆ, ನಮ್ಮ ರಾಜ್ಯದಿಂದ ಕೂಡಾ ಅರ್ಜಿ ಹಾಕಿ ಅಲ್ಲಿವರೆಗೂ ನೀರು ಬಿಡಬೇಡಿ ಅಂತ ಹೇಳಿದ್ದೆ. ನಾನು ಯಾರ ಬಗ್ಗೆಯೂ ಮಾತಾಡಲ್ಲ. ನಾಳೆ ಬಂದ್ ನಡೆದು ಹೋಗಲಿ. ಕುಮಾರಸ್ವಾಮಿ ಬಂದ್ ಗೆ ಬೆಂಬಲ ಕೊಟ್ಟಿದ್ದಾರೆ. ಬಂದ್ ಶಾಂತಿಯುತವಾಗಿ ನಡೆದು ಹೋಗಲಿ ಎಂದರು.












Click it and Unblock the Notifications