ಕಾಂಗ್ರೆಸ್, ಬಿಜೆಪಿಗೆ ಬಹುಮತ ಬಂದರೆ ರಾಜಕೀಯ ನಿವೃತ್ತಿ!
ಬೆಂಗಳೂರು, ಜ.20 : ಕಾಂಗ್ರೆಸ್ ಅಥವ ಬಿಜೆಪಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದರೆ ತಾವು ರಾಜಕೀಯ ನಿವೃತ್ತಿ ಪಡೆಯುವುದಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಘೋಷಿಸಿದ್ದಾರೆ. ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಖಚಿತ, ಸ್ವಂತ ಬಲದ ಮೇಲೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂಬುದು ನರೇಂದ್ರ ಮೋದಿ ಕನಸು ಎಂದು ಗೌಡರು ಭವಿಷ್ಯ ನುಡಿದಿದ್ದಾರೆ.
ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಸೋವಮಾರ ಮಾಜಿ ಸಚಿವ ಶಿವಾನಂದ ನಾಯ್ಕ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡ ನಂತರ ಮಾತನಾಡಿದ ಎಚ್.ಡಿ.ದೇವೇಗೌಡ, ಯಾವ ಪಕ್ಷವೂ ಸ್ವಂತ ಬಲದ ಮೇಲೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಬಿಜೆಪಿ ಅಥವ ಕಾಂಗ್ರೆಸ್ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದರೆ ತಾವು ರಾಜಕೀಯ ನಿವೃತ್ತಿ ಘೋಷಿಸುವುದಾಗಿ ಹೇಳಿದರು. [ದೇವೇಗೌಡರಲ್ಲಿ ಮೋದಿಯನ್ನು ಕಾಣಿ]

ವಿ.ಪಿ.ಸಿಂಗ್ ಅವರ ಅಧಿಕಾರಾವಧಿಯಲ್ಲಿ ಪ್ರಾರಂಭವಾದ ಮೈತ್ರಿ ಸರ್ಕಾರದ ಸಂಸ್ಕೃತಿ ಈ ಬಾರಿಯೂ ಮುಂದುವರೆಯಲಿದ್ದು, ಇದರಲ್ಲಿ ಸಂಶಯವಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿಯ ಆಡಳಿತ ವೈಫಲ್ಯವನ್ನು ಜನರು ನೋಡಿದ್ದಾರೆ. ಅವರು ಏನೇ ಮೋಡಿ ಮಾಡಿದರೂ ಮತದಾರರು ನಂಬುವುದಿಲ್ಲ. ಆದ್ದರಿಂದ ಬಹುಮತ ಬರುವುದಿಲ್ಲ ಎಂದು ಗೌಡರು ಹೇಳಿದರು.
ಪ್ರಚಾರ ಸಿಗುತ್ತದೆ ಎಂದು ಯಾವುದೇ ವ್ಯಕ್ತಿಯ ಬಗ್ಗೆ ಲಘುವಾಗಿ ಮಾತನಾಡುವುದು ತಪ್ಪು, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಕುರಿತು ಮಣಿಶಂಕರ್ ಅಯ್ಯರ್ ಆ ರೀತಿ ಹೇಳಿಕೆ ನೀಡಬಾರದಿತ್ತು ಎಂದರು. ರಾಜಕೀಯವಾಗಿ ಅಡ್ವಾಣಿ ಅವರ ಬಗ್ಗೆ ನನ್ನ ವಿರೋಧವಿದೆ. ಆದರೆ, ವೈಯಕ್ತಿಕವಾಗಿ ನಾನು ಅವರನ್ನು ಗೌರವಿಸುತ್ತೇನೆ ಎಂದು ಗೌಡರು ತಿಳಿಸಿದರು.
ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಕ್ಕೆ ರಾಜ್ಯದ ಜನರಿಗೆ ಒಳ್ಳೆಯ ಅಭಿಪ್ರಾಯವಿಲ್ಲ. ಕೇವಲ ಮತಗಳಿಕೆಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುವುದಾಗಿ ಹೇಳುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಹೇಳುತ್ತಾ ಜನರನ್ನು ವಂಚಿಸುತ್ತಿದ್ದಾರೆ ಎಂದು ಗೌಡರು ಆರೋಪಿಸಿದರು.
ಪಕ್ಷ ಸಂಘಟನೆಗಾಗಿ ಸಮಾವೇಶ : ಮುಂಬರುವ ಲೋಕಸಭೆ ಚುನಾವಣೆಗೆ ಪಕ್ಷವನ್ನು ಸಂಘಟಿಸಲು ರಾಜ್ಯದ ಹಲವು ಭಾಗಗಳಲ್ಲಿ ಸಮಾವೇಶವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದ್ದು, ಇದೇ ಜ.22ರಂದು ತುಮಕೂರಿನಲ್ಲಿ ಮಹಿಳಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಫೆ.16ರಂದು ಕುಮಟಾದಲ್ಲಿ ಸಮಾವೇಶವನ್ನು ಹಮ್ಮಿಕೊಂಡಿದ್ದು, ಅದೇ ರೀತಿ ಅರಮನೆ ಮೈದಾನದಲ್ಲಿ ಯುವ ಜಾಗೃತಿ ಸಮಾವೇಶ ನಡೆಸಲಾವುದು ಎಂದು ದೇವೇಗೌಡರು ಮಾಹಿತಿ ನೀಡಿದು.
ಆಹ್ವಾನ ಮನ್ನಿಸಿ ಬಂದಿದ್ದೇನೆ : ಜೆಡಿಎಸ್‌ಗೆ ಸೇರ್ಪಡೆಯಾದ ಮಾಜಿ ಸಚಿವ ಶಿವಾನಂದ ನಾಯಕ್ ಮಾತನಾಡಿ, ಹಿಂದೆ ಮಧುಬಂಗಾರಪ್ಪ ಅವರು ನನ್ನನ್ನು ಪಕ್ಷಕ್ಕೆ ಆಹ್ವಾನಿಸಿದ್ದರು. ಪಕ್ಷದ ಸಿದ್ಧಾಂತಗಳನ್ನು ಮೆಚ್ಚಿ ಜೆಡಿಎಸ್‌ಗೆ ಸೇರ್ಪಡೆಗೊಂಡಿದ್ದೇನೆ ಎಂದು ಹೇಳಿದರು. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಸಂಘಟನೆಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.












Click it and Unblock the Notifications