ಸಿದ್ದರಾಮಯ್ಯಗೆ ದೂರವಾಣಿ ಕರೆ ಮಾಡಿದ ಎಚ್.ಡಿ.ದೇವೇಗೌಡ!
Recommended Video

ಬೆಂಗಳೂರು, ಅಕ್ಟೋಬರ್ 18 : ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರೆ ಮಾಡಿದ್ದಾರೆ. ಉಭಯ ನಾಯಕರು ಸುಮಾರು 20 ನಿಮಿಷ ಮಾತುಕತೆ ನಡೆಸಿದ್ದಾರೆ.
ಬುಧವಾರ ಸಂಜೆ 6.30ರ ಸುಮಾರಿಗೆ ಎಚ್.ಡಿ.ದೇವೇಗೌಡರು ಸಿದ್ದರಾಮಯ್ಯ ಅವರಿಗೆ ಕರೆ ಮಾಡಿದ್ದರು. ಉಭಯ ನಾಯಕರು ರಾಜ್ಯದ ಐದು ಕ್ಷೇತ್ರಗಳ ಉಪ ಚುನಾವಣೆ ಬಗ್ಗೆ ಮಾತನಾಡಿದ್ದಾರೆ. ಐದೂ ಕ್ಷೇತ್ರಗಳನ್ನು ಗೆಲ್ಲಲು ಮಾಡಬೇಕಾದ ತಂತ್ರದ ಕುರಿತು ಮಾತನಾಡಿದ್ದಾರೆ.
ಮಂಡ್ಯ, ಶಿವಮೊಗ್ಗ, ಬಳ್ಳಾರಿ ಲೋಕಸಭೆ, ರಾಮನಗರ ಮತ್ತು ಜಮಖಂಡಿ ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿದೆ. ನವೆಂಬರ್ 3ರಂದು ಚುನಾವಣೆ ನಡೆಯಲಿದ್ದು, ನವೆಂಬರ್ 6ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ಬಳ್ಳಾರಿ ಮತ್ತು ಶಿವಮೊಗ್ಗದಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿ ಅಭ್ಯರ್ಥಿಗಳು ಗೆಲ್ಲಬಾರದು ಎಂದು ದೇವೇಗೌಡರು ಹೇಳಿದ್ದು, ಅದಕ್ಕಾಗಿ ಸರಿಯಾದ ತಂತ್ರ ರೂಪಿಸೋಣ, ಎರಡೂ ಪಕ್ಷಗಳ ನಾಯಕರು ಒಗ್ಗಟ್ಟಾಗಿ ಚುನಾವಣೆ ಎದುರಿಸೋಣ ಎಂದು ದೇವೇಗೌಡರು ಹೇಳಿದ್ದಾರೆ.....

ಒಟ್ಟಿಗೆ ಪ್ರಚಾರ ಮಾಡೋಣ
ಎಚ್.ಡಿ.ದೇವೇಗೌಡರು ಶಿವಮೊಗ್ಗ ಮತ್ತು ಬಳ್ಳಾರಿ ಲೋಕಸಭಾ ಕ್ಷೇತ್ರಗಳ ಉಪ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಈ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಬಾರದು ಎಂಬುದು ದೇವೇಗೌಡರ ಗುರಿ. ಅದಕ್ಕಾಗಿ ಈ ಎರಡೂ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಮತ್ತು ಎಚ್.ಡಿ.ದೇವೇಗೌಡರು ಒಟ್ಟಾಗಿ ಪ್ರಚಾರ ನಡೆಸಲಿದ್ದಾರೆ.

ದೇವೇಗೌಡರ ಮಾತಿಗೆ ಓಕೆ ಎಂದ ಸಿದ್ದರಾಮಯ್ಯ
ಎಚ್.ಡಿ.ದೇವೇಗೌಡರು ಹೇಳಿದ ಎಲ್ಲಾ ಮಾತುಗಳಿಗೆ ಸಿದ್ದರಾಮಯ್ಯ ಅವರು ಒಪ್ಪಿಗೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲದಂತೆ ರಣತಂತ್ರ ರೂಪಿಸಿ. ಅದಕ್ಕೆ ಅಗತ್ಯವಿರುವ ಬೆಂಬಲವನ್ನು ನಾವು ನೀಡುತ್ತೇವೆ ಎಂದು ದೇವೇಗೌಡರಿಗೆ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಕುಮಾರಸ್ವಾಮಿ ಅವರಿಗೂ ಸೂಚನೆ
ಶಿವಮೊಗ್ಗದಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲಿಸುವ ಹೊಣೆಯನ್ನು ದೇವೇಗೌಡರು ಎಚ್.ಡಿ.ಕುಮಾರಸ್ವಾಮಿ ಅವರಿಗೆ ನೀಡಿದ್ದಾರೆ. ಮಂಡ್ಯ, ರಾಮನಗರ, ಬಳ್ಳಾರಿಗಿಂತ ಹೆಚ್ಚು ಪ್ರಚಾರವನ್ನು ಶಿವಮೊಗ್ಗದಲ್ಲಿ ನಡೆಸುವಂತೆ ಸೂಚಿಸಿದ್ದಾರೆ. ಆದ್ದರಿಂದ, ಕುಮಾರಸ್ವಾಮಿ ಅವರು 5 ದಿನಗಳ ಕಾಲ ಶಿವಮೊಗ್ಗದಲ್ಲಿ ಮಧು ಬಂಗಾರಪ್ಪ ಪರವಾಗಿ ಮತ ಯಾಚನೆ ಮಾಡುವ ಸಾಧ್ಯತೆ ಇದೆ.

ಮೈತ್ರಿ ಗಟ್ಟಿಗೊಳ್ಳಲಿದೆ
ಉಪ ಚುನಾವಣಯಲ್ಲಿ ನಾವು ಗೆದ್ದರೆ ಜನರಿಗೂ ಸರ್ಕಾರದ ಮೇಲೆ ನಂಬಿಕೆ ಬರಲಿದೆ. 2019ರ ಲೋಕಸಭೆ ಚುನಾವಣೆಗೆಗೂ ಮೈತ್ರಿ ಗಟ್ಟಿಗೊಳ್ಳಲಿದೆ ಎಂದು ದೇವೇಗೌಡರು ಸಿದ್ದರಾಮಯ್ಯ ಅವರಿಗೆ ವಿವರಿಸಿದ್ದಾರೆ. ಕಾಂಗ್ರೆಸ್ ಪಕ್ಷದ ವತಿಯಿಂದಲೂ ಚುನಾವಣೆಯಲ್ಲಿ ಗೆಲ್ಲಲು ಪ್ರಯತ್ನ ನಡೆಸುತ್ತೇವೆ ಎಂದು ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ.












Click it and Unblock the Notifications