ಪೊಲೀಸರ ಕಾರ್ಯವೈಖರಿ ತರಾಟೆಗೆ ತೆಗೆದುಕೊಂಡ ಹೈಕೋರ್ಟ್
ಬೆಂಗಳೂರು, ಮೇ 07: ರಾಜ್ಯ ಪೊಲೀಸ್ ತನಿಖಾ ವಿಧಾನದ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ. ನ್ಯಾಯಮೂರ್ತಿ ವಿ. ಶ್ರಿಷಾನಂದ ಅವರು, ಕ್ರಿಮಿನಲ್ ಪ್ರಕರಣವೊಂದರ ವಿಚಾರಣೆ ಸಂದರ್ಭದಲ್ಲಿ ಪೊಲೀಸ್ ತನಿಖಾ ವರದಿಯ ಲೋಪಗಳ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಕ್ರಿಮಿನಲ್ ಪ್ರಕರಣಗಳಲ್ಲಿ ಯಾವುದೇ ತನಿಖಾಧಿಕಾರಿಯು ಪೋಸ್ಟ್ ಮಾರ್ಟಮ್ ನಡೆಯುವ ಸ್ಥಳಕ್ಕೆ ಹೋಗುವುದಿಲ್ಲ. ಡಿವೈಎಸ್‌ಪಿ ಶ್ರೇಣಿಯ ಅಧಿಕಾರಿಗಳಿಗೂ ಘಟನಾ ಸ್ಥಳದ ಪಂಚನಾಮೆ/ ಮಹಜರು ವರದಿಯ ಬಗ್ಗೆ ನಾಲ್ಕು ವಾಕ್ಯಗಳನ್ನು ಸರಿಯಾಗಿ ಬರೆಯಲು ಬರುವುದಿಲ್ಲ. ಕಾನೂನುಗಳ ಬಗ್ಗೆ ಆಳವಾದ ಮಾಹಿತಿ ಇರದ ಪೊಲೀಸ್ ಮುಖ್ಯ ಪೇದೆ ತನಿಖೆ ನಡೆಸಿ ವರದಿ ಸಿದ್ಧಪಡಿಸಿದರೆ, ಅದಕ್ಕೆ ಸರ್ಕಲ್ ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್ ಸಹಿ ಮಾಡಿ ಕೋರ್ಟ್‌ಗೆ ಸಲ್ಲಿಸುತ್ತಾರೆ ಎಂದು ಜಾಡಿಸಿದೆ.

ತರಬೇತಿ ನೀಡುವಂತೆ ಸೂಚನೆ: ಕ್ರಿಮಿನಲ್ ಕಾನೂನುಗಳು ತನಿಖಾಧಿಕಾರಿ ತಿಳಿದಿರಬೇಕು. ಅದಕ್ಕಾಗಿ ಸರ್ಕಾರಿ ವಕೀಲರು-ಕಾನೂನು ತಜ್ಞರು ನಿಯಮಿತವಾಗಿ ಕಾಯಕ್ರಮ ನಡೆಸಿ ಕಾನೂನುಗಳ ಮಾಹಿತಿ ನೀಡಬೇಕು ಎಂದು ಸರ್ಕಾರಿ ಅಭಿಯೋಜರಿಗೆ ಸಲಹೆ ನೀಡಿದರು.
ಅಲ್ಲದೆ, ಸರ್ಕಾರಿ ವಕೀಲರು, ನ್ಯಾಯಾಧೀಶರು ಹಾಗೂ ಕಾನೂನು ತಜ್ಞರು ನಿಯಮಿತವಾಗಿ ಕಾರ್ಯಕ್ರಮಗಳನ್ನು ನಡೆಸಿ ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಕಾನೂನುಗಳ ಅರಿವು ಮೂಡಿಸಬೇಕು. ನ್ಯಾಯಾಲಯಗಳ ತೀರ್ಪುಗಳ ಬಗ್ಗೆ ಮಾಹಿತಿ ನೀಡಬೇಕು. ತನಿಖೆ ವೇಳೆ ಅನುಸರಿಸಬೇಕಾದ ವಿಧಾನಗಳನ್ನು ತಿಳಿಸಿಕೊಡಬೇಕು ಸೂಕ್ತ ಎಂದು ಸಲಹೆ ನೀಡಿದೆ.
ನೋಡಿ ಅಭಿಯೋಜಕರೇ ಪೊಲೀಸರು ಸಮರ್ಪಕವಾದ ತನಿಖೆ ನಡೆಸುತ್ತಿಲ್ಲ. ತನಿಖೆ ವೇಳೆ ಅನುಸರಿಸಬೇಕಾದ ವಿಧಾನಗಳನ್ನು ಪಾಲಿಸುತ್ತಿಲ್ಲ. ಈ ಪರಿಸ್ಥಿತಿಗೂ ಮತ್ತೊಂದು ಕಾರಣವಿದೆ. ಪ್ರತಿ ದಿನ ವಿಐಪಿಯೊಬ್ಬರು ನಗರಕ್ಕೆ ಬರುತ್ತಾರೆ. ಅವರ ಸುಗಮ ಸಂಚಾರ ವ್ಯವಸ್ಥೆ ಹಾಗೂ ಬಂದೋಬಸ್ತ್‌ಗೆ ಎಲ್ಲಾ ಪೊಲೀಸರನ್ನು ನಿಯೋಜಿಸಲಾಗುತ್ತದೆ. ಬೆಳಗ್ಗೆ ಎದ್ದರೆ ಪೊಲಿಸರು ಬಂದೋಬಸ್ತ್ ಕೆಲಸದಲ್ಲಿ ಇರುತ್ತಾರೆ. ಇನ್ನು ಯಾವಾಗ ಪೊಲೀಸರು ತನಿಖೆ ನಡೆಸುತ್ತಾರೆ? ಎಂದು ಸದ್ಯದ ಪರಿಸ್ಥಿತಿಯನ್ನು ವಿವರಿಸಿದರು.
ಅಲ್ಲದೇ, ಇನ್ಸ್‌ಪೆಕ್ಟರ್ ಹಾಗೂ ಸಬ್ ಇನ್ಸ್‌ಪೆಕ್ಟರ್ ಬಂದೋಬಸ್ತ್ ಕೆಲಸದಲ್ಲಿದ್ದರೆ, ಹೆಡ್ ಕಾನ್ಸ್‌ಸ್ಟೇಬಲ್ ತನಿಖೆ ನಡೆಸಿ, ವರದಿ ಸಿದ್ದಪಡಿಸುತ್ತಾರೆ. ಆ ವರದಿಗೆ ಸಕರ್ಲ್ ಇನ್ಸ್‌ಪೆಕ್ಟರ್ ಅಥವಾ ಸಬ್ಇನ್ಸ್‌ಪೆಕ್ಟರ್ ಸಹಿ ಮಾಡಿ, ಕೋರ್ಟ್‌ಗೆ ಸಲ್ಲಿಸುತ್ತಾರೆ. ಹೆಡ್‌ಕಾನ್‌ಸ್ಟೇಬಲ್‌ಗೆ ಕಾನೂನು ಬಗ್ಗೆ ಏನು ಗೊತ್ತಿರುತ್ತದೆ? ಕೋರ್ಟ್ ತೀರ್ಪುಗಳ ಬಗ್ಗೆ ಮಾಹಿತಿ ಏನಿರುತ್ತದೆ? ಕಾನೂನು ತಿಳಿಯದಿದ್ದರೆ ಯಾವ ರೀತಿ ತನಿಖೆ ನಡೆಸಿರುತ್ತಾರೆ? ಎಂದು ಊಹಿಸಿಕೊಳ್ಳಲಿ ಎಂದು ನ್ಯಾಯಮೂರ್ತಿಗಳು ಹೇಳಿದರು.
ಇನ್ನೂ ಯಾವೊಬ್ಬರ ತನಿಖಾಧಿಕಾರಿ ಪೋಸ್ಟ್‌ಮಾರ್ಟಮ್ ನಡೆಯುವ ವೇಳೆ ಹಾಜರಿರುವುದಿಲ್ಲ. ವಾಸನೆ ಬರುತ್ತಿರುತ್ತದೆ ಎಂಬ ಕಾರಣಕ್ಕೆ ಹೋಗುವುದಿಲ್ಲ. ಅಪರೂಪಕ್ಕೆ ಮಹತ್ವದ ಪ್ರಕರಣದಲ್ಲಿ ಹೋದರೂ ವೈದ್ಯರ ಜೊತೆ ಮಾತನಾಡುತ್ತಾ ಕೂರುತ್ತಾರಷ್ಟೆ. ಪಂಚನಾಮೆ.ಮಹಜರು ಸರಿಯಾಗಿ ಮಾಡುವುದಿಲ್ಲ. ಡಿವೈಎಸ್‌ಪಿ ಶ್ರೇಣಿಯ ಅಧಿಕಾರಿಯಾಗಿದ್ದರೂ ಸರಿಯಾಗಿ ನಾಲ್ಕು ವಾಕ್ಯ ಪಂಚನಾಮೆ ಬಗ್ಗೆ ಬರೆಯೋಕೆ ಗೊತ್ತಿರುವುದಿಲ್ಲ. ತನಿಖೆಯಲ್ಲಿ ಘಟನಾ ಸ್ಥಳದ ಮಹಜರು/ ಸ್ಕೆಚ್ ಮಹತ್ವದಾಯಕ ಎಂದು ನ್ಯಾಯಮೂರ್ತಿ ಬೇಸರ ವ್ಯಕ್ತಪಡಿಸಿದರು.
ಮಹಜರು/ ಪಂಚನಾಮೆ ವರದಿಯು ಅಪರಾಧ ಘಟನೆಯ ಸಂಕ್ಷಿಪ್ತವಾದ ಚಿತ್ರಣ ನೀಡುತ್ತದೆ. ಆರೋಪಿಗೆ ಘಟನೆ ಸ್ಥಳಕ್ಕೆ ಹೇಗೆ ಬಂದ, ಮರಳಿ ಹೇಗೆ ಹೋದ, ಹೇಗೆ ಕೃತ್ಯ ಎಸಗಿದ, ಆರೋಪಿಯನ್ನು ಯಾರಾದರೂ ನೋಡಿರುವ ಸಾಧ್ಯತೆ ಇದೆಯೇ? ಘಟನಾ ಸ್ಥಳದ ಸುತ್ತಾ ಏನೇನಿದೆ ಎಂಬುದನ್ನು ಮಹಜರು ವರದಿ ತಿಳಿಸುತ್ತದೆ.
ಈ ಎಲ್ಲಾ ವಿವರಗಳು ತಿಳಿಯದೆ ಹೋದರೆ ತನಿಖೆ ಸರಿದಾರಿಯಲ್ಲಿ ಹೇಗೆ ಹೋಗುತ್ತದೆ?. ಈ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕು. ತನಿಖಾಧಿಕಾರಿ ಸೂಕ್ತವಾಗಿ ಮಹಜರು ಮಾಡಬೇಕು. ಮಾಸ್ಕ್ ಧರಿಸಿ ಶವ ಪರೀಕ್ಷೆ ನಡೆಯುವ ಸ್ಥಳಕ್ಕೆ ಹೋಗಬೇಕು ಎಂದು ಆದೇಶಿಸಿದೆ.












Click it and Unblock the Notifications