ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್, 7 ಅಧಿಕಾರಿಗಳಿಗೆ ರಿಲೀಫ್ ಕೊಟ್ಟ ಕೋರ್ಟ್
ಬೆಂಗಳೂರು, ಜುಲೈ 09: ಹೆಚ್ಚುವರಿ ಪೊಲೀಸ್ ನಿರ್ದೇಶಕ ಸೀಮಂತ್ ಕುಮಾರ್ ಸಿಂಗ್ ಸೇರಿದಂತೆ ಇತರೆ 7 ಮಂದಿ ಅಧಿಕಾರಿಗಳಿಗೆ ಕರ್ನಾಟಕ ಹೈಕೋರ್ಟ್ ದೊಡ್ಡ ರಿಲೀಫ್ ನೀಡಿದೆ. ಅಧಿಕಾರ ದುರುಪಯೋಗ ಮತ್ತು ಸುಲಿಗೆ ಆರೋಪದಲ್ಲಿ ಅವರುಗಳ ವಿರುದ್ಧ ಲೊಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣಾ ಪ್ರಕ್ರಿಯೆಯನ್ನು ಹೈಕೋರ್ಟ್ ರದ್ದುಪಡಿಸಿದೆ. ಹಾಗಾಗಿ ಆ ಅಧಿಕಾರಿಗಳು ದೊಡ್ಡ ಕಳಂಕದಿಂದ ಮುಕ್ತರಾಗಿದ್ದಾರೆ.
ಪ್ರಕರಣ ಸಂಬಂಧ ಪೂರ್ವಾನುಮತಿ ಪಡೆಯದೆ ತಮ್ಮ ವಿರುದ್ಧ ಕಾಗ್ನಿಜೆನ್ಸ್ ತೆಗೆದುಕೊಂಡಿದ್ದ ಲೋಕಾಯುಕ್ತ ನ್ಯಾಯಾಲಯದ ಕ್ರಮ ಪ್ರಶ್ನಿಸಿ ಎಂ. ಕೆ. ತಿಮ್ಮಯ್ಯ, ಸೀಮಂತ್ ಕುಮಾರ್ ಸಿಂಗ್ ಸೇರಿ 7 ಮಂದಿ ಅಧಿಕಾರಿಗಳು ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೆ, ವಿಶೇಷ ನ್ಯಾಯಾಲಯ ಕಾಗ್ನಿಜೆನ್ಸ್ ತೆಗೆದುಕೊಂಡಿರುವ ಕ್ರಮವನ್ನು ಮಾತ್ರ ರದ್ದುಪಡಿಸಿದೆ. ಆದರೆ, ದೂರನ್ನು ರದ್ದುಪಡಿಸಲು ನಿರಾಕರಿಸಿದೆ.
ಪೂರ್ವಾನುಮತಿ ಅಗತ್ಯ: ಅಲ್ಲದೆ, ಅರ್ಜಿದಾರರ ವಿರುದ್ಧದ ಆರೋಪಗಳು ಅಧಿಕೃತ ಕರ್ತವ್ಯ ವ್ಯಾಪ್ತಿಗೆ ಒಳಪಡುವುದಿಲ್ಲ. ಆದ ಕಾರಣ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಪಡೆಯಬೇಕಾದ ಅಗತ್ಯವಿಲ್ಲ ಎಂದು ವಿಶೇಷ ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.
ಆದರೆ, ತಪ್ಪಿತಸ್ಥ ಅಧಿಕಾರಿಗಳು ಅಧಿಕೃತವಾಗಿ ಸರ್ಚ್ ವಾರೆಂಟ್ ಪಡೆದು ದೂರುದಾರರ ಮನೆ ಪರಿಶೀಲನೆ ನಡೆಸಿದ್ದಾರೆ. ಈ ಅಂಶ ಅಧಿಕೃತ ಕರ್ತವ್ಯದ ಭಾಗವಾಗಿದೆ. ಆದ್ದರಿಂದ ಅಧಿಕೃತ ಕರ್ತವ್ಯದ ಭಾಗವಾಗಿರುವುದರಿಂದ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಅಗತ್ಯವಿದೆ ಎಂದು ಪೀಠ ಅಭಿಪ್ರಾಯ ಪಟ್ಟಿದೆ.
ಪ್ರಕರಣದ ಹಿನ್ನೆಲೆ: ನಿವೇಶನಗಳ ಹಂಚಿಕೆಯಲ್ಲಿ ಅಕ್ರಮಗಳ ನಡೆದಿರುವುದಕ್ಕೆ ಸಂಬಂಧಿಸಿದಂತೆ ಅಪರಿಚಿತ ಅಧಿಕಾರಿಗಳು, ದೂರುದಾರ ಆರ್‌ಟಿ ನಗರದ ಮೋಹನ್ ಕುಮಾರ್ ಸೇರಿದಂತೆ ವಿವಿಧ ಖಾಸಗಿ ವ್ಯಕ್ತಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳಕ್ಕೆ 2021ರ ನವೆಂಬರ್ ತಿಂಗಳಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ದೂರು ನೀಡಿತ್ತು.
ಈ ಸಂಬಂಧ ಬಿಡಿಎ ಮೇಲೆ ದಾಳಿ ನಡೆಸಿದ್ದ ಎಸಿಬಿ ಅಧಿಕಾರಿಗಳು (ಸೀಮಂತ್ ಕುಮಾರ್ ತಂಡ) ಪರಿಶೀಲನೆ ನಡೆಸಿ ದೂರುದಾರರ ಹೆಸರು ಸೇರಿದಂತೆ ಇತರರ ಹೆಸರಿದ್ದ ದಿನಚರಿ ಪುಸ್ತಕವನ್ನು ವಶಪಡಿಸಿಕೊಂಡಿದ್ದರು.
ಪ್ರಕರಣ ರದ್ದುಗೊಳಿಸಿದ್ದ ಹೈಕೋರ್ಟ್: ತನಿಖೆ ಮುಂದುವರೆಸಿದ್ದ ಎಸಿಬಿ ಅಧಿಕಾರಿಗಳು ನ್ಯಾಯಾಲಯದಿಂದ ಅನುಮತಿ ಪಡೆದು ಮೋಹನ್ ಕುಮಾರ್ ಮನೆ ಶೋಧ ನಡೆಸಿ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಆದರೆ, ಅವರ ವಿರುದ್ಧ ಯಾವುದೇ ದೋಷಾರೋಪ ಮಾಡುವಂತಹ ವಸ್ತುಗಳು ಲಭ್ಯವಾಗಿರಲಿಲ್ಲ.
ಈ ಹಿನ್ನೆಲೆಯಲ್ಲಿ ತಮ್ಮ ವಿರುದ್ಧದ ಯಾವುದೇ ದೋಷಾರೋಪಣೆ ಇಲ್ಲದ ಪರಿಣಾಮ ಪ್ರಕರಣ ರದ್ದುಗೊಳಿಸಬೇಕು ಎಂದು ಮೋಹನ್ ಕುಮಾರ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಅರ್ಜಿದಾರರ ವಿರುದ್ಧ ಪ್ರಕರಣವನ್ನು ರದ್ದುಗೊಳಿಸಿತ್ತು. ಅಲ್ಲದೆ, ಮೋಹನ್ ಕುಮಾರ್ ವಿರುದ್ಧ ಸಾಕ್ಷ್ಯಾಧಾರಗಳು ಲಭ್ಯವಾದಲ್ಲಿ ವಿಚಾರಣೆ ಪುನರಾರಂಭಿಸಬಹುದು ಎಂದು ತಿಳಿಸಿತ್ತು.
ಈ ನಡುವೆ ಅರ್ಜಿದಾರ ಅಧಿಕಾರಿಗಳು ಭಷ್ಟಾಚಾರ ನಿಗ್ರಹ ದಳ (ಎಸಿಬಿ)ದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ. ಅವರ ವಿರುದ್ಧ ತನಿಖೆಗೆ ಅನುಮತಿ ನೀಡಬೇಕು ಎಂದು ಕೋರಿ ಮೋಹನ್ ಸಕ್ಷಮ ಪ್ರಾಧಿಕಾರಕ್ಕೆ ಮನವಿ ಮಾಡಿದ್ದರು. ಅನುಮತಿ ಲಭ್ಯವಾಗದಿದ್ದರೂ ಅರ್ಜಿದಾರ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸಿದ್ದರು.
ಈ ದೂರಿನ ವಿಚಾರಣೆ ನಡೆಸಿದ್ದ ವಿಶೇಷ ನ್ಯಾಯಾಲಯ ಅರ್ಜಿದಾರ ಅಧಿಕಾರಿಗಳ ವಿರುದ್ಧ ಅಧಿಕಾರ ದುರ್ಬಳಕೆ, ಕ್ರಿಮಿನಲ್ ದುರ್ನಡತೆ, ಸುಲಿಗೆ ಯತ್ನ, ಮತ್ತು ನಕಲಿ ದಾಖಲೆಗಳ ಸೃಷ್ಟಿ ಆರೋಪದಲ್ಲಿ ಕಾಗ್ನಿಜೆನ್ಸ್ ತೆಗೆದುಕೊಂಡಿತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.












Click it and Unblock the Notifications