ಯಡಿಯೂರಪ್ಪ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಲಿದೆ ಸರ್ಕಾರ
ಬೆಂಗಳೂರು, ಏಪ್ರಿಲ್ 13 : ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಸರ್ಕಾರ ಸೇಡಿನ ರಾಜಕಾರಣ ಆರಂಭಿಸಿದೆಯೇ?. ಯಡಿಯೂರಪ್ಪ ಅವರ ವಿರುದ್ಧ 15 ಅಕ್ರಮ ಡಿನೋಟಿಫಿಕೇಷನ್ ಪ್ರಕರಣಗಳನ್ನು ಹೈಕೋರ್ಟ್ ರದ್ದುಗೊಳಿಸಿತ್ತು. ಈ ತೀರ್ಪನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲು ಸರ್ಕಾರ ಸಿದ್ಧವಾಗುತ್ತಿದೆ.
ಯಡಿಯೂರಪ್ಪ ಅವರ ವಿರುದ್ಧದ 15 ಪ್ರಕರಣಗಳನ್ನು ರದ್ದುಗೊಳಿಸಿರುವ ಕರ್ನಾಟಕ ಹೈಕೋರ್ಟ್ ತೀರ್ಪಿನ ಕುರಿತು ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಯಡಿಯೂರಪ್ಪ ರಾಜ್ಯಾಧ್ಯಕ್ಷರಾಗುತ್ತಿದ್ದಾಂತೆಯೇ ಸರ್ಕಾರ ಈ ನಿರ್ಧಾರ ಕೈಗೊಂಡಿರುವುದು ಸೇಡಿನ ರಾಜಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. [FIR ರದ್ದಾದರೂ ಯಡಿಯೂರಪ್ಪ ಕಾನೂನು ಹೋರಾಟ ಮುಗಿದಿಲ್ಲ]
2016ರ ಜನವರಿ 5ರಂದು ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ರತ್ನಕಲಾ ಅವರ ಏಕಸದಸ್ಯ ಪೀಠ, 2015ರ ಜೂನ್ 19 ರಿಂದ 27ರ ತನಕ ಲೋಕಾಯುಕ್ತ ಪೊಲೀಸರು ಅಕ್ರಮ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಯಡಿಯೂರಪ್ಪ ಅವರ ವಿರುದ್ದ ದಾಖಲಿಸಿದ್ದ 15 ಎಫ್ಐಆರ್‌ಗಳನ್ನು ರದ್ದುಪಡಿಸಿದ್ದರು. [ಯಡಿಯೂರಪ್ಪ, ಡಿಕೆಶಿಗೆ ಬಿಗ್ ರಿಲೀಫ್ ನೀಡಿದ ಹೈಕೋರ್ಟ್]
ಮಹಾಲೆಕ್ಕಪಾಲ ವರದಿ (ಸಿಎಜಿ) ಅನ್ವಯ ಸಾಮಾಜಿಕ ಕಾರ್ಯಕರ್ತ ಜಯಕುಮಾರ್ ಹಿರೇಮಠ ಅವರು ಸಲ್ಲಿಸಿದ್ದ ದೂರಿನ ಅನ್ವಯ ದಾಖಲಾಗಿದ್ದ ಪ್ರಕರಣ ರದ್ದುಗೊಳಿಸಿದ್ದ ಕೋರ್ಟ್, ಸಿಎಜಿ ವರದಿ ಹೊರತುಪಡಿಸಿ ಇತರೆ ಅಂಶಗಳ ಆಧಾರದಲ್ಲಿ ಯಡಿಯೂರಪ್ಪ ಅವರ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳುವ ಅವಕಾಶಗಳನ್ನು ಮಕ್ತವಾಗಿತ್ತು. ಇದನ್ನು ಬಳಸಿಕೊಂಡು ಈಗ ಮೇಲ್ಮನವಿ ಸಲ್ಲಿಸಲಾಗುತ್ತಿದೆ......

ಹೈಕೋರ್ಟ್ ಆದೇಶವೇನಿತ್ತು?
ಪ್ರಕರಣಗಳನ್ನು ರದ್ದುಗೊಳಿಸಿದ್ದ ಹೈಕೋರ್ಟ್, ಮಹಾಲೆಕ್ಕಪಾಲ ವರದಿ (ಸಿಎಜಿ) ವರದಿ ಹೊರತುಪಡಿಸಿ ಇತರೆ ಅಂಶಗಳ ಆಧಾರದಲ್ಲಿ ಯಡಿಯೂರಪ್ಪ ಅವರ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳುವ ಅವಕಾಶವನ್ನು ಮುಕ್ತವಾಗಿಟ್ಟಿತ್ತು. ಅಲ್ಲದೇ ಕರ್ನಾಟಕ ಸರ್ಕಾರ ಅಥವ ಲೋಕಾಯುಕ್ತ ಎಫ್‌ಐಆರ್ ರದ್ದುಗೊಳಿಸಿರುವ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿತ್ತು.

ಸುಪ್ರೀಂಕೋರ್ಟ್‌ಗೆ ಮನವಿ
ಸದ್ಯ, ಯಡಿಯೂರಪ್ಪ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗುತ್ತಿದ್ದಂತೆ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪನ್ನು ಪ್ರಶ್ನಿಸಿ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಲಿದೆ.

'ನನ್ನನ್ನು ಕಟ್ಟಿ ಹಾಕಲು ಸಾಧ್ಯವಿಲ್ಲ'
ಸರ್ಕಾರದ ಚಿಂತನೆ ಕುರಿತು ಪ್ರತಿಕ್ರಿಯೆ ನೀಡಿರುವ ಯಡಿಯೂರಪ್ಪ ಅವರು, 'ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿ ನನ್ನನ್ನು ಕಟ್ಟಿ ಹಾಕಲು ಸಾಧ್ಯವಿಲ್ಲ. ಇದು ಸೇಡಿನ ರಾಜಕಾರಣ ಎನ್ನುವುದು ರಾಜ್ಯದ ಜನರಿಗೆ ಗೊತ್ತಿದೆ. ಸರ್ಕಾರದ ಸವಾಲನ್ನು ನಾನು ಸ್ವೀಕರಿಸುತ್ತೇನೆ' ಎಂದು ಬುಧವಾರ ಹೇಳಿದರು.

ಯಾವ-ಯಾವ ಪ್ರಕರಣಗಳು
ಯಡಿಯೂರಪ್ಪ ಅವರ ವಿರುದ್ಧದ 15 ಪ್ರಕರಣಗಳು
* ಜೆ.ಬಿ.ಕಾವಲ್ ಗ್ರಾಮದ 270 ಎಕರೆ ಡಿನೋಟಿಫಿಕೇಷನ್
* ಕೊತ್ತನೂರು ಗ್ರಾಮದ 10 ಗುಂಟೆ ಡಿನೋಟಿಫಿಕೇಷನ್
* ಕೊತ್ತನೂರು ಗ್ರಾಮದ 3.18 ಎಕರೆ ಡಿನೋಟಿಫಿಕೇಷನ್
* ಚಳ್ಳಕೆರೆಯ 2.16 ಎಕರೆ ಡಿನೋಟಿಫಿಕೇಷನ್
* ಥಣಿಸಂದ್ರದ2.21 ಎಕರೆ ಡಿನೋಟಿಫಿಕೇಷನ್
*ಗುಡ್ಡದಹಳ್ಳಿಯ 1.20 ಎಕರೆ ಡಿನೋಟಿಫಿಕೇಷನ್

ಯಾವ ಪ್ರಕರಣಗಳು
* ಹಲಗೆವಡೇರಹಳ್ಳಿ 6.18 ಗುಂಟೆ ಡಿನೋಟಿಫಿಕೇಷನ್
* ಬಿಳೇಕಹಳ್ಳಿ 1.17ಎಕರೆ ಡಿನೋಟಿಫಿಕೇಷನ್
* ಹುಳಿಮಾವು 2.10 ಎಕರೆ ಡಿನೋಟಿಫಿಕೇಷನ್
* ಬನಶಂಕರಿ 5ನೇ ಹಂತ 2.36 ಎಕರೆ ಡಿನೋಟಿಫಿಕೇಷನ್
* ರಾಚೇನಹಳ್ಳಿ 35.12 ಎಕರೆ ಡಿನೋಟಿಫಿಕೇಷನ್
* ಕೊತ್ತನೂರು ಗ್ರಾಮದ 31 ಗುಂಟೆ ಡಿನೋಟಿಫಿಕೇಷನ್
* ಲೊಟ್ಟೆಗೊಲ್ಲನಹಳ್ಳಿ 3.33 ಎಕರೆ ಡಿನೋಟಿಫಿಕೇಷನ್
* ವಲಗೇರಹಳ್ಳಿ 5.10 ಎಕರೆ ಡಿನೋಟಿಫಿಕೇಷನ್
* ನಾಗರಭಾವಿ 11.9 ಎಕರೆ ಡಿನೋಟಿಫಿಕೇಷನ್












Click it and Unblock the Notifications