ಪ್ರಿಯಕರನ ಜತೆ ಓಡಿ ಹೋಗಿದ್ದ ಅಪ್ರಾಪ್ತೆ ಪೋಷಕರ ಜತೆ ಹೋಗಲು ನಿರಾಕರಣೆ
ಬೆಂಗಳೂರು, ಮೇ 08: ಪ್ರಿಯಕರನ ಜತೆ ಮನೆ ಬಿಟ್ಟು ಪರಾರಿಯಾಗಿದ್ದ ಅಪ್ರಾಪ್ತೆ ಪೋಷಕರ ಜತೆ ಮರಳಲು ನಿರಾಕರಿಸಿದ ಘಟನೆ ಕರ್ನಾಟಕ ಹೈಕೋರ್ಟ್‌ನಲ್ಲಿ ನಡೆದಿದೆ. ಹಾಗಾಗಿ ನ್ಯಾಯಾಲಯ ಆಕೆಯನ್ನು ಸರ್ಕಾರಿ ವಸತಿ ನಿಲಯದಲ್ಲಿ ಇರಿಸುವಂತೆ ಪ್ರತಿವಾದಿಗಳಿಗೆ ನಿರ್ದೇಶಿಸಿ ಅರ್ಜಿ ಇತ್ಯರ್ಥಪಡಿಸಿದೆ.
ಅಲ್ಲದೆ, ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಿ ಆಕೆಯನ್ನು ಸರ್ಕಾರದ ವಸತಿ ನಿಲಯ (ಸ್ಟೇಟ್ ಹೋಮ್)ನಲ್ಲಿ ಇರಿಸಲಾಗುತ್ತದೆ. ಪೋಷಕರು ಯಾವಾಗ ಬೇಕಾದರೂ ಭೇಟಿ ನೀಡಿ ಆಕೆಯ ಕುಶಲೋಪರಿ ವಿಚಾರಿಸಬಹುದು ಎಂದು ಆದೇಶಿಸಿದೆ.

ನಾಪತ್ತೆಯಾಗಿರುವ ತನ್ನ ಅಪ್ರಾಪ್ತ ಮಗಳನ್ನು ಪತ್ತೆಹಚ್ಚಿ ಹಾಗೂ ಆಕೆಯ ಕಸ್ಟಡಿಯನ್ನು ತನಗೆ ಹಸ್ತಾಂತರಿಸುವಂತೆ ಕೋರಿ ರಾಮನಗರ ಜಿಲ್ಲೆಯ ಕಲ್ಲೂರಿನ ಸುರೇಶ್ ಎಂಬುವವರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಸ್. ಸುನೀಲ್ ದತ್ತ್ ಯಾದವ್ ಹಾಗೂ ನ್ಯಾಯಮೂರ್ತಿ ವೆಂಕಟೇಶ್ ನಾಯ್ಕ ಟಿ. ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ನ್ಯಾಯಪೀಠವು, ಯುವತಿಯನ್ನು ಉದ್ದೇಶಿಸಿ ತಂದೆ-ತಾಯಿಯ ಜತೆಗೆ ಮರಳಿ ಮನೆಗೆ ತೆರಳಬಹುದೇ? ಎಂದು ಪ್ರಶ್ನಿಸಿತು. ಇದಕ್ಕೆ ಯುವತಿ ಇಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾಳೆ. ಈ ಅಂಶ ದಾಖಲಿಸಿಕೊಂಡ ನ್ಯಾಯಪೀಠ ಪೋಷಕರಿಗೆ ಮಗಳು ನಿಮ್ಮ ಜತೆ ಬರಲು ನಿರಾಕರಿಸುತ್ತಿದ್ದಾಳೆ ಎಂದು ಹೇಳಿದೆ. ಆದರೆ ಆಕೆಗೆ ತಮ್ಮ ಜತೆ ಬರುವಂತೆ ಯಾವುದೇ ರೀತಿ ಒತ್ತಡ ನೀಡಬಾರದು ಎಂದು ಹೇಳಿದೆ.
ಜತೆಗೆ, ಯುವತಿ ದ್ವೀತಿಯ ಪಿಯುಸಿವರೆಗೆ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದು ಮುಂದಿನ ದಿನದಲ್ಲಿ ಆಕೆಗೆ ಉನ್ನತ ಶಿಕ್ಷಣ ಪಡೆದುಕೊಳ್ಳಬೇಕು ಎಂಬ ಹಂಬಲವಿದ್ದರೆ ಅವಕಾಶ ಕಲ್ಪಿಸಬೇಕು. ನುರಿತ ಮನೋವೈದ್ಯರಿಂದ ಆಕೆಯನ್ನು ಸಮಾಲೋಚನೆಗೆ ಒಳಪಡಿಸಬೇಕು ಎಂದು ಸರ್ಕಾರದ ಪರ ವಕೀಲರಿಗೆ ನಿರ್ದೇಶಿಸಿ ಅರ್ಜಿ ಇತ್ಯರ್ಥಪಡಿಸಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: ರಾಮನಗರ ಜಿಲ್ಲೆಯ ಕಲ್ಲೂರು ಹಳ್ಳಿಯ ಯುವಕ ಹಾಗೂ ಅದೇ ಊರಿನ ಹದಿಹರೆಯದ ಬಾಲಕಿ ಪರಸ್ಪರ ಪ್ರೀತಿಸಿ ಏಪ್ರಿಲ್ 15ರಂದು ಮನೆ ಬಿಟ್ಟು ಹೋಗುತ್ತಾರೆ. ಈ ಸಂಬಂಧ ಆಕೆಯ ತಂದೆ ಸತೀಶ್ ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ನಾಪತ್ತೆಯಾಗಿರುವ ತನ್ನ ಅಪ್ರಾಪ್ತ ಮಗಳನ್ನು ಪತ್ತೆಹಚ್ಚಿ ಹಾಗೂ ಆಕೆಯ ಕಸ್ಟಡಿಯನ್ನು ತನಗೆ ಹಸ್ತಾಂತರಿಸುವಂತೆ ಮನವಿ ಮಾಡುತ್ತಾರೆ. ತನಿಖಾ ಹಂತದಲ್ಲಿ ಆಕೆಯನ್ನು ಪತ್ತೆ ಹಚ್ಚಲಾಗಿದ್ದು, ಯುವತಿಯೂ ತಾನು ಸ್ವ-ಇಚ್ಛೆಯಿಂದ ಯುವಕನ ಜತೆಗೆ ಹೋಗಿರುವುದಾಗಿ ಹೇಳಿಕೆ ನೀಡುತ್ತಾಳೆ. ಆದರೂ ಆಕೆ ಅಪ್ರಾಪ್ತಳೆನ್ನುವ ಕಾರಣಕ್ಕೆ ಯುವಕನಿಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿತ್ತು.












Click it and Unblock the Notifications