ನ್ಯಾಯಮೂರ್ತಿ ಮೇಲೆ ರೇಗಾಟ; ವಕೀಲನ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್
ಬೆಂಗಳೂರು, ಫೆಬ್ರವರಿ 14: ತಮ್ಮ ಕಕ್ಷಿದಾರರ ಅರ್ಜಿ ತಿರಸ್ಕರಿಸಿದ್ದಕ್ಕೆ ಸಿಟ್ಟಿಗೆದ್ದ ವಕೀಲರೊಬ್ಬರು ನ್ಯಾಯಮೂರ್ತಿ ವಿರುದ್ಧ ತಿರುಗಿಬಿದ್ದು ಕಡತಗಳನ್ನು ಎಸೆದಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.
ನ್ಯಾಯಮೂರ್ತಿ ಕೆ. ಎಸ್. ಹೇಮಲೇಖಾ ಅವರಿದ್ದ ಏಕಸದಸ್ಯಪೀಠ ಆಕ್ಷೇಪಾರ್ಹದ ಮಾತುಗಳನ್ನು ಆಡಿದ್ದ ವಕೀಲ ಎಂ. ವೀರಭದ್ರಯ್ಯ ವಿರುದ್ಧ ನ್ಯಾಯಾಂಗ ನಿಂದನೆಗೆ ರಿಜಿಸ್ಟ್ರಾರ್ ಜನರಲ್‌ಗೆ ಆದೇಶಿಸಿದ್ದಾರೆ.

ಆರೋಪಿ ದುರ್ನಡತೆ, ದುರಹಂಕಾರ ತೋರಿದ್ದಾರೆ. ಏಕವಚನ ಬಳಸಿದ್ದಾರೆ. ವಕೀಲರ ನಡತೆ ಮತ್ತು ಕೃತ್ಯವು ನ್ಯಾಯಾಲಯದ ಘನತೆಗೆ ಚ್ಯುತಿ ಉಂಟು ಮಾಡಿದ್ದು, ಇದರಿಂದ ನ್ಯಾಯಾಂಗ ಪ್ರಕ್ರಿಯೆ ಅಥವಾ ನ್ಯಾಯದಾನಕ್ಕೆ ಅಡ್ಡಿ ಉಂಟು ಮಾಡಿದೆ. ವಕೀಲರ ಕೃತ್ಯವು ನ್ಯಾಯಾಲಯದ ಸಾಮಾನ್ಯ ಪ್ರಕ್ರಿಯೆ ಮತ್ತು ಕಾರ್ಯವಿಧಾನದಲ್ಲಿ ಹಸ್ತಕ್ಷೇಪ ಮಾಡುವುದರ ಜೊತೆಗೆ ನ್ಯಾಯಾಲಯದ ಘನತೆಗೆ ಹಾನಿ ಮಾಡಿದೆ ಎಂದು ಆದೇಶದಲ್ಲಿ ದಾಖಲಿಸಲಾಗಿದೆ.
ನಿರ್ದೇಶನ ನೀಡುವ ರೀತಿಯಲ್ಲಿ ಪೀಠದ ಬಗ್ಗೆ ಏಕವಚನ ಬಳಕೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪೀಠವು ಮಾತಿನ ಬಗ್ಗೆ ಎಚ್ಚರವಹಿಸುವಂತೆ ಎಚ್ಚರಿಸಿದೆ. ಇದಕ್ಕೆ ಪರಿಣಾಮದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ವೀರಭದ್ರಯ್ಯ ಹೇಳಿದ್ದು, ಕಡತ ಎಸೆದು ಕೋರ್ಟ್‌ನಿಂದ ಹೊರ ಹೋಗಿದ್ದಾರೆ.
ಪ್ರಕರಣದ ಅರ್ಹತೆಗೆ ಸಂಬಂಧಿಸಿದಂತೆ ವಾದಿಸುವಂತೆ ಹಲವು ಬಾರಿ ಪೀಠ ಸೂಚಿಸಿದರೂ ಅದಕ್ಕೆ ನಿರಾಕರಿಸಿ ಏರುಧ್ವನಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಆದೇಶ ಮಾಡುವಾಗ ಮಧ್ಯಪ್ರವೇಶಿಸಿ, ನಿರಂತರವಾಗಿ ನ್ಯಾಯಾಲಯದ ಪ್ರಕ್ರಿಯೆ ಅಡ್ಡಿಪಡಿಸಿದ್ದಾರೆ ಎಂದು ಪೀಠವು ಆದೇಶದಲ್ಲಿ ದಾಖಲಿಸಿದೆ.
ಪ್ರಕರಣದ ಹಿನ್ನೆಲೆ: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಪರವಾಗಿ ಸಲ್ಲಿಕೆಯಾಗಿದ್ದ ಕೇವಿಯಟ್ ಅರ್ಜಿಗೆ ಆಕ್ಷೇಪಿಸಿ ಅಣ್ಣಾದೊರೈ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿತ್ತು. ಅರ್ಜಿದಾರ ಯಾವುದೇ ಅರ್ಜಿ ದಾಖಲಿಸಿದರೂ ತಮ್ಮ ಗಮನಕ್ಕೆ ತರಬೇಕು ಎಂದು ಬಿಇಎಲ್ ಪರವಾಗಿ ಅದರ ವ್ಯವಸ್ಥಾಪಕ ನಿರ್ದೇಶಕರು ಕೇವಿಯಟ್ ಅರ್ಜಿ ಸಲ್ಲಿಸಿದ್ದರು.
ವ್ಯವಸ್ಥಾಪಕ ನಿರ್ದೇಶಕರು ಅಥವಾ ಕೇವಿಯಟರ್ಗೆ ಬಿಇಎಲ್ ಪರವಾಗಿ ಕೇವಿಯಟ್ ಅರ್ಜಿ ಸಲ್ಲಿಸುವ ಅಧಿಕಾರವಿದೆಯೇ ಎಂದು ಅರ್ಜಿದಾರರು ಪ್ರಶ್ನಿಸಿದ್ದರು. ಈ ಅರ್ಜಿಯನ್ನು ನ್ಯಾಯಾಲಯವು 10 ಸಾವಿರ ರೂಪಾಯಿಯನ್ನು ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ನಾಲ್ಕು ವಾರದಲ್ಲಿ ಪಾವತಿಸುವಂತೆ ಸೂಚಿಸಿ ಮಧ್ಯಂತರ ಅರ್ಜಿ ವಜಾ ಮಾಡಿತ್ತು.
ಅಲ್ಲದೇ, ಅರ್ಜಿಯ ಅರ್ಹತೆಯ ಕುರಿತು ವಾದಿಸುವಂತೆ ಅರ್ಜಿದಾರರಿಗೆ ನ್ಯಾಯಾಲಯ ಸೂಚಿಸಿತ್ತು. ಇದರಿಂದ ಕುಪಿತಗೊಂಡ ವಕೀಲ ಏರುಧ್ವನಿಯಲ್ಲಿ ನ್ಯಾಯಾಲಯದ ಕುರಿತು ಆಕ್ಷೇಪಾರ್ಹವಾಗಿ ಮಾತನಾಡಿದ್ದಾರೆ.
ಅರ್ಜಿದಾರ ವಕೀಲರು ಮೂಲ ಪ್ರಕರಣವನ್ನು ವಿಳಂಬಿಸುವ ಉದ್ದೇಶದಿಂದ ಹಲವು ಅರ್ಜಿಗಳನ್ನು ಸಲ್ಲಿಸಿದ್ದಾರೆ ಎಂಬುದು ಆದೇಶವನ್ನು ತಿರುವಿ ಹಾಕಿದರೆ ತಿಳಿಯುತ್ತದೆ ಎಂದು ಆದೇಶದಲ್ಲಿ ದಾಖಲಿಸಿದೆ. ಈ ಹಿನ್ನೆಲೆಯಲ್ಲಿ ವಕೀಲ ವೀರಭದ್ರಯ್ಯ ವಿರುದ್ಧ ನ್ಯಾಯಾಂಗ ನಿಂದನೆ ಕಾಯಿದೆ ಸೆಕ್ಷನ್ 2(ಸಿ) ಅಡಿ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಕ್ರಮಕೈಗೊಳ್ಳುವಂತೆ ನ್ಯಾಯಾಂಗ ರಿಜಿಸ್ಟ್ರಾರ್ ಜನರಲ್‌ಗೆ ಪೀಠ ಆದೇಶಿಸಿದೆ.












Click it and Unblock the Notifications