ಲೋಕಾಯುಕ್ತದಲ್ಲಿ ಕನ್ನಡ ಕಡ್ಡಾಯ: ಅರ್ಜಿ ಪುರಸ್ಕರಿಸದ ಹೈಕೋರ್ಟ್
ಬೆಂಗಳೂರು, ಜೂನ್ 29: ಲೋಕಾಯುಕ್ತ ಸಂಸ್ಥೆಯಲ್ಲಿ ದಿನನಿತ್ಯದ ಎಲ್ಲ ಪ್ರಕ್ರಿಯೆಗಳನ್ನು ಕನ್ನಡ ಭಾಷೆಯಲ್ಲಿ ನಡೆಸುವಂತೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿದಾರರ ಮನವಿ ಪುರಸ್ಕರಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.
ಸಾಮಾಜಿಕ ಕಾರ್ಯಕರ್ತ ಗುರುನಾಥ್ ವಡ್ಡೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್. ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ. ವಿ. ಅರವಿಂದ್ ಅವರಿದ್ದ ನ್ಯಾಯಪೀಠ, ಅರ್ಜಿದಾರರು ಕೋರಿರುವ ಮನವಿಯನ್ನು ಪುರಸ್ಕರಿಸಲು ತಿರಸ್ಕರಿಸಿದೆ.

ಹೈಕೋರ್ಟ್ ಹೇಳಿದ್ದೇನು?: ಕನ್ನಡ ಭಾಷೆ ಕರ್ನಾಟಕದ ಸ್ಥಳೀಯ ಭಾಷೆಯಾಗಿದ್ದು, ಸರ್ಕಾರದ ಪ್ರಾಧಿಕಾರಗಳು ಮತ್ತು ಅಧಿಕಾರಿಗಳ ಅದನ್ನು ಬಳಸಿ ಪ್ರೋತ್ಸಾಹಿಸಬೇಕಾದ ಅಗತ್ಯವಿದೆ ಎಂದು ಹೇಳಿದೆ.
ಅಲ್ಲದೆ, ರಾಜ್ಯ ಸರ್ಕಾರ ಮತ್ತು ಅದರ ಅಧೀನದ ಪ್ರಾಧಿಕಾರಗಳು ಕನ್ನಡ ಬಳಕೆ ಮಾಡುವ ಸಂಬಂಧ ಸಕಾರಾತ್ಮಕವಾಗಿ ತೆಗೆದುಕೊಳ್ಳಬೇಕು. ಸರ್ಕಾರ ಮತ್ತು ಅಧಿಕಾರಿಗಳು ಸಾಧ್ಯವಾದಷ್ಟು ಸ್ಥಳೀಯ ಕನ್ನಡ ಭಾಷೆ ಬಳಸಬೇಕು. ಆಗ ಮಾತ್ರ ಕರ್ನಾಟಕದ ಭಾಷಾಸಂಸ್ಕೃತಿ ಉಳಿಯುತ್ತದೆ ಎಂದು ನ್ಯಾಯಪೀಠ ತಿಳಿಸಿತು.
ಅಲ್ಲದೆ, ಸರ್ಕಾರದಲ್ಲಿ ಏಕ ಭಾಷೆ ಬಳಕೆ ಮಾಡಬೇಕೆಂಬ ಸಾರ್ವತ್ರಿಕವಾದ ಸೂತ್ರವಿಲ್ಲ. ಹೀಗಾಗಿ ಎಲ್ಲೆಲ್ಲಿ ಕನ್ನಡ ಭಾಷೆಯಿರುವಲ್ಲಿ ಆಂಗ್ಲಭಾಷೆ ಬಳಕೆ ಅಗತ್ಯವಿದೆಯೋ ಅದಕ್ಕೆ ಯಾವುದೇ ನಿರ್ಬಂಧವಿರುವುದಿಲ್ಲ ಎಂದು ಪೀಠ ಇದೇ ವೇಳೆ ಸ್ಪಷ್ಟ ಪಡಿಸಿದೆ.
ಮೂಲಭೂತವಾಗಿ ಸರ್ಕಾರಿ ವ್ಯವಹಾರಗಳಲ್ಲಿ ಯಾವ ಭಾಷೆ ಬಳಸಬೇಕೆಂಬ ನೀತಿ ಮತ್ತು ಅನುಕೂಲತೆಯ ವಿಷಯವಾಗಿದೆ. ಕನ್ನಡ ಭಾಷೆ ಸ್ಥಳೀಯ ಭಾಷೆಯಾಗಿದ್ದು, ಅದಕ್ಕೆ ಪ್ರಾಮುಖ್ಯತೆ ನೀಡಿ ಪ್ರೋತ್ಸಾಹಿಸಬೇಕಾಗಿದೆ. ಆದರೆ, ಈ ಅಂಶಗಳು ಸಾರ್ವಜನಿ ಹಿತಾಸಕ್ತಿ ಅರ್ಜಿ ಪುರಸ್ಕರಿಸಲು ಅರ್ಹವಾಗುವುದಿಲ್ಲ ಎಂದು ಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿತು.
"ನನಗೆ ಕನ್ನಡ ಬರುವುದಿಲ್ಲ. ಅರ್ಜಿದಾರರ ಮನವಿ ಪುರಸ್ಕರಿಸಿದರೆ ಮುಖ್ಯ ನ್ಯಾಯಮೂರ್ತಿಗಳ ನ್ಯಾಯಪೀಠ, ಹೇಗೆ ಕಾರ್ಯನಿರ್ವಹಿಸಲು ಸಾಧ್ಯ?. ಕೋರ್ಟ್ ಕಾರ್ಯನಿರ್ವಹಿಸುವುದು ಬೇಡವೇ?" ಎಂದು ಸಿಜೆ ಪ್ರಶ್ನಿಸಿದರು. ಈ ವೇಳೆ ಸರ್ಕಾರಿ ವಕೀಲರು ಪ್ರತಿಕ್ರಿಯಿಸಿ, ಸರ್ಕಾರದ ವ್ಯವಹಾರಗಳಲ್ಲಿ ಶೇ. 90ರಷ್ಟು ಕನ್ನಡ ಬಳಕೆ ಮಾಡುತ್ತಿದ್ದಾರೆ ಎಂದು ಪೀಠಕ್ಕೆ ವಿವರಿಸಿದರು.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ನಾವು ಆಂಗ್ಲ ಭಾಷೆಯ ವಿರೋಧಿಗಳಲ್ಲ. ಆದರೆ, ಸಂಸ್ಥೆಯ ಎಲ್ಲ ಕಾರ್ಯಚಟುವಟಿಕೆಗಳು ವಿಚಾರಗಳು ಗ್ರಾಮೀಣ ಭಾಗದ ಜನ ತಿಳಿದುಕೊಳ್ಳುವಂತಾಗಬೇಕಾಗಿದೆ. ಲೋಕಾಯುಕ್ತ ಸಂಸ್ಥೆಯ ಆದೇಶಗಳು ರಾಜ್ಯದ ಎಲ್ಲ ಜನರಿಗೂ ಅರ್ಥವಾಗುವಂತಿರಬೇಕು. ಹೀಗಾಗಿ ಎಲ್ಲ ಪ್ರಕ್ರಿಯೆ ಅಂದರೆ, ಆದೇಶಗಳು, ನೋಟಿಸ್ ಸೇರಿದಂತೆ ಎಲ್ಲ ಪ್ರಕ್ರಿಯೆಯನ್ನು ಕನ್ನಡದಲ್ಲಿರುವಂತೆ ನಿರ್ದೇಶನ ನೀಡಬೇಕು ಎಂದು ಕೋರಿದರು.












Click it and Unblock the Notifications