ಪೋಕ್ಸೋ ಪ್ರಕರಣ; ಸಂತ್ರಸ್ತರ ಆರೋಗ್ಯ ರಕ್ಷಣೆಗೆ ಹೈಕೋರ್ಟ್ ಮಾರ್ಗಸೂಚಿ
ಬೆಂಗಳೂರು, ಡಿಸೆಂಬರ್ 16: ಅತ್ಯಾಚಾರಕ್ಕೆ ಒಳಗಾದ ಪೋಕ್ಸೋ ಪ್ರಕರಣದ ಸಂತ್ರಸ್ತ ಬಾಲಕಿಯರ ಮಾನಸಿಕ ಹಾಗೂ ದೈಹಿಕ ಆರೋಗ್ಯ ರಕ್ಷಣೆ ದೃಷ್ಟಿಯಿಂದ ಯಾವ್ಯಾವ ಕ್ರಮಗಳನ್ನು ಅನುಸರಿಸಬೇಕು ಎಂಬ ಬಗ್ಗೆ ಕರ್ನಾಟಕ ಹೈಕೋರ್ಟ್ ಮಾರ್ಗಸೂಚಿ ಹೊರಡಿಸಿದೆ.
ಅಲ್ಲದೇ, ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತ ಬಾಲಕಿ ಗರ್ಭ ಧರಿಸಿದ ಸಂದರ್ಭದಲ್ಲಿ ಗರ್ಭ ಮುಂದುವರಿಕೆಗೆ ಅಥವಾ ಗರ್ಭಪಾತ ಮಾಡಿಸುವ ವಿಚಾರದಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ಮಾರ್ಗಸೂಚಿ ರೂಪಿಸಲು ತಜ್ಞರ ಸಮಿತಿ ನೇಮಕ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.

ಪೋಕ್ಸೋ ಪ್ರಕರಣದ ಸಂತ್ರಸ್ತೆಯಾದ ನನ್ನ 17 ವರ್ಷದ ಪುತ್ರಿ ಗರ್ಭವನ್ನು ಧರಿಸಿದ್ದು, ಅದನ್ನು ತೆಗೆಯಲು ವೈದ್ಯರಿಗೆ ನಿರ್ದೇಶಿಸುಂತೆ ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ತಕರಾರು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದ ರಾಜ್ ಅವರ ಪೀಠ ಈ ಆದೇಶ ಮಾಡಿದೆ.
ಅಲ್ಲದೆ, ಅರ್ಜಿದಾರರ ಪುತ್ರಿಯ 24 ವಾರಗಳ ಭ್ರೂಣವನ್ನು ತೆಗೆಯುವಂತೆ ನಗರದ ವಾಣಿವಿಲಾಸ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯರಿಗೆ ಸೂಚಿಸಿದೆ.
ನ್ಯಾಯಾಲಯ ಹೊರಸಿರುವ ಮಾರ್ಗಸೂಚಿಗಳು
* ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ ನಂತರ ತನಿಖಾಧಿಕಾರಿಗಳು ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ ನಡೆಸಬೇಕು. ಆ ಮೂಲಕ ಆಕೆಯ ಗಭಿರ್ಣಿಯಾಗಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಇದರಿಂದ ಆಕೆಯ ಗರ್ಭವು ಎಷ್ಟು ತಿಂಗಳಿನದ್ದು ಎಂಬುದು ತಿಳಿಯುತ್ತದೆ. ಆಕೆಯ ಮಾನಸಿಕ ಹಾಗೂ ದೈಹಿಕ ಸ್ಥಿತಿಗತಿ ತಿಳಿಯುತ್ತದೆ. ಆಕೆಯ ವೈದ್ಯಕೀಯ ಗರ್ಭಪಾತಕ್ಕೆ ಒಳಗಾಗಬಹುದೇ ಅಥವಾ ಇಲ್ಲವೇ ಎಂದು ತಿಳಿಯಲಿದೆ.
*ಸಂತ್ರಸ್ಥೆ ಗರ್ಭಿಣಿಯಾಗಿದ್ದಾರೆ ಎಂಬುದು ತಿಳಿದರೆ, ಆ ಕುರಿತು ಪ್ರಕರಣ ತನಿಖಾಧಿಕಾರಿಯು ಮಕ್ಕಳ ಕಲ್ಯಾಣ ಸಮಿತಿ ಅಥವಾ ಜಿಲ್ಲಾ ರಕ್ಷಣಾ ಘಟಕಕ್ಕೆ ವಿಷಯ ತಿಳಿಸಬೇಕು. ಮಕ್ಕಳ ಕಲ್ಯಾಣ ಸಮಿತಿ ಅಥವಾ ಜಿಲ್ಲಾ ರಕ್ಷಣಾ ಘಟಕದ ಸಮಾಲೋಚಕರು ಸಂತ್ರಸ್ತೆ ಮತ್ತು ಆಕೆಯ ಕುಟುಂಬದವರೊಂದಿಗೆ ಸಮಾಲೋಚನೆ ನಡೆಸಬೇಕು.
* ಒಂದು ವೇಳೆ ವೈದ್ಯಕೀಯ ಗರ್ಭಪಾತ ನಡೆಸಿದರೆ, ಭ್ರೂಣದ ಮಾದರಿಯನ್ನು ಡಿಎನ್‌ಎ ವಿಶ್ಲೇಷಣೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಬೇಕು.
*ಪೋಕ್ಸೋ ಪ್ರಕರಣದಲ್ಲಿ ಸಂತ್ರಸ್ತೆ ಮತ್ತು ಆಕೆಯ ಕುಟುಂಬದ ತುರ್ತು ಅಗತ್ಯತೆಯನ್ನು ಪರಿಗಣಿಸಿ ಕಾನೂನು ಸೇವೆಗಳ ಪ್ರಾಧಿಕಾರವು ಪರಿಹಾರ ಬಿಡುಗಡೆ ಮಾಡಬೇಕು.
* ಸಮಾಲೋಚಕರು ಗರ್ಭವನ್ನು ಮುಂದುವರಿಸುವ ಮತ್ತು ಗರ್ಭಪಾತ ಮಾಡಿಸುವ ಕುರಿತಂತೆ ಇರುವ ಕಾನೂನಾನತ್ಮಕ ಅವವಕಾಶಗಳ ಬಗ್ಗೆ ಸಂತ್ರಸ್ತೆ ಮತ್ತವರ ಕುಟುಂಬವರಿಗೆ ಅರಿವು ಮೂಡಿಸಬೇಕು.
*ಸಂತ್ರಸ್ತೆಯ ದೈಹಿಕ ಹಾಗೂ ಮಾನಸಿಕ ಸ್ಥಿತಿಗತಿ ತಿಳಿಯಲು ಕಾಲಕಾಲಕ್ಕೆ ತಪಾಸಣೆ ನಡೆಸಬೇಕು.
* ಸಂತ್ರಸ್ತೆಯು ಗರ್ಭವನ್ನು ಮುಂದುವರಿಸುವ ಅಥವಾ ಗರ್ಭಪಾತ ಮಾಡಿಸುವ ವಿಚಾರದಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ರೂಪಿಸಲು ತಜ್ಞರ ಸಮಿತಿ ರಚಿಸಬೇಕು.












Click it and Unblock the Notifications