ವಿಟಿಯು ಕುಲಪತಿ ನೇಮಕ ಪ್ರಶ್ನಿಸಿದ್ದ ಅರ್ಜಿ ವಜಾ
ಬೆಂಗಳೂರು, ನವೆಂಬರ್ 08; ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ (ವಿಟಿಯು) ಕುಲಪತಿಯನ್ನಾಗಿ ಎಸ್. ವಿದ್ಯಾಶಂಕರ್ ಅವರನ್ನು ನೇಮಕ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್ ವಜಾ ಮಾಡಿದೆ. ಇದರಿಂದಾಗಿ ಕುಲಪತಿ ಕಾರ್ಯನಿರ್ವಹಣೆಗೆ ಇದ್ದ ಅಡ್ಡಿ ನಿವಾರಣೆಯಾಗಿದೆ.
ಮೈಸೂರು ವಿಶ್ವವಿದ್ಯಾಲಯದ ಮಾಜಿ ಹಂಗಾಮಿ ಉಪಕುಲಪತಿ ಹಾಗೂ ನಿವೃತ್ತ ಪ್ರೊ. ಬಿ. ಶಿವರಾಜ್ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ನವೆಂಬರ್ 2ರಂದು ಪೂರ್ಣಗೊಳಿಸಿ ಕೋರ್ಟ್ ಆದೇಶ ಕಾಯ್ದಿರಿಸಿತ್ತು. ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠವು ಮಂಗಳವಾರ ಆದೇಶ ಪ್ರಕಟಿಸಿತು.

'ವಿಟಿಯು ಕುಲಪತಿಯಾಗಿ ಎಸ್. ವಿದ್ಯಾಶಂಕರ್ ಅವರ ನೇಮಕಾತಿಗೆ ಸಂಬಂಧಿಸಿದ ಕ್ರಮಬದ್ಧತೆ ಅಥವಾ ಇಡೀ ಪ್ರಕ್ರಿಯೆಗೆ ಸಂಬಂಧ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ. ಹಾಲಿ ಪ್ರಕರಣಗಳ ಇತ್ಯರ್ಥಕ್ಕೆ ಸಂಬಂಧಿಸಿದಂತೆ ಮಾತ್ರ ಅಭಿಪ್ರಾಯ ವ್ಯಕ್ತಪಡಿಸಲಾಗಿದ್ದು, ಇದು ಪಕ್ಷಕಾರರ ನಡುವಿನ ಇತರೆ ಯಾವುದೇ ಪ್ರಕರಣದ ಮೇಲೆ ಪರಿಣಾಮ ಬೀರುವುದಿಲ್ಲ' ಎಂದು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿದೆ.
ಶೋಧನಾ ಸಮಿತಿಯೇ ಅಕ್ರಮ: 'ವಿಟಿಯು ಕುಲಪತಿ ನೇಮಕಕ್ಕೆ ರಾಜ್ಯ ಸರ್ಕಾರದ ಶೋಧನಾ ಸಮಿತಿ ರಚನೆಯೇ ಅಕ್ರಮವಾಗಿದೆ. ಅದರಲ್ಲಿ ನಿಯಮ ಪಾಲನೆಯಾಗಿಲ್ಲ. ನಿಯಮದಂತೆ ಸಮಿತಿಯಲ್ಲಿ ವಿಶ್ವವಿದ್ಯಾಲಯ ಧನ ಸಹಾಯ ಆಯೋಗದ (ಯುಜಿಸಿ) ಪ್ರತಿನಿಧಿಯನ್ನು ನಾಮನಿರ್ದೇಶನ ಮಾಡಿಲ್ಲ. ಸಮಿತಿಯಲ್ಲಿ ವಿಟಿಯುಗೆ ಸಂಬಂಧಿಸಿದವರೇ ಇಬ್ಬರು ಸದಸ್ಯರು ಇದ್ದರು. ನಿಯಮದಂತೆ ಆ ರೀತಿ ಯಾವ ವಿಶ್ವವಿದ್ಯಾಲಯಕ್ಕೆ ಕುಲಪತಿ ನೇಮಕ ಮಾಡಲಾಗುತ್ತದೆಯೋ ಅದೇ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದವರು ಸಮಿತಿಯಲ್ಲಿ ಇರುವಂತಿಲ್ಲ' ಎಂದು ಅರ್ಜಿದಾರರು ವಾದಿಸಿದ್ದರು.
ಯುಜಿಸಿ ನಿಯಮಗಳು ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕಾಯಿದೆಯ ಸೆಕ್ಷನ್ 13ಕ್ಕೆ ವಿರುದ್ಧವಾಗಿ ವಿದ್ಯಾಶಂಕರ್ ಅವರನ್ನು ವಿಟಿಯು ಕುಲಪತಿಯನ್ನಾಗಿ ನೇಮಕ ಮಾಡಲಾಗಿದೆ. ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಮತ್ತು ಯುಜಿಸಿಗೆ ಅರ್ಹತೆ ಮತ್ತು ಪ್ರಾಮಾಣಿಕತೆ ಹೊಂದಿರುವ ವ್ಯಕ್ತಿಯನ್ನು ವಿಟಿಯುಗೆ ಕುಲಪತಿಯನ್ನಾಗಿ ನೇಮಕ ಮಾಡುವಂತೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.












Click it and Unblock the Notifications